ಮಂಡ್ಯ ನಗರಸಭೆ ವತಿಯಿಂದ 1 ಕೋಟಿ ರೂ ವೆಚ್ಚದಲ್ಲಿ ಮಂಡ್ಯ ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಗ್ರೀನ್ ಮ್ಯಾಟ್ ಕ್ರೀಡಾಂಗಣದ ಕಾಮಗಾರಿಗೆ ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕ ಗಣಿಗ ರವಿಕುಮಾರ್ ಅವರ ಪ್ರಯತ್ನದಿಂದ ಕ್ರೀಡಾಂಗಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿದೆ.ಮಂಡ್ಯದ ಸಮಗ್ರ ಅಭಿವೃದ್ಧಿಗೆ ಶಾಸಕರು ಮುಂದಾಗಿದ್ದು,ಅವರ ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು.
ಶಾಸಕ ಪಿ. ರವಿಕುಮಾರ್ ಗಣಿಗ ಅವರು ಮಾತನಾಡಿ, ಕ್ರೀಡಾಪಟುಗಳಿಗೆ ಹಾಗೂ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಪ್ರೋತ್ಸಾಹಿಸಲು ಗ್ರೀನ್ ಮ್ಯಾಟ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ ಎಂದರು.
ಕ್ರೀಡಾಂಗಣದಲ್ಲಿ ವಿವಿಧ ರೀತಿಯ ಕ್ರೀಡೆಗಳಾದ ವಾಲಿಬಾಲ್, ಥ್ರೋ ಬಾಲ್, ಕ್ರಿಕೆಟ್ ಮೊದಲಾದ ಕ್ರೀಡೆಗಳನ್ನು ಆಡಬಹುದು. ಇಂತಹ ಕ್ರೀಡಾಂಗಣ ಬೆಂಗಳೂರಿನಲ್ಲಿದ್ದು, ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ. 3 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಕೃಷಿ ಸಚಿವರಿಂದಲೇ ಉದ್ಘಾಟಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಎಂ.ಟಿ. ಅರುಣ್ ಕುಮಾರ್,ಸದಸ್ಯರಾದ ಹೆಚ್.ಎಸ್.ಮಂಜು,ಪೂರ್ಣಿಮಾ, ಶ್ರೀಧರ್,ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಎಂ.ಕೃಷ್ಣ, ದೊಡ್ಡಯ್ಯ, ಬಿ.ಪಿ. ಪ್ರಕಾಶ್,ಅಭಿಷೇಕ್, ಮಹೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.




