ಕಡೆ ಭಾಗದ ಗದ್ದೆಗೆ ನೀರು ಹರಿಸದೇ ನಿಲ್ಲಿಸಿದ ಅಧಿಕಾರಿಗಳ ಕ್ರಮ ಖಂಡಿಸಿ ರೈತರೇ ನೀರು ಬಿಡುಗಡೆಗೊಳಿಸಿದ ಘಟನೆ ಮಂಡ್ಯ ತಾಲ್ಲೂಕಿನ ತುಂಬಕೆರೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 9 ಗಂಟೆಯಲ್ಲಿ ನಡೆದಿದೆ.
ಕೆ.ಆರ್.ಸಾಗರ ಜಲಾಶಯದಿಂದ ಕಟ್ಟು ಪದ್ದತಿಯಲ್ಲಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ತುಂಬಕೆರೆ ಬಳಿಯಿಂದ ಹರಿಯುವ 18ನೇ ಸೀಳು ನಾಲೆಯ ಕಡೇಭಾಗದ ಗ್ರಾಮಗಳಾದ ಕಾಗೆಹಳ್ಳದದೊಡ್ಡಿ, ಕನ್ನಲಿ, ಅಂಬರಹಳ್ಳಿ ಹಾಗೂ ಬಿ.ಯರಹಳ್ಳಿ ಗ್ರಾಮ ವ್ಯಾಪ್ತಿಯ ಗದ್ದೆಗಳಿಗೆ ಕೇವಲ 2 ದಿನ ಹರಿಸಿ ನೀರು ನಿಲ್ಲಿಸಿದ್ದಾರೆ, ಇದರಿಂದ ಎಲ್ಲ ರೈತರ ಗದ್ದೆಗಳಿಗೆ ನೀರು ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಭಾಗಕ್ಕೆ ನೀರು ಹರಿಸದೇ ಮದ್ದೂರು ನಾಲೆಗೆ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ತುಂಬಕೆರೆ ನೀರು ನಿಯಂತ್ರಣ ಕೇಂದ್ರದ ಬಳಿ ತೆರಳಿ ಅಧಿಕಾರಿಗಳ ವಿರುದ್ದ ಹರಿಹಾಯ್ದ ರೈತರು ನೀರುಗಂಟಿಗಳಿಂದ ನೀರು ಬಿಡುಗಡೆ ಉಪಕರಣ ಪಡೆದು ನೀರು ಬಿಡುಗಡೆ ಮಾಡಿಕೊಂಡರು.
ಕೊನೆ ಭಾಗದವರೆಗೆ ನೀರು ಹರಿಯುವ ಬಗ್ಗೆ ಪರಿಶೀಲಿಸದೆ ಕೈಗೊಂಡಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ನಾಲೆ ಬಳಿ ಬಾರದೇ ಈ ರೀತಿ ಅಧ್ವಾನವಾಗಿದೆ ಎಂದು ಮುಖಂಡ ಬಿ.ಯರಹಳ್ಳಿ ಉಮೇಶ್ ಆರೋಪಿಸಿದರು.
ಈ ವೇಳೆ ನಾಗರಾಜು, ಚನ್ನಪ್ಪ, ಶಿವರಾಮು, ಚಂದ್ರಣ್ಣ, ರಾಘು, ಆತ್ಮ ಮೊದಲಾದವರಿದ್ದರು.




