ಸ್ಥಳೀಯ ಸಂಸ್ಥೆ ಚುನಾವಣೆ (ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ) ಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಬೀಳುವ ಸಂಭವವಿರುವುದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರವಿಕುಮಾರ್ ಗಣಿಗ, ಈಗಿನಿಂದಲೂ ಸಿದ್ದತೆಗಳನ್ನು ಆರಂಭಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರೊಂದಿಗೆ ಮಂಡ್ಯ ನಗರದ ಗುತ್ತಲು ಬಡಾವಣೆಯ ಖಾಸಗಿ ಸಮುದಾಯ ಭವನದಲ್ಲಿ ಇಂದು ಸಭೆ ನಡೆಸಿ ಪಕ್ಷ ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದರು.
ಜನಾನೂರಾಗಿಗಳಿಗಷ್ಟೇ ಅವಕಾಶ
ಮುಂಬರುವ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಲು ಸಂಕಲ್ಪ ಮಾಡುವ ಉದ್ದೇಶದಿಂದ ಸಂಘಟನೆಯನ್ನು ಬಲಗೊಳಿಸಬೇಕು. ಸ್ಥಳೀಯ ಜನರೊಟ್ಟಿಗೆ ಸಂಘಟನೆ ಯಲ್ಲಿ ತೊಡಗಿರುವ ಜನಾನೂರಾಗಿ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುವುದು, ಅದನ್ನು ಹೊರತುಪಡಿಸಿ ಶಿಫಾರಸ್ಸು ಅಥವಾ ನಾಯಕರ ಹಿಂದೆ ಓಡಾಡಿಕೊಂಡು ಇರುವವರಿಗೆ ಅವಕಾಶ ಕಲ್ಪಿಸುವುದಿಲ್ಲ ಇದನ್ನು ಅರ್ಥೈಸಿಕೊಂಡು ಬೂತ್ ಮಟ್ಟದ ಸಂಘಟನೆಗೆ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದರು.
ಜನಪರ ಯೋಜನೆಗಳು ಸಾಕಾರ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪಿ.ರವಿಕುಮಾರ್, ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಜನಪರ ಯೋಜನೆಗಳನ್ನು ಸಾಕಾರಗೊಳಿಸಿದೆ ಎಂದು ತಿಳಿಸಿದರು.
ಬಹಳಷ್ಟು ಜನರ ಬೇಡಿಕೆಯಾಗಿದ್ದ ಬಿ ಖಾತಾ ಆಂದೋಲನವನ್ನು ಸರ್ಕಾರ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಅದರಂತೆ ಮಂಡ್ಯನಗರ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಪ್ರತಿ ಮನೆ – ಮನೆಗೆ ಜಾಗೃತಿ ಪತ್ರ ನೀಡುವ ಮೂಲಕ ಇ- ಖಾತಾ ಆಂದೋಲನ ಯಶಸ್ಸಿಗೆ ಶ್ರಮಿಸಬೇಕೆಂದರು.
ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ತಲುಪುತ್ತಿದೆಯೇ ಅಥವಾ ಅಸಹಾಯಕರಿಗೆ ಯಾವ ರೀತಿಯಲ್ಲಿ ಗ್ಯಾರಂಟಿ ಯೋಜನೆ ಲಾಭ ದೊರಕಿಸಿಕೊಡಬೇಕೆಂಬ ನಿಟ್ಟಿನಲ್ಲಿ ಪರಾಮರ್ಶೆ ನಡೆಸಬೇಕೆಂದು ತಿಳಿಸಿದರು.
ಮಂಡ್ಯನಗರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ದಿ, ವೃತ್ತಗಳ ನವೀಕರಣ, ವಿದ್ಯುತ್ ದೀಪ ಅಳವಡಿಕೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆಯ್ದ ಪ್ರಮುಖ ವಾರ್ಡ್ ಗಳಿಗೆ ವಿಶೇಷ ಅನುದಾನ ಸೇರಿದಂತೆ ನಗರ ವ್ಯಾಪ್ತಿಯಲ್ಲಿ 183 ಕೋಟಿ ರೂ. ವೆಚ್ಚದ ಕಾಮಗಾರಿ, ಸಲಕರಣೆ ವಿತರಣೆ ಸೇರಿದಂತೆ ಪ್ರಮುಖ ಅಭಿವೃದ್ದಿಗಳು ನಿರ್ಮಾಣವಾಗುತ್ತಿದ್ದು, ಇದರ ಪ್ರಯೋಜನ ಪಡೆದು ಪಕ್ಷವನ್ನು ಬಲಗೊಳಿಸುವಂತೆ ಶಾಸಕರು ಮನವಿ ಮಾಡಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಮಾಜಿ ಅಧ್ಯಕ್ಷ ಮಂಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಮುಡಾ ಅಧ್ಯಕ್ಷ ನಹೀಮ್, ಮುಖಂಡರಾದ ಶಿವನಂಜು, ಚಿದಂಬರ್, ಗುರು, ಶ್ರೀಧರ್ ಹಾಗೂ ಮಹಾಲಿಂಗು ಸೇರಿದಂತೆ ಹಲವರು ಭಾಗಿಯಾಗಿದ್ದರು.




