ವಿಭಿನ್ನ ಕಥಾಯಾಧಾರಿತ ಮಿಸ್ಟರ್ ರಾಣಿ ಚಲನಚಿತ್ರವು ಫೆಬ್ರವರಿ 7ರಂದು ರಾಜ್ಯಾದ್ಯಂತ ಕೆಆರ್ಜಿ ಫಿಲ್ಮಸ್ನಿಂದ ಬಿಡುಗಡೆಗೊಳ್ಳಲಿದ್ದು, ಚಿತ್ರ ರಸಿಕರು ಚಿತ್ರಮಂದಿರದಲ್ಲೇ ಚಲನಚಿತ್ರ ವೀಕ್ಷಿಸುವಂತೆ ನಾಯಕ ನಟ ದೀಪಕ್ ಸುಬ್ರಮಣ್ಯ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕ ನಟನಾಗಿ ಸುಮಾರು 11 ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಪ್ರಸ್ತುತ ಲಕ್ಷ್ಮಿನಿವಾಸ ಧಾರವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹಾಗೂ ಮಿಸ್ಟರ್ ರಾಣಿ ಚಲನಚಿತ್ರದಲ್ಲಿ 40 ಮಹಿಳಾ ಗೆಟಪ್ಗಳಲ್ಲಿ ಕಾಣಿಸುವುದಾಗಿ ತಿಳಿಸಿದರು.
ಮಿಸ್ಟರ್ ರಾಣಿ ಚಲನಚಿತ್ರವನ್ನು ಮಧುಚಂದ್ರ ನಿರ್ದೇಶಿಸಿದ್ದು, ರಾಜ್ಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಎಕ್ಸೆಲ್ ಆರ್ಬಿಟ್ ಕ್ರಿಯೇಶನ್ಸ್ ನಿರ್ಮಾಣದ ಚಲನಚಿತ್ರಕ್ಕೆ 180 ಮಂದಿ ಜನಸಾಮಾನ್ಯರೇ ನಿರ್ಮಾಪಕರಾಗಿ 4.5 ಕೋಟಿ ರೂ ಹಣ ಹೂಡಿದ್ದಾರೆ ಎಂದರು.
ನಾಯಕಿಯಾಗಿ ಪಾರ್ವತಿ ನಾಯರ್ ಅಭಿನಯಿಸಿದ್ದು, ಲಕ್ಷ್ಮಿಕಾರಂತ್, ಶ್ರೀವತ್ಸ, ಮಧುಚಂದ್ರ, ಆನಂದ್ ನಿಸಾಂ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರದ ಕ್ಯಾಮೆರಮನ್ ಆಗಿ ಬಾಹುಬಲಿ ಖ್ಯಾತಿಯ ರವೀಂದ್ರನಾಥ್ ಹಾಗೂ ವಿಶ್ವಾಸ್ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಚಲನಚಿತ್ರ ಪ್ರದರ್ಶನಕ್ಕೆ ಇತರೆ ರಾಜ್ಯಗಳಲ್ಲಿ ಕಡಿಮೆ ಬೆಲೆಯಿದ್ದು, ಕರ್ನಾಟಕದಲ್ಲಿ ಪ್ರದರ್ಶನ ಬೆಲೆ ಹೆಚ್ಚಿದೆ ಎಂದು ದೂರುಗಳಿರುವುದರಿಂದ ಬಿಡುಗಡೆಯ ದಿನವಾದ ಫೆಬ್ರವರಿ 7 ರಂದು ಪ್ರದರ್ಶನದ ಟಿಕೆಟ್ ಬೆಲೆಯನ್ನು 99 ರೂ.ಗಳಿಗೆ ನೀಡಲಾಗುವುದು ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಗೋಷ್ಠಿಯಲ್ಲಿ ಚಿತ್ರತಂಡದ ಸಿದ್ದು, ಚಂದ್ರಕಾಂತ್ ಹಾಗೂ ವಿನೋದ್ ಉಪಸ್ಥಿತರಿದ್ದರು.




