Thursday, November 19, 2026

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರಗಳು ನಿಲ್ಲಲಿ, ಮಾನವೀಯತೆ ನೆಲೆಗೊಳ್ಳಲಿ : ಪಂಜಿನ ಮೆರೆವಣಿಗೆ

ಸರಣಿ ರೂಪದಲ್ಲಿ ದೇಶದಲ್ಲಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಬರ್ಬರ ಅತ್ಯಾಚಾರ,ಕೊಲೆಗಳು ಮತ್ತು ಇದಕ್ಕೆ ಪ್ರತ್ಯುತ್ತರವಾಗಿ ಜವಾಬ್ದಾರಿ ಸ್ಥಾನದಲ್ಲಿ ಇರುವವರ ಬೇಜವಾಬ್ದಾರಿ ಹೇಳಿಕೆಗಳು ಮತ್ತು ನಡೆಗಳನ್ನು ಖಂಡಿಸಿ ಅತ್ಯಾಚಾರ ವಿರೋಧಿ ಆಂದೋಲನ ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಸಂಜೆ ಮಂಡ್ಯದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಮಂಡ್ಯನಗರದ ನಗರಸಭೆ ಆವರಣದಿಂದ ಹೊರಟ ಪಂಜಿನ ಮೆರವಣಿಗೆಯು ವಿವಿ ರಸ್ತೆ, ನೂರಡಿ ರಸ್ತೆ ಹಾಗೂ ಆರ್ ಪಿ ರಸ್ತೆ ಯಲ್ಲಿ ಸಾಗಿ ಸಂಜಯ ವೃತ್ತ ತಲುಪಿತು.

ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಾಜದ ವಿಕೃತ ಮುಖವೂ ಹಿಂದೆದೂ ಇಲ್ಲದಂತೆ ಬಯಲಾಗುತ್ತಾ ಬರುತ್ತಿದೆ.ಅತ್ಯಾಚಾರ -ಲೈಂಗಿಕ ಹಿಂಸಚಾರವೂ ಹೇಯ ಎಂಬ ಅಪರಾದವೂ ದೀರ್ಘ ಕಾಲದಿಂದ ನಮ್ಮ ಸಮಾಜವನ್ನು ಒಳಗಿನಿಂದ ಕೊರೆಯುತ್ತಲೇ ಬರುತ್ತಿದೆ. 2012 ರಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಮತ್ತು ಆ ನಂತರ ಪ್ರಬಲ ಪ್ರತಿಭಟನೆಗಳ ಕಾರಣದಿಂದ ನೇಮಕವಾದ ವರ್ಮಾ ಸಮಿತಿ ಅದರ ವರದಿ,ನಂತರದ ಹೊಸ ಕಾನೂನುಗಳು ಜಾರಿಯಾದ್ದದ್ದು ಇಡೀ ದೇಶವು ಇಂತಹ ಹಿಂಸಚಾರಗಳ ವಿರುದ್ದ ಕಡೆಗೆ ತಿರುಗಿ ನೋಡುವಂತೆ ಮಾಡಿತು.ನಿರ್ಭಯ ಪ್ರಕರಣದ ನಂತರವೂ ಸರಣಿ ರೂಪದಲ್ಲಿ ಕಥುವಾ,ಉನ್ನಾವೋ ಬದೌನಿ ಹೈದರಾಬಾದ್,ಬಿಜಾಪುರ, ಚಿತ್ರದುರ್ಗ,ಬೆಂಗಳೂರು, ಮೈಸೂರು ಮಂಡ್ಯ ಹಾಗೇ ಇನ್ನೂ ಹಲವು ಕಡೆಗಳಲ್ಲಿ ನಡೆಯುತ್ತಲೇ ಬಂದಿರುವ ಅತ್ಯಾಚಾರಗಳು,ಪುಟ್ಟ ಮಕ್ಕಳನ್ನು ವಾರಗಳ ಕಾಲ ಕೂಡಿಟ್ಟು,ಬಲಾತ್ಕರಿಸುವ ಬರ್ಬರತೆ, ಅತ್ಯಾಚಾರದ ಜೊತೆಗೆ ಬಲಿಪಶುಗಳ ಭೀಕರ ಕೊಲೆಗಳು ನಮ್ಮ ರಕ್ತಹೆಪ್ಪುಗಟ್ಟುವಂತೆ ಆತಂಕ ಹುಟ್ಟಿಸಿವೆ.ವಿಶ್ವದ ಅತಿದೊಡ್ಡ ಪ್ರಜಾತಂತ್ರ ಇನ್ನೂ ಮೇಲೆ ಕಾಣುವಷ್ಟು ಪ್ರಜಾತಾಂತ್ರಿಕವಾಗಿಲ್ಲ.ಎಂಬುದನ್ನು ಸಾಬೀತು ಪಡಿಸಿವೆ. ನಿರ್ಭಯ ಪ್ರಕರಣದಿಂದಾಗಿ ಪ್ರಮುಖವಾದ ಕ್ರಿಮಿನಲ್ ಪ್ರೊಸಿಜರ್ ಕೋಡ್ ಗಳಿಗೆ ಪರಿಣಾಮ ಕಾರಿಯಾದ ತಿದ್ದುಪಡಿಗಳನ್ನು ಮಾಡಲಾಯಿತು. ಆದಾಗಿಯೂ ಕೂಡಾ ಬಿಲ್ಕಿಸ್ ಭಾನುವಿನ ಪ್ರಕರಣದ ಅಪರಾಧಿಗಳನ್ನು ಸನ್ನಡತೆಯ ಆದರದಲ್ಲಿ ಸ್ವಾತಂತ್ರ್ಯ ದಿನದಂದೇ ಬಿಡುಗಡೆ ಮಾಡಲಾಗಿತ್ತು ಎಂದು ಖಂಡಿಸಿದರು.

ಧರ್ಮಸ್ಥಳದಲ್ಲಿ ನಡೆದ ಮತ್ತು ನಡೆಯುತ್ತಿರುವ ಅಷ್ಟು ಅತ್ಯಾಚಾರ ಕೊಲೆ ಪ್ರಕರಣಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಿರಪರಾಧಿಯನ್ನು ಅಪರಾಧಿ ಎಂದು ಬಿಂಬಿಸಿ ಜೈಲಿಗಟ್ಟಿದ ಕಾನೂನು ವ್ಯವಸ್ಥೆಯ ಮೇಲೆ ಇವತ್ತಿಗೂ ಜನರಿಗೆ ಅನುಮಾನ ಮತ್ತು ಅಸಮಧಾನ ಇದೆ.420 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬ ಸುದ್ದಿಗಳು ಕೂಡಾ ಇವೆ.ಆ ಎಲ್ಲಾ ಪ್ರಕರಣಗಳಿಗೂ ನ್ಯಾಯ ಸಿಗದಷ್ಟು ದುರ್ಬಲವಾಗಿದೆಯಾ ನಮ್ಮ ಕಾನೂನು ಎಂಬ ಆಕ್ರೋಶ ಬರದೆ ಇರಲು ಸಾಧ್ಯವಿಲ್ಲ. ಉತ್ತರ ಪ್ರದೇಶದ ಉನ್ನಾಂವ್ ನ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಕೋರ್ಟಿಗೆ ಬರುವ ಹಾದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.ಅದೇ ಆರೋಪಿಗಳಿಂದ ಬೆಂಕಿಯಿಡಿಸಿಕೊಂಡು ಸಾವು ಬದುಕಿನ ನಡುವೆ ಹೋರಾಡಿ ಸತ್ತ ಭೀಕರವಾದ ಘಟನೆಯೂ ನಡೆಯಿತು ಎಂದರು.

ಕರ್ನಾಟಕದಲ್ಲಿ ದಾನಮ್ಮಳ ಪ್ರಕರಣ ದೆಹಲಿಯ ನಿರ್ಭಯ ಪ್ರಕರಣವನ್ನು ಹೋಲುವಂತದ್ದು. ದೇಶವೆ ಬೆಚ್ಚಿ ಬೀಳಿಸಿದ ಪ್ರಜ್ವಲ್ ರೇವಣ್ಣನ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರನ್ನೆ ಗುರಿಯಾಗಿಸಿದ ಈ ಹೊಲಸು ರಾಜಕೀಯ ವ್ಯವಸ್ಥೆ. ದೆಹಲಿಯ ಮಹಿಳಾ ಕ್ರೀಡಾ ಪಟುಗಳ ಪ್ರಕರಣ.ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಚಿಂದಿ ಹಾಯುತ್ತಿದ್ದ ಅಪ್ರಾಪ್ತ ಹೆಣ್ಣು ಮಕ್ಕಳ ಕ್ರೂರ ಅತ್ಯಾಚಾರ ಕೊಲೆ.ಅಯೋದ್ಯಯಲ್ಲಿ ನಡೆದ ದಲಿತ ಹೆಣ್ಣು ಮಗಳ ಸಾಮೂಹಿಕ ಅತ್ಯಾಚಾರ.ನೆನ್ನೆ ಕೊಪ್ಪಳದಲ್ಲಿ ನಡೆದ ವಿದೇಶೀ ಹೆಣ್ಣು ಮಗಳನ್ನು ಸೇರಿ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಇದರ ನಡುವೆ ಭ್ರೂಣ ಹತ್ಯೆ ಮರ್ಯಾದೆಗೇಡು ಹತ್ಯೆ,ಪ್ರೀತಿಗೆ ಪ್ರತಿರೋಧ ಎಂಬ ಕಾರಣಕ್ಕೆ ರುಂಡ ಕತ್ತರಿಸುವುದು.ಬಾಳ ಸಂಗಾತಿಗಳನ್ನೆ ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿ ಬಿಸಾಕುವ ಹಂತಕ್ಕೆ ಸಮಾಜದಲ್ಲಿ ಕ್ರೂರತೆ ಬೆಚ್ಚಿ ಬೀಳುವಂತೆ ಸಾಗುತ್ತಿರುವುದು, ಭಾರತದ ಇತ್ತೀಚಿನ ಹಲವು ವರ್ಷಗಳು ಮಹಿಳೆಯರ ವಿಚಾರದ ಕರಾಳ ವರ್ಷಗಳಾಗಿವೆ. ಇದಕ್ಕೆ ಪೂರಕವಾಗಿ ಆಳ್ವಿಕೆಯಲ್ಲಿ ಇರುವವರೆ ಅತ್ಯಾಚಾರಿಗಳಾಗಿ ಪರಿಣಮಿಸಿರುವುದು, ಅತ್ಯಾಚಾರಿಗಳ ಪರವಾಗಿ ನಿಲ್ಲುತ್ತಿರುವುದು ಅತ್ಯಾಚಾರಿಗಳೆ ಶಾಸಕರು ಸಂಸದರಾಗಿ ಅಧಿಕಾರದ ಚುಕ್ಕಾಣಿ ಇಡಿಯುತ್ತಿರುವುದು, ಬಲಾಢ್ಯರಿಗೆ ನ್ಯಾಯ ಎಂಬಂತೆ ವರ್ತಿಸುತ್ತಿರುವುದು,ದುರಂತದ ಸಂಗತಿ. ಇದರ ಜೊತೆಗೆ ಮಠಾಧೀಶರು ಸ್ವಾಮೀಜಿಗಳು ಕೂಡಾ ತಮ್ಮನ್ನು ತಾವು ದೇವ ಮಾನವರಂತೆ ಬಿಂಬಿಸಿಕೊಂಡು ಅತ್ಯಾಚಾರಿಗಳಾಗಿ ಜೈಲು ಸೇರಿರುವ ಪ್ರಕರಣಗಳು ನಮ್ಮ ಮುಂದಿವೆ. ಹಲವಾರು ಕ್ರಿಮಿನಲ್ ಪ್ರಕರಣಗಳ ಆರೋಪ ಎದರಿಸುತ್ತಿರುವ ಸ್ವಾಮಿಜಿಗಳನ್ನೆ ತಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಮತ್ತು ಎಲ್ಲಾ ರಾಜಕೀಯ ಪಕ್ಷದ ಮಂತ್ರಿಗಳು ಶಾಸಕರು ಸಂಸದರುಕೂಡಾ ಪಾದಕ್ಕೆರಗಿ ಪುನೀತರಾಗುವ ದುರಂತದ ದೃಶ್ಯಗಳನ್ನು ನೋಡುತ್ತಿದ್ದೇವೆ. ಹೆಣ್ಣು ಮಕ್ಕಳ ಅತ್ಯಾಚಾರಗಳನ್ನು ರಾಜಕೀಯಾ ದಾಳವನ್ನಾಗಿಸಿಕೊಂಡು ಬಳಸಿಕೊಳ್ಳುತ್ತಿರುವ ನೀಚ ರಾಜಕೀಯ ವ್ಯವಸ್ಥೆಯ ವಿರುದ್ಧ ಒಂದು ದೊಡ್ಡ ಪ್ರತಿರೋಧ ಬರಬೇಕಿದೆ ಎಂದು ಒತ್ತಾಯಿಸಿದರು.

ಸಮಾಜದಲ್ಲಿಯೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳನ್ನು ಜಾತಿ ಧರ್ಮದ ಆಧಾರದಲ್ಲಿ ಲೆಕ್ಕ ಹಾಕಿ ಪ್ರತಿರೋಧ ತೋರುವ ಮನಸ್ಥಿತಿಗಳು ಕೂಡಾ ಒಮ್ಮೆ ಅಂತಕರಣದ ಕಣ್ಣು ತರೆದು ನೋಡಬೇಕಿದೆ.ಹೆಣ್ಣನ್ನು ಬರಿ ಹೆಣ್ಣಾಗಿ ಮಾತ್ರ ನೋಡಿ ಅತ್ಯಾಚಾರ ನಡೆದ ಸಂದರ್ಭದಲ್ಲಿ ಜಾತಿ ಧರ್ಮದ ಎಲ್ಲೆ ಮೀರಿ ಮಾನವೀಯತೆ ದೃಷ್ಟಿಕೋನದ ಪ್ರತಿರೋಧ ಎದ್ದು ಬರಬೇಕಿದೆ ಎಂದು ಒತ್ತಾಯಿಸಿದರು.

ಸೌಜನ್ಯ ಪ್ರಕರಣದಲ್ಲಿ ಧ್ವನಿ ಎತ್ತಿದ ಯುವಕನನ್ನೆ ಧರ್ಮದ ಆದಾರದ ಮೇಲೆ ಅಪರಾಧಿಯ ಸ್ಥಾನದಲ್ಲಿ ಸಮಾಜ ಮತ್ತು ಕಾನೂನು ಎರಡು ಕೂಡ ನಿಲ್ಲಿಸಲು ನೋಡುತ್ತಿರುವು ಸರಿಯಾದದ್ದಲ್ಲವೇ ಅಲ್ಲ.ಇನ್ನೂ ಛತ್ತೀಶ್ ಗಡದ ಹೈ ಕೋರ್ಟ್ ತನ್ನ ಹೆಂಡತಿಯ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದ ಪತಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿರುವುದು‌ ಕೂಡ ಇವತ್ತಿನ ಕಾನೂನು ವ್ಯವಸ್ಥೆ ಎಷ್ಟು ಮಹಿಳಾ ಪರವಾಗಿದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದರು.

ಮಹಿಳಾ ಮುನ್ನಡೆಯ ಪೂರ್ಣಿಮ, ಶಿಲ್ಪ, ಜ್ಯೋತಿ, ಶೈಲಜಾ, ಕಾರ್ಮಿಕ ಸಂಘಟನೆಯ ನಾಗೇಶ್, ವಕೀಲ
ಬಿಟಿ ವಿಶ್ವನಾಥ್, ಸಿಐಟಿಯು ಕುಮಾರಿ, ಜಾಗೃತ ಕರ್ನಾಟಕದ  ನಾಗೇಶ್ ಎನ್, ಚಿತ್ರಕೂಟದ ರಾಜೇಂದ್ರ ಸಿಂಗ್ ಬಾಬು, ಅರವಿಂದ ಪ್ರಭು, ರೈತ ಸಂಘದ ಕೃಷ್ಣ ಪ್ರಕಾಶ್, ಪರಿವರ್ತನ ಸಂಸ್ಥೆಯ ಟಿ ಡಿ ನಾಗರಾಜ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ  ಅಂಜಲಿ, ನಿತ್ಯ ಹರ್ಷಿತ, ಪೂರ್ಣಿಮ ಲಕ್ಷ್ಮಿ, ಪೂಜಾ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ