ನಾಯಿಗಳು ಅಟ್ಟಾಡಿಸಿಕೊಂಡು ಬಂದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು ರೈಲ್ವೇ ಹಳಿಯನ್ನು ದಾಟಲೆತ್ನಿಸಿದಾಗ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಹೊಸಬೂದನರು ಬಳಿ ಸಂಭವಿಸಿದೆ.
ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ 17 ಕುರಿಗಳು ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ.
ಜಯಮ್ಮ ಅವರು ಬಯಲಿನಲ್ಲಿ ಕುರಿ ಮಂದೆಯನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಸುದ್ದಿ ತಿಳಿದ ಶಾಸಕ ಪಿ.ರವಿಕುಮಾರ್‌ಗೌಡ ಅವರು ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ಜಯಮ್ಮ ಅವರಿಗೆ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.




