ಮಂಡ್ಯ ಹಾಲು ಒಕ್ಕೂಟದಲ್ಲಿ 11 ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ
ಬಾಡಿಗೆ ಕಟ್ಟಡದಲ್ಲಿರುವ ಹಾಲು ಒಕ್ಕೂಟಗಳಿಗೆ ಸ್ವಂತ ಕಟ್ಟಡ, ನಿವೇಶನಗಳಿಗೆ ಸರ್ಕಾರದ ನೆರವು
ಸದಾ ರೈತರ ಪರವಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಶೀಘ್ರದಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮುಂದಾಗಿದೆ. ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಇನ್ನು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಗಳಿಗಾಗಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೆ. 2 ರಂದು ಒಕ್ಕೂಟದ ಚುನಾವಣೆ ನಡೆಯಲಿದ್ದು, ಜಿಲ್ಲೆಯ 7 ತಾಲೂಕುಗಳಿಂದ 11 ಅಭ್ಯರ್ಥಿಗಳು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಬೆಂಬಲಿಸಿ ಮಂಡ್ಯ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಹಕರಿಸಬೇಕು. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೈನುಗಾರರು, ರೈತ ಮಹಿಳೆಯರ ಪರವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ತಲಾ 5 ರೂ. ಪ್ರೋತ್ಸಾಹಧನವನ್ನು 7 ತಿಂಗಳಿಂದ ನೀಡದೇ ಬಾಕಿ ಉಳಿಸಿಕೊಂಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023-24 ನೇ ಸಾಲಿನಲ್ಲಿ 72.39 ಕೋಟಿ ರೂ. ರೈತರ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿದೆ. 2024-25ರ 56.06 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆ ಮಾಡಲಿದೆ ಎಂದರು.
ಪ್ರೋತ್ಸಾಹಧನ ಶೀಘ್ರ ಹೆಚ್ಚಳ
ಮಂಡ್ಯ ಹಾಲು ಒಕ್ಕೂಟದ ಅಡಿ 1305 ಸಂಘಗಳಿದ್ದು, ಅದರಲ್ಲಿ 1 ಲಕ್ಷ 25 ಸಾವಿರ ಹೈನುಗಾರರು ಸದಸ್ಯತ್ವ ಹೊಂದಿದ್ದಾರೆ. ಪ್ರಸ್ತುತ 96,800 ಹೈನುಗಾರರು ಪ್ರತಿ ದಿನ (ಬೆಳಗ್ಗೆ, ಸಾಯಂಕಾಲ)ಸರಾಸರಿ 10 ಲಕ್ಷ ಕೆಜಿ ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಸರ್ಕಾರ ಪ್ರೋತ್ಸಾಹಧನ ಬಾಕಿ ಹಾಗೂ ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದರಿಂದ ಹೈನೋತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಮಂಡ್ಯ ಹಾಲು ಒಕ್ಕೂಟವು ಪ್ರತಿ ಹತ್ತು ದಿನಗಳಿಗೊಮ್ಮೆ ಪ್ರತಿ ಲೀಟರ್ಗೆ 31 ರೂ.30 ಪೈಸೆ ಹಣವನ್ನು ರೈತರಿಗೆ ಪಾವತಿ ಮಾಡುತ್ತಿದೆ. ಅದರ ಮೇಲೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಧನವನ್ನು ಸರ್ಕಾರ ಹೆಚ್ಚುವರಿಯಾಗಿ ಬಿಡುಗಡೆ ಮಾಡುತ್ತಿದೆ. ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದು, ಶೀಘ್ರದಲ್ಲಿ ಘೋಷಿಸಲಿದ್ದಾರೆ. ಇದರಿಂದ ಹೈನುಗಾರರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
ಹೈನುಗಾರಿಕೆಗೆ ಬೆಂಬಲ
ಮಂಡ್ಯ ಜಿಲ್ಲೆಯಲ್ಲಿ 3 ಲಕ್ಷ 7 ಸಾವಿರ ಹಸು ಮತ್ತು ಎಮ್ಮೆಗಳಿವೆ. ಅವುಗಳಿಗೆ ಕಾಲ, ಕಾಲಕ್ಕೆ ಲಸಿಕೆ, ಉಚಿತ, ಔಷಧ, ಆರೋಗ್ಯ ತಪಾಸಣೆಯನ್ನು ಸರ್ಕಾರ ಮಾಡಿಸುವ ಮೂಲಕ ಸರ್ಕಾರ ರೈತರಿಗೆ ನೆರವಾಗಿದೆ. ಹೈನುಗಾರಿಕೆಗೆ ಬೆಂಬಲ ನೀಡುತ್ತಿದೆ.
ಸ್ವಂತ ಕಟ್ಟಡಕ್ಕೆ ನೆರವು
ನಾಗಮಂಗಲದಲ್ಲಿ-262, ಕೆ.ಆರ್.ಪೇಟೆಯಲ್ಲಿ-251, ಪಾಂಡವಪುರದಲ್ಲಿ-148, ಶ್ರೀರಂಗಪಟ್ಟಣ-71, ಮಳವಳ್ಳಿ-151, ಮದ್ದೂರು-201, ಮಂಡ್ಯ-221 ಸೇರಿ ಒಟ್ಟು 1305 ಹಾಲು ಉತ್ಪಾದಕ ಪ್ರಾಥಮಿಕ ಸಹಕಾರ ಸಂಘಗಳಿವೆ. 817 ಹಾಲು ಉತ್ಪಾದಕ ಸಹಕಾರ ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿವೆ. 23 ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ 83 ಸಂಘಗಳು ಸ್ವಂತ ನಿವೇಶನವನ್ನು ಹೊಂದಿವೆ. 488 ಸಂಘಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಾಗೂ ನಿವೇಶನ ಖರೀದಿಗೆ ಸರ್ಕಾರ ನೆರವು ನೀಡಲು ಬದ್ಧವಾಗಿದೆ ಎಂದು ದಿನೇಶ ಗೂಳಿಗೌಡ ಭರವಸೆ ನೀಡಿದ್ದಾರೆ.




