Saturday, November 21, 2026

ಪ್ರಾಯೋಗಿಕ ಆವೃತ್ತಿ

ಜಾ.ದಳ ಬಲವರ್ಧನೆಗೆ ಚಲುವರಾಯಸ್ವಾಮಿ ಸಲಹೆ ಅಗತ್ಯವಿಲ್ಲ – ರವೀಂದ್ರ ಶ್ರೀಕಂಠಯ್ಯ

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿಗೆ ಬದ್ಧವಾಗದೆ, ನಿಖಿಲ್ ಕುಮಾರಸ್ವಾಮಿ ಸೋಲಿಗೆ ಷಡ್ಯಂತ್ರ ರೂಪಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರು, ಜಾ.ದಳ ಬಲವರ್ಧನೆಗೆ ಸಲಹೆ ನೀಡುವುದು ಅನಗತ್ಯ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಜಾ.ದಳದಲ್ಲಿ ಶಾಸಕ, ಸಂಸದ, ಸಚಿವರಾಗಿ ಕಾರ್ಯನಿರ್ವಹಿಸಿ ರಾಜಕೀಯವಾಗಿ ಉತ್ತುಂಗಕ್ಕೆ ಬೆಳೆಸಿದರೂ ಜಾ.ದಳ ವರಿಷ್ಠರಿಗೆ ಪಕ್ಷನಿಷ್ಠರಾಗಿರಲಿಲ್ಲ ಎಂದು ದೂರಿದರು.

ಜಾಹೀರಾತು

ಮದ್ದೂರು ಶಾಸಕ ಕದಲೂರು ಉದಯ್ ಅವರನ್ನು ವಿಶ್ವಾಸಕ್ಕೆ ಪಡೆಯದೆ ಪಿಡಿಒ ವರ್ಗಾವಣೆ ಹಾಗೂ ಮನ್‌ಮುಲ್ ಅಧಿಕಾರ ಹಿಡಿಯಲು ಬಿಜೆಪಿ ನಿರ್ದೇಶಕ ಎಸ್.ಪಿ. ಸ್ವಾಮಿ ಬೆಂಬಲ ಪಡೆದಿರುವುದು ವಿಶ್ವಾಸದ್ರೋಹವಲ್ಲವೇ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಓರ್ವ ಶಾಸಕ ಹೊರತುಪಡಿಸಿ ಇತರೆ ಕಾಂಗ್ರೆಸ್ ಶಾಸಕರು ಉಸ್ತುವಾರಿ ಸಚಿವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದು, ಇದರ ಫಲಶೃತಿ ಸದ್ಯದಲ್ಲೇ ಬಹಿರಂಗವಾಗಲಿದೆ ಎಂದರು.

ಶಾಸಕರ ಅಧಿಕಾರ ಚಲಾವಣೆಗೆ ಮುಕ್ತ ಅವಕಾಶ ನೀಡದೆ ದ್ರೋಹವೆಸಗಿದ್ದಾರೆ. ಆರಂಭದ ತಿಂಗಳುಗಳಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ನಾಗಮಂಗಲದ ಕೆಎಸ್‌ಆರ್‌ಟಿಸಿ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಲಿ ಎಂಬ ನರೇಂದ್ರಸ್ವಾಮಿ ಹೇಳಿಕೆ ಹಿಂದೆ ಸತ್ಯದ ಅರಿವಿದ್ದು, ಜಿಲ್ಲೆಯ ಯಾವೊಬ್ಬ ಶಾಸಕರು ನೆಮ್ಮದಿಯಾಗಿರಲು ಉಸ್ತುವಾರಿ ಸಚಿವರು ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

ರಮೇಶ್‌ಬಾಬು ವಿರುದ್ಧ ಕಿಡಿ

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಕೆಆರ್‌ಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ದ್ವೇಷ ಸಾಧಿಸುತ್ತಿದ್ದಾರೆ. ವಂಚನೆಗೊಳಗಾದ ಹಂಗಾಮಿ ನೌಕರರು ಅರೆಬೆತ್ತಲೆ ಪ್ರತಿಭಟನೆ ಮಾಡಿದರೂ ಕ್ಯಾರೆ ಎನ್ನದ ಇವರ ಆಡಳಿತ ವೈಖರಿಯನ್ನು ಕ್ಷೇತ್ರದ ಜನ ಗಮನಿಸುತ್ತಿದ್ದಾರೆ. ಸ್ವಗ್ರಾಮ ಅರಕೆರೆಯ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಅಡ್ಡಿಪಡಿಸಿದ್ದರು. ಉಳಿದ ರಸ್ತೆ ಕಾಮಗಾರಿಗೆ ಅಗತ್ಯ ಅನುದಾನ ಹಾಗೂ ಮೂರುವರೆ ಕೋಟಿ ಪರಿಹಾರ ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿಗೆ ಏಕೆ ಮುಂದಾಗಿಲ್ಲ ಹಾಗೂ ಹುಂಜನಕೆರೆ ಸಂಪರ್ಕ ರಸ್ತೆಗೆ ಜಲ್ಲಿ ಬಿಚಾವಣೆಯಾಗಿದ್ದರೂ ಕಾಮಗಾರಿಗೆ ಏಕೆ ತಡೆ ಹಾಕಲಾಗಿದೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದವರಿಂದ ಪಕ್ಷದ ಬಲವರ್ಧನೆ ಬಗ್ಗೆ ಸಲಹೆ ಬೇಕಾಗಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ ಕನಿಕರ ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ, ಯಾರ ಆಶೀರ್ವಾದದಿಂದ, ಯಾವ ಪಕ್ಷದ ಬೆಂಬಲದಿಂದ ರಾಜಕೀಯವಾಗಿ ಬೆಳೆದಿದ್ದೇನೆ ಎಂದು ಅವರು ಅರಿವು ಇಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

ಶಾಸಕ ಎಚ್.ಟಿ. ಮಂಜು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತತ್ವ-ಸಿದ್ಧಾಂತದ ಬೋಧನೆಗೆ ಮುಂದಾಗುತ್ತಾರೆ. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಿದ್ದರು, ಆಗ ಇವರ ತತ್ವ-ಸಿದ್ಧಾಂತ ನೆನಪಾಗಲಿಲ್ಲವೇ? ಉಂಡ ಮನೆಗೆ ದ್ರೋಹ ಬಗೆದು ದಿಕ್ಕು ತಪ್ಪಿಸುವ ಛಾಳಿ ಸರಿಯಲ್ಲ ಎಂದರು.

ಮನ್‌ಮುಲ್ ನಿರ್ದೇಶಕರನ್ನು ವಜಾಗೊಳಿಸಿ ಅಧಿಕಾರ ಹಿಡಿಯಲು ಬಿಜೆಪಿ ಸಖ್ಯ ಮಾಡಿರುವುದು ಕಾಂಗ್ರೆಸ್ಸಿಗರೇ ಹೊರತು ನಾವಲ್ಲ. ನಿಮ್ಮ ದುರಾಡಳಿತದಿಂದ ಕ್ಷೇತ್ರದ ಜನತೆ ಈಗಾಗಲೇ ಪಶ್ಚಾತಾಪ ಪಡುತ್ತಿದ್ದಾರೆ. ಆತ್ಮಹತ್ಯೆ ಪ್ರಯತ್ನದಲ್ಲಿ ನಮ್ಮನ್ನು ಸಿಲುಕಿಸಲು ಪ್ರಯತ್ನಿಸಿದ್ದೀರಿ, ನಿಮಗೆ ಶಕ್ತಿಯಿದ್ದರೆ ಕುಮಾರಸ್ವಾಮಿ ಹಾಗೂ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.

ಮಾಜಿ ಶಾಸಕ ಕೆ.ಅನ್ನದಾನಿ, ಜಿಲ್ಲಾ ಜಾ.ದಳ ಅಧ್ಯಕ್ಷ ಡಿ.ರಮೇಶ್ ಮಾತನಾಡಿದರು.

ಗೋಷ್ಠಿಯಲ್ಲಿ ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಕೆಎಂಎಫ್ ನಿರ್ದೇಶಕ ವಿಶ್ವನಾಥ್, ನಿರ್ದೇಶಕರಾದ ಕೋಟಿ ರವಿ, ನೆಲ್ಲಿಗೆರೆ ಬಾಲು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ