Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿ.ವಿ ಉಳಿಸಲು ಎಲ್ಲರೂ ಒಟ್ಟಾಗಿ ಹೋರಾಡಬೇಕು ; ಮಂಜುನಾಥ್

ಮಂಡ್ಯ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸದೇ ಪ್ರತ್ಯೇಕವಾಗಿಯೇ ಮುಂದುವರೆಸುವ ಸಲುವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞರ ಸಭೆ ಕರೆದು ಜಿಲ್ಲೆಯ ಅಸ್ಮಿತೆಯನ್ನು ಉಳಿಸಬೇಕು, ವಿ.ವಿ.ಯ ಉಳಿವಿಗೆ ಎಲ್ಲ ಪಕ್ಷ ಮುಖಂಡರು ಒಗ್ಗೂಡಿ ಹೋರಾಟ ನಡೆಸಬೇಕೆಂದು ಎಂದು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ಒತ್ತಾಯಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ಮಂಡ್ಯದ ವಿಶ್ವ ವಿದ್ಯಾಲಯವು ಪ್ರಗತಿಯತ್ತ ಸಾಗುತ್ತಿದ್ದು, ಅದನ್ನು ಮುಚ್ಚುವ ತೀರ್ಮಾನಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ, ಈ ಪ್ರಯತ್ನವನ್ನು ಕೈಬಿಡುವಂತೆ ಜಿಲ್ಲೆ ಸಚಿವರು, ಶಾಸಕರು, ಹೋರಾಟಗಾರರು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಸರ್ಕಾರದ ಅನುದಾನ ಬಳಕೆಯಾಗುತ್ತಿದ್ದು, ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಅನುದಾನ ಕೊರತೆ ಸೇರಿದಂತೆ ಹಲವು ಕಾರಣಗಳಿಗಾಗಿ ಮುಚ್ಚುವ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ರಾಜ್ಯದ ಸಚಿವರು, ಶಾಸಕರ ಜೊತೆ ಚರ್ಚೆ ಮಾಡಿದ್ದು, ಮಂಡ್ಯ ವಿವಿಯನ್ನು ಉಳಿಸಿಕೊಳ್ಳು ನಿಟ್ಟಿನಲ್ಲಿ ಮುಂದಾಗುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ 9 ವಿಶ್ವವಿದ್ಯಾಲಯಗಳು ಘೋಷಣೆಯಾದ ನಂತರ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯಗಳ ಪೈಕಿ ಮಂಡ್ಯ ವಿವಿಯು ಎರಡನೇ ಸ್ಥಾನದಲ್ಲಿದ್ದು, ಇದನ್ನು ಮುಚ್ಚುವುದು ಏಕೆ ?
ಈ ವಿಚಾರವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಒಗ್ಗಟ್ಟಿನಲ್ಲಿ ಬಿರುಕು ಏಕೆ ? ಸಚಿವರು, ಶಾಸಕರು, ಪರಿಷತ್ ಸದಸ್ಯರು, ಹೋರಾಟಗಾರರನ್ನು ಕರೆತಂದು ಈ ವಿಷಯವಾಗಿ ಚರ್ಚಿಸುವ ನಾಯಕತ್ವ ಇಲ್ಲವಾಗಿರುವುದು ಬೇಸರದ ಸಂಗತಿಯಾಗಿದೆ. ವಿವಿಯನ್ನು ಮಂಡ್ಯದಲ್ಲೇ ಉಳಿಸಿಕೊಳ್ಳಲು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಪರಿಷತ್ ಸದಸ್ಯರು ಮುಂದಾಗದಿರುವುದು ತಲೆ ತಗ್ಗಿಸುವ ಸಂಗತಿ ಎಂದು ಹೇಳಿದರು.

ಈಗಾಗಲೇ ಮಂಡ್ಯ ವಿವಿಯ ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳೊಂದಿಗೆ ಸಭೆ ಮಾಡಿದ್ದು, ಜಿಲ್ಲೆಯ ಸಚಿವರು ಎಲ್ಲಾ ಶಾಸಕರ, ಪರಿಷತ್ ಸದಸ್ಯರ ಹಾಗೂ ಹೋರಾಟಗಾರರ ಸಭೆ ಕರೆದು ಜಿಲ್ಲೆಯ ಅಸ್ಮಿತೆಯನ್ನು ಉಳಿಸುವಂತಹ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹಂತಪ್ಪ, ರಾಜ್ಯ ಸಂಚಾಲಕಿ ದೇವಮ್ಮ, ಕಮ್ಮನಾಯಕನಹಳ್ಳಿ ಮಂಜು, ಸತೀಶ.ಎಂ, ಶಿವಾನಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ