Monday, November 23, 2026

ಪ್ರಾಯೋಗಿಕ ಆವೃತ್ತಿ

ಪಿಕಾರ್ಡ್ ಬ್ಯಾಂಕುಗಳ ಸಾಲ ಮರುಪಾವತಿ ; 2 ತಿಂಗಳ ಹೆಚ್ಚುವರಿ ಕಾಲಾವಕಾಶಕ್ಕೆ ಮನವಿ

ರಾಜ್ಯದಾದ್ಯಂತ ಪಿಕಾರ್ಡ್ ಬ್ಯಾಂಕಿನವರು ರೈತರು ಪಡೆದ ಸಾಲವನ್ನು ಮಾರ್ಚ್ ಅಂತ್ಯದ ವೇಳೆಗೆ ಕಡ್ಡಾಯವಾಗಿ ಪಾವತಿಸುವಂತೆ ನೋಟೀಸ್ ನೀಡುತ್ತಿರುವುರಿಂದ ರೈತ ಸದಸ್ಯರುಗಳಿಗೆ ತೊಂದರೆಯುಂಟಾಗುತ್ತಿದ್ದು, ಕಾಲಮಿತಿಯೊಳಗೆ ಸಾಲವನ್ನು ಪಾವತಿಸದಿದ್ದಲ್ಲಿ ಸುಸ್ತಿದಾರರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ 2 ತಿಂಗಳ ಹೆಚ್ಚುವರಿ ಕಾಲಾವಕಾಶಕ್ಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಪಿಕಾರ್ಡ್ ಬ್ಯಾಂಕ್ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಗಳು ತಾಲ್ಲೂಕು ಮಟ್ಟದ ಸಹಕಾರ ಸಂಘಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಆಯಾಯ ತಾಲ್ಲೂಕಿನ ರೈತ ಸದಸ್ಯರುಗಳಿಗೆ ದೀರ್ಘಾವದಿ, ಮಧ್ಯಮಾವಧಿ ಹಾಗೂ ಅಲ್ಪಾವಧಿ ಸಾಲಗಳನ್ನು ಸ್ವಾತಂತ್ರ್ಯ ಪೂರ್ವದಿಂದಲೂ ನೀಡುತ್ತಾ ಬಂದಿದೆ.  ಅದೇ ರೀತಿ ಈ ಸಾಲಗಳನ್ನು ಕಾಲಮಿತಿಯೊಳಗೆ ವಸೂಲಿ ಮಾಡುತ್ತಾ ಬಂದಿದೆ. ಆದರೆ ಪ್ರಸ್ತುತ ದೀರ್ಘಾವದಿ ಸಾಲಗಳನ್ನು ನೀಡುವ ಬ್ಯಾಂಕುಗಳು ಅರ್ಧವಾರ್ಷಿಕ ಸಾಲದ ಕಂತುಗಳನ್ನು ವಸೂಲು ಮಾಡುತ್ತಿದ್ದು ಅದರಂತೆ ಸೆಪ್ಟೆಂಬರ್ ಹಾಗೂ ಮಾರ್ಚ್ ತಿಂಗಳಲ್ಲಿ ಸಾಲ ವಸೂಲಿ ಮಾಡುತ್ತಾ ಬಂದಿವೆ. ಈ ಪ್ರಕಾರವಾಗಿ ಮಾರ್ಚ್ ಅಂತ್ಯಕ್ಕೆ ಸಾಲ ಪಾವತಿಸಲಾಗದವರು ಸಾಲವನ್ನು ಮರುಪಾವತಿ ಮಾಡಿ ಶೇ 3% ರ ಬಡ್ಡಿಯ ಸೌಲಭ್ಯವನ್ನು ಪಡೆಯುತ್ತಿರುತ್ತಾರೆ. ಆದರೆ ಈ ಬಾರಿ ಬ್ಯಾಂಕಿನವರು ಮಾರ್ಚ್ ಅಂತ್ಯಕ್ಕೆ ಪೂರ್ಣ ಸಾಲವನ್ನು ಕಡ್ಡಾಯವಾಗಿ ಮರುಪಾವತಿಸುವಂತೆ ಆಗ್ರಹಿಸಿ ಬ್ಯಾಂಕಿನ ಪ್ರಕಟಣಾ ಫಲಕದಲ್ಲಿ ನೋಟಿಸ್ ಗಳನ್ನು ಪ್ರಕಟಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ಸಾಲಗಾರ ಸದಸ್ಯರುಗಳಿಗೆ ಅಂಚೆಯ ಮೂಲಕ ನೋಟಿಸ್ ಗಳನ್ನು ನೀಡುವುದಲ್ಲದೇ ಸಾಲಗಾರರ ಮನೆಗಳಿಗೆ ತೆರಳಿ ನೋಟೀಸನ್ನು ಜಾರಿಗೊಳಿಸಿರುತ್ತಾರೆ. ಬ್ಯಾಂಕಿನ ಸಾಲವಸೂಲಾತಿ ದೃಷ್ಟಿಯಿಂದ ಈ ಕ್ರಮ ಸರಿಯಾದುದ್ದೇ ಆದರೂ ರೈತರು ಈ ಬಾರಿ ಸಾಲವನ್ನು ಪಾವತಿಸಲು ಹಣವನ್ನು ಹೊಂದಾಣಿಕೆ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಕಬ್ಬು ಕಾರ್ಖಾನೆಗಳಿಗೆ ರೈತರು ಬೆಳೆದ ಕಬ್ಬನ್ನು ಮಾರಾಟ ಮಾಡಿದರೂ ನಿಯಮದ ರೀತ್ಯಾ 14 ದಿನಗಳಲ್ಲಿ ಹಣವನ್ನು ಪಾವತಿ ಮಾಡದೇ ತಿಂಗಳುಗಟ್ಟಲೇ ವಿಳಂಬ ಮಾಡುತ್ತಿರುತ್ತಾರೆ. ಆದ್ದರಿಂದ 2 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ