Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಗಮನ ಸೆಳೆದ ಜಾನಪದ ಜಾತ್ರೆ ; ಸಾಂಪ್ರದಾಯಿಕ ಉಡುಗೆ-ತೊಡುಗೆ

ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದ ಜಾನಪದ ಜಾತ್ರೆ ಪ್ರೇಕ್ಷಕರ ಗಮನ ಸೆಳೆಯಿತು.ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಮಿಂಚಿದರು. ಎತ್ತಿನ ಗಾಡಿಗಳ ಮೆರವಣಿಗೆ… ವೀರಭದ್ರಸ್ವಾಮಿಯ ವೀರಗಾಸೆ ನೃತ್ಯ ಆಕರ್ಷಣಿಯವಾಗಿದ್ದವು.

ಎತ್ತಿನ ಗಾಡಿಗಳ ಮೆರವಣಿಗೆಗೆ ಶಾಸಕ ಮಂಜು ನೀಡಿದರೆ, ಭತ್ತ ಹಾಗೂ ರಾಗಿಯ ರಾಶಿ ಪೂಜೆ ಮಾಡುವ ಮೂಲಕ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ ಚಾಲನೆ ನೀಡಿ ಮಾತನಾಡಿ,  ಜಾನಪದ ನಮ್ಮ ಬದುಕಿನ ಜೀವ ಸೆಲೆಯಾಗಿದ್ದು, ದೃಶ್ಯ ಮಾಧ್ಯಮ ಹಾಗೂ ಟಿವಿ ಹಾವಳಿಯಿಂದ ಕಣ್ಮರೆಯಾಗಿ ನೇಪತ್ಯಕ್ಕೆ ಸರಿಯುತ್ತಿರುವ ಜನಪದ ಕಲೆಗಳ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದೆ. ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುತ್ತಿರುವ ಯುವಜನರಿಗೆ ನಮ್ಮ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಕಲೆಗಳ ಬಗ್ಗೆ ತಿಳಿಸಿ ಕೊಡುವುದು ಇಂದಿನ ಅಗತ್ಯವಾಗಿದೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಹಾಗೂ RTO ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಜಾನಪದ ಕಲೆಗಳು ನಮ್ಮ ಉಸಿರು. ಮೌಡ್ಯವಿಲ್ಲದ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜಾನಪದ ಹಾಡುಗಳು ಹಾಗೂ ಕಲೆಗಳನ್ನು ಸಂರಕ್ಷಣೆ ಮಾಡಲು ನಾಗರೀಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು. ಯುವಜನರು ಮೊಬೈಲ್ ಪ್ರಪಂಚದಿಂದ ಹೊರಬಂದು ಜಾನಪದ ಕಲೆಗಳನ್ನು ಕಲಿತು ಅಭ್ಯಾಸ ಮಾಡುವುದನ್ನು ರೂಡಿಸಿಕೊಂಡು ಜಾನಪದ ಕಲೆಗಳ ಸಂರಕ್ಷಣೆಗೆ ಮುಂದಾಗುವಂತೆ ಮನವಿ ಮಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ವಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನರು ಜಾನಪದ ಜಾತ್ರೆಯಲ್ಲಿ ವಿಹರಿಸಿ ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿದುಕೊಂಡು ಲೋಕ ಜ್ಞಾನವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಬೇಕು. ಪಿಜ್ಜಾ ಬರ್ಗರ್ ತಿರಸ್ಕರಿಸಿ, ರಾಗಿಮುದ್ದೆ, ಬಸ್ಸಾರು, ರೊಟ್ಟಿ, ಸೊಪ್ಪಿನ ಪಲ್ಯ ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂ ಶುಪಾಲೆ ಡಾ.ಪ್ರತಿಮಾ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಅಧ್ಯಾಪಕ ಜಯಕೀರ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತಯಾರಿಸಿದ ಗ್ರಾಮೀಣ ಸೊಗಡಿನ ತಿಂಡಿ, ತಿನಿಸುಗಳು, ಕಾಯಿ ಪಲ್ಲೆಗಳು ಅತಿಥಿಗಳು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರವಾದವು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ