Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕಾಂಗ್ರೆಸ್ – ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾದ ಮನ್ಮುಲ್ ಚುನಾವಣೆ

ಸಾಕಷ್ಟು ಕುತೂಹಲ ಮೂಡಿಸಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮನ್ ಮುಲ್)ದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ಫೆ.2 ರಂದು ಭಾನುವಾರ ಮಂಡ್ಯನಗರದ ಮೈಷುಗರ್ ಶಾಲೆ ಆವರಣದಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮನ್ಮುಲ್ ಅಧಿಕಾರ ಹಿಡಿಯುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟಕ್ಕೂ ಸವಾಲೆನಿಸಿದೆ.

ಮನ್ ಮುಲ್ ಅಧಿಕಾರವನ್ನು ಶತಾಯಗತಾಯ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಹಾಕಲು ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮನ್ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯನ್ನು ಹಣಿಯವುದು ಅವರ ಗುರಿಯಾಗಿದ್ದು,ಅದಕ್ಕಾಗಿ ತಂತ್ರಗಾರಿಕೆ ರೂಪಿಸಿದ್ದಾರೆ.

ಕುತೂಹಲ

ಮಂಡ್ಯ ತಾಲ್ಲೂಕಿನಲ್ಲಿ 3 ನಿರ್ದೇಶಕ ಸ್ಥಾನಗಳಿಗೆ 5 ಮಂದಿ ಕಣದಲ್ಲಿದ್ದಾರೆ.ಜೆಡಿಎಸ್ ಬೆಂಬಲಿತರಾಗಿ ಹಾಲಿ ನಿರ್ದೇಶಕರಾದ ಬಿ.ಆರ್.ರಾಮಚಂದ್ರ, ಎಂ.ಎಸ್. ರಘುನಂದನ್ ಹಾಗೂ ವಿಜಯಕುಮಾ‌ರ್ ಕಣದಲ್ಲಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹಾಲಿ ನಿರ್ದೇಶಕ ಯು.ಸಿ.ಶಿವಕುಮಾ‌ರ್ (ಉಮ್ಮಡಹಳ್ಳಿ ಶಿವಪ್ಪ) ಹಾಗೂ ಕೆಬ್ಬಳ್ಳಿ ಕೆ.ರಾಜು ಕಣದಲ್ಲಿದ್ದಾರೆ.

ತಾಲೂಕಿನಲ್ಲಿ 196 ಹಾಲು ಉತ್ಪಾದಕರ ಸಹಕಾರ ಸಂಘಗಳು ಮತದಾನದ ಹಕ್ಕು ಪಡೆದಿವೆ. ಹಾಲಿ ನಿರ್ದೇಶಕರಾದ ಬಿ. ಆರ್. ರಾಮಚಂದ್ರ, ಎಂ.ಎಸ್‌. ರಘುನಂದನ್ ಹಾಗೂ ಯು.ಸಿ. ಶಿವಕುಮಾರ್ ಅವರು ಮತ್ತೊಮ್ಮೆ ಆಯ್ಕೆಯಾಗಲು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ.

ಸಚಿವರಿಗೆ ಪ್ರತಿಷ್ಠೆ

ನಾಗಮಂಗಲ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಧಿಕಾರ ಹಿಡಿಯುವುದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ನಾಗಮಂಗಲ ತಾಲೂಕಿನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಹಾಗೂ ಲಕ್ಷ್ಮೀನಾರಾಯಣ್ ಅವರನ್ನು ಗೆಲ್ಲಿಸಿ ಕೊಂಡು ಬರಲು ತಂತ್ರಗಾರಿಕೆ ಹೆಣೆದಿದ್ದಾರೆ. ಮಾಜಿ ಶಾಸಕ ಸುರೇಶ್ ಗೌಡ ಕೂಡ ಜೆಡಿಎಸ್ ಅಭ್ಯರ್ಥಿಗಳಾದ ಹಾಲಿ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ದೇವೇಗೌಡ ಅವರನ್ನು ಗೆಲ್ಲಿಸಿಕೊಂಡು ಸಚಿವರಿಗೆ ತಿರುಗೇಟು ನೀಡಲು ಹೊರಟಿದ್ದಾರೆ.

ನಾಗಮಂಗಲ ತಾಲೂಕಿನಲ್ಲಿ 231 ಹಾಲು ಉತ್ಪಾದಕರ ಸಂಘಗಳು ಮತದಾನದ ಹಕ್ಕು ಹೊಂದಿದ್ದು, ಯಾರ ಪ್ರತಿಷ್ಠೆ ಮೇಲಾಗುವುದೋ ಎಂಬುದು ಕುತೂಹಲ ಮೂಡಿಸಿದೆ.

ಶಾಸಕರಿಗೆ ಟಾಂಗ್

ಮನ್ಮುಲ್ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿರುವ ಮತ್ತೊಂದು ಕ್ಷೇತ್ರ ಕೆ.ಆರ್. ಪೇಟೆ. ಶಾಸಕ ಎಚ್.ಟಿ. ಮಂಜು ವಿರುದ್ಧ ಸೆಡ್ಡು ಹೊಡೆದಿರುವ ಹಾಲಿ ನಿರ್ದೇಶಕ ಡಾಲು ರವಿ ಹಾಗೂ ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ. ಹರೀಶ್ ಕಣದಲ್ಲಿರುವುದು ಶಾಸಕರಿಗೆ ನುಂಗಲಾರದ ತುತ್ತಾಗಿದೆ.

ಶಾಸಕ ಎಚ್.ಟಿ. ಮಂಜು ಜೊತೆ ಆತ್ಮೀಯರಾಗಿದ್ದ ಡಾಲು ರವಿ ಅವರಿಂದ ದೂರವಾಗಿ ಅವರ ವಿರುದ್ಧವೇ ಕಣಕ್ಕಿಳಿದಿರುವುದು ಭಾರೀ ಸಂಚಲನ ಮೂಡಿಸಿದೆ. ಜೆಡಿಎಸ್ ಬೆಂಬಲಿತ ಎಸ್.ಮಹೇಶ್ ಕಣದಲ್ಲಿದ್ದಾರೆ. ಶಾಸಕ ಎಚ್.ಟಿ.ಮಂಜುಗೆ ಟಾಂಗ್ ನೀಡಲು ಹೊರಟಿರುವ ಕಾರಣಕ್ಕಾಗಿ ಈ ಕ್ಷೇತ್ರ ಸಾಕಷ್ಟು ಕುತೂಹಲ ಮೂಡಿಸಿದೆ. 204 ಹಾಲು ಉತ್ಪಾದಕರ ಸಂಘದ ಮತಗಳಿದ್ದು,ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಬಹುದಾಗಿದೆ.

ಒಡಕಿನ ಲಾಭ

ಮದ್ದೂರು ತಾಲೂಕಿನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಒಡಕಿನ ಲಾಭವನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಶಾಸಕ ಕದಲೂರು ಉದಯ್ ಗುರಿ. ಹಾಲಿ ನಿರ್ದೇಶಕರಾಗಿದ್ದ ಎಸ್.ಪಿ. ಸ್ವಾಮಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಆಗಬಹುದೆಂಬ ಲೆಕ್ಕಾಚಾರ ಹುಸಿಯಾಗಿದೆ.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ಸ್ವಾಮಿ ಮತ್ತೆ ಮನ್ಮುಲ್ ನಿರ್ದೇಶಕರಾಗುವುದು ಮಾಜಿ ಸಚಿವ ಡಿ. ಸಿ. ತಮ್ಮಣ್ಣನವರಿಗೆ ಬೇಡವಾದ ಕಾರಣಕ್ಕೆ ಮತ್ತೊಬ್ಬ ಹಾಲಿ ನಿರ್ದೇಶಕಿ ಎಂ.ರೂಪ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.

ಇದರಿಂದ ಎಸ್.ಪಿ.ಸ್ವಾಮಿ ಬಂಡಾಯವಾಗಿ ಕಣಕ್ಕಿಳಿದಿದ್ದು,ಎಸ್.ಮಹೇಶ್ ಮತ್ತೋರ್ವ ಎನ್‌ಡಿಎ ಅಭ್ಯರ್ಥಿ. ಜೆಡಿಎಸ್-ಬಿಜೆಪಿ ಮೈತ್ರಿಯ ಒಡಕಿನ ಲಾಭವನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಳಾದ ಮನ್ಮಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಹಾಗೂ ಎಂ.ಕೆ. ಹರೀಶ್ ಬಾಬು ಗೆಲುವಿಗೆ ಶಾಸಕ ಕದಲೂರು ಉದಯ್ ತಂತ್ರಗಾರಿಕೆ ನಡೆಸಿದ್ದಾರೆ. ಬಿ. ಅನಿಲ್ ಕುಮಾರ್ ಕಣದಲ್ಲಿದ್ದಾರೆ.

ಜಿದ್ದಾಜಿದ್ದಿ

ಮಳವಳ್ಳಿ ತಾಲೂಕಿನಲ್ಲಿ ಒಂದು ನಿರ್ದೇಶಕ ಸ್ಥಾನಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ, ಹಾಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುತ್ತಿಗೆದಾರ ಡಿ.ಕೃಷ್ಣೇಗೌಡ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ.

ಈಗಾಗಲೇ ಎರಡು ಬಾರಿ ಮನ್ಮುಲ್ ನಿರ್ದೇಶಕರಾಗಿರುವ ಎಂ.ವಿಶ್ವನಾಥ್‌ ಮೂರನೇ ಬಾರಿ ಗೆಲ್ಲಲು ತೀವ್ರ ಪೈಪೋಟಿ ನೀಡುತ್ತಿದ್ದಾರೆ. 100 ಹಾಲು ಉತ್ಪಾದಕರ ಸಹಕಾರ ಸಂಘಗಳು ಮತದಾನ ಹಕ್ಕು ಹೊಂದಿವೆ.

ಸಿಎಸ್‌ಪಿಗೆ ಸವಾಲು

ಪಾಂಡವಪುರ ತಾಲೂಕು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ಸವಾಲಿನ ಪ್ರಶ್ನೆಯಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಿಂದ ಗೆದ್ದು ನಿರ್ದೇಶಕರಾಗಿದ್ದ ಕಾಡೇನಹಳ್ಳಿ ರಾಮಚಂದ್ರು ಈಗ ತಮ್ಮ ಎದುರಾಳಿ ಕಾಂಗ್ರೆಸ್ ಪಾಳಯ ಸೇರಿ ಸ್ಪರ್ಧಿಸಿದ್ದಾರೆ. ಇಲ್ಲಿ ಸಿ.ಎಸ್. ಪುಟ್ಟರಾಜುರವರು ತಮ್ಮ ಸಹೋದರನ ಪುತ್ರ ಶಿವಕುಮಾರ್ ಅವರನ್ನು ಕಣಕ್ಕಿಳಿಸಿದ್ದಾರೆ.

ಶಿವಕುಮಾರ್ ಅವರನ್ನು ಗೆಲ್ಲಿಸಿಕೊಂಡು ವಿರೋಧಿ ಪಾಳಯ ಸೇರಿರುವ ಕಾಡೇನಹಳ್ಳಿ ರಾಮಚಂದ್ರು ಅವರನ್ನು ಸೋಲಿಸಲು ಶ್ರಮ ಹಾಕಿದ್ದಾರೆ. 124 ಹಾಲು ಉತ್ಪಾದಕರ ಸಹಕಾರ ಸಂಘಗಳು ಮತದಾನದ ಹಕ್ಕು ಹೊಂದಿದ್ದು,ಸಿ.ಎಸ್‌.ಪುಟ್ಟರಾಜು ಅವರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಗೆಲುವು ಸಲೀಸು

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹಾಲಿ ನಿರ್ದೇಶಕ ಬಿ.ಬೋರೇಗೌಡರದ್ದೇ ಹವಾ. ಇಲ್ಲಿ ಕಿಶೋರ್(ಕಿರಣ್), ಎಚ್‌.ಎಂ. ಪುಟ್ಟಸ್ವಾಮಿಗೌಡ ಕಣದಲ್ಲಿದ್ದರೂ, ಕಾಂಗ್ರೆಸ್ ಬೆಂಬಲಿತ ಬಿ ಬೋರೇಗೌಡರ ಗೆಲುವು ಸಲೀಸು ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ನಿರ್ದೇಶಕ ಸ್ಥಾನವಿದ್ದು, ಕೇವಲ 57 ಹಾಲು ಉತ್ಪಾದಕರ ಸಹಕಾರ ಸಂಘಗಳು ಮತದಾನದ ಹಕ್ಕು ಹೊಂದಿದೆ.

ಒಟ್ಟಾರೆ ಈ ಬಾರಿಯ ಮನ್ಮಲ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಸವಾಲು ಎದುರಾಗಿದ್ದು, ಎನ್‌ಡಿಎ ಮೈತ್ರಿಕೂಟ ಅದರಲ್ಲೂ ಜೆಡಿಎಸ್ ಪಕ್ಷಕ್ಕೆ ಪ್ರತಿಷ್ಟೆ ಪ್ರಶ್ನೆಯಾಗಿದೆ. ಅಭಿವೃದ್ಧಿ ವಿಚಾರಗಳಿಗಿಂತ ಹಣಬಲವೇ ಪ್ರದಾನ ಪಾತ್ರ ವಹಿಸುವ ಮನ್ಮುಲ್ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಪ್ರತಿಷ್ಟೆಯ ಕಣವಾಗಿರುವ ಮನ್ಮುಲ್ ಅಧಿಕಾರ ಈ ಬಾರಿ ಯಾರು ಹಿಡಿಯುವರೋ ಎಂಬ ಕುತೂಹಲ ಮೂಡಿದೆ. ಇದಕ್ಕಾಗಿ ಫೆ.2 ರ ಸಂಜೆಯವರೆಗೆ ಕಾಯಲೇ ಬೇಕಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ