ಹಣಕಾಸಿನ ವ್ಯವಹಾರದ ನಡೆಯುತ್ತಿದ್ದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸ್ವತಃ ಸಹೋದರ (ತಮ್ಮ)ನನ್ನೇ ಅಣ್ಣನಾದ ವ್ಯಕ್ತಿ, 5 ಲಕ್ಷ ರೂ.ಗಳಿಗೆ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣವನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಬೇಧಿಸಿದ್ದಾರೆ.
ಈ ಕುರಿತು ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು, ಕಳೆದ ಜ.11ರಂದು ಮುಂಜಾನೆ ಮದ್ದೂರು ತಾಲ್ಲೂಕಿನ ಲಕ್ಷ್ಮೇಗೌಡನ ದೊಡ್ಡಿಯ ಕೃಷ್ಣೇಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ಸ್ವತಃ ಅಣ್ಣ ಶಿವರಾಮೇಗೌಡ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಚಂದ್ರಶೇಖರ್ (41) ಬಿನ್ ಲೇಟ್ ಸ್ವಾಮಿಯಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಈ ಕೊಲೆ ಪ್ರಕರಣದಲ್ಲಿ ಸುನೀಲ್.ಬಿ. ಬಿನ್ ಬೋರೇಗೌಡ (28), .ಪಿ. ಉಲ್ಲಾಸ್ ಗೌಡ ಆಲಿಯಾಸ್ ಸಂಜು ಬಿನ್ ಪ್ರಕಾಶ್ (25), ಪ್ರತಾಪ.ಎ.ಎಂ.ಬಿನ್ ಲೇಟ್ ಮರಿಯಯ್ಯ (26), ಕೆ.ಎಂ. ಅಭಿಷೇಕ್ ಬಿನ್ ಲೇಟ್ ಮರಿಯಪ್ಪ( 24), ಕೆ.ಶ್ರೀನಿವಾಸ ಬಿನ್ ಲೇಟ್ ಕೃಷ್ಣಪ್ಪ(31) ಹಾಗೂ ಹೆಚ್.ಹನುಮೇಗೌಡ ಅಲಿಯಾಸ್ ಹರ್ಷ ಬಿನ್ ಹನುಮೇಗೌಡ (31) ಭಾಗಿಯಾಗಿದ್ದಾರೆ ಬಾಯ್ಬಿಟ್ಟಿದ್ದು, ಈ ಎಲ್ಲಾ ಆರೋಪಿಗಳು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಘಟನೆ ವಿವರ
ಕೊಲೆಯಾದ ಕೃಷ್ಣೇಗೌಡ ತುಂಬಾ ಸಾಲ ಮಾಡಿಕೊಂಡಿದ್ದ. ಹಾಗಾಗಿ ಈ ಸಾಲವನ್ನು ಮೃತನ ಸ್ವಂತ ಅಣ್ಣ ಶಿವನಂಜೇಗೌಡ ಆಲಿಯಾಸ್ ಗುಡ್ಡಪ್ಪ ತೀರಿಸಿದ್ದ. ಇದಕ್ಕೆ ಪ್ರತಿಯಾಗಿ ಕೃಷ್ಣೇಗೌಡ ತನ್ನ ಜಮೀನನ್ನು ಶಿವನಂಜೇಗೌಡನ ಪತ್ನಿಯ ಹೆಸರಿಗೆ ಮಾಡಿಕೊಟ್ಟಿದ್ದ. ಆದರೆ ಜಮೀನನ್ನು ಅವರ ವಶಕ್ಕೆ ಬಿಡದೇ, ಕೃಷ್ಣೇಗೌಡ ತನ್ನ ಅಕ್ಕ ತಂಗಿಯರನ್ನು ಪುಸಲಾಯಿಸಿ ಶಿವನಂಜೇಗೌಡನ ವಿರುದ್ಧ ಜಮೀನು ವಿಚಾರದಲ್ಲಿ ಕೇಸು ಹಾಕಿಸಿದ್ದ. ಅಲ್ಲದೇ ಶಿವನಂಜೇಗೌಡನಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿಕೊಂಡು ತಿರುಗುತ್ತಿದ್ದ. ಇದರಿಂದ ಕುಪಿತಗೊಂಡ ಶಿವನಂಜೇಗೌಡ 5 ಲಕ್ಷ ರೂಪಾಯಿಗೆ ಕೃಷ್ಣಗೌಡನನ್ನು ಕೊಲೆ ಮಾಡಲು ಸುಫಾರಿ ನೀಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳ ಪತ್ತೆಗೆ ಮಂಡ್ಯ ಜಿಲ್ಲಾ ಅಪರ ಪೋಲೀಸ್ ಅಧೀಕ್ಷರಾದ ಸಿ.ಇ ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ-ವಿಭಾಗದ ಡಿವೈಎಸ್.ಪಿ. ವಿ ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪಿ.ಐ ಎಸ್.ಆನಂದ್, ಹೆಡ್ ಕಾನ್ಸ್ ಟೇಬಲ್ಗಳಾದ ನಟರಾಜು, ಮಹೇಶ್, ರಾಜಶೇಖರ್, ರಾಜೇಂದ್ರ, ಶ್ರೀಕಾಂತ್, ಪೊಲೀಸ್ ಕಾನ್ಸ್ ಟೇಬಲ್ಗಳಾದ ವಿಠಲ್ ಜಿ. ಕರಿಗಾರ, ಅರುಣ್, ಶ್ರೀಕಾಂತ್, ಅನಿಲ್ ಕುಮಾರ್, ಕೌಶಿಕ್, ಚಿರಂಜೀವಿ, ವಿಷ್ಣುವರ್ಧನ, ಕಿರಣ್ ಕುಮಾರ್, ರವಿಕಿರಣ್, ಲೊಕೇಶ್ ಮತ್ತು ವಾಸುದೇವ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೋಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘಿಸಿ ಪ್ರಶಂಸಿಸಿದ್ದಾರೆ.




