Tuesday, November 24, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೇ ರಸ್ತೆಯಲ್ಲಿಯೇ ಶವಸುಟ್ಟ ಗ್ರಾಮಸ್ಥರು!

ಸ್ಮಶಾನ ಹೋಗಲು ದಾರಿಯಿಲ್ಲದೇ ಸಾರ್ವಜನಿಕ  ರಸ್ತೆಯಲ್ಲಿಯೇ ಶವವನ್ನು ಸುಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾಡಿಹುಂಡಿ ಗ್ರಾಮದ ಸತೀಶ್(32) ಎಂಬ ಯುವಕ ಮೃತ ಪಟ್ಟಿದ್ದ ಹಿನ್ನೆಲೆ, ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡು ಸ್ಮಶಾನಕ್ಕೆ ತೆರಳಲು ಜಾಗ ಬಿಡುವಂತೆ ರೈತನಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರಸ್ತೆಗೆ ಅಡ್ಡಲಾಗಿ ತಂತಿಬೇಲಿ ಹಾಕಿಕೊಂಡಿರುವ ರೈತ ದಾರಿ ಬಿಡಲೊಪ್ಪದ ಕಾರಣ ಗ್ರಾಮದ ಮುಖಂಡರು ಶವವನ್ನು ರಸ್ತೆಯಲ್ಲಿಯೇ ಆತನ ಮನೆ ಬಳಿಯೇ ಸುಟ್ಟು ರಸ್ತೆ ಬಿಡಿಸಿಕೊಡುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು.

ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದು ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿಯೇ ಆತನ ಮನೆಯ ಸಮೀಪವೇ ಶವ ಸಂಸ್ಕಾರ ಮಾಡಿದರು.

ಹಿಂದಿನಿಂದಲೂ ಇದೇ ಜಾಗದಲ್ಲಿದ್ದ ಸ್ಮಶಾನ ಜಾಗಕ್ಕೆ ಇದ್ದ ರಸ್ತೆಯಲ್ಲಿಯೇ ತೆರಳುತ್ತಿದ್ದಾಗಿ ಗ್ರಾಮಸ್ಥರು ಹೇಳುತ್ತಿದ್ದು, ಜೊತೆಗೆ ನೂರಾರು ಧನ-ಕರುಗಳು ಕೆರೆ ಕಟ್ಟೆಗೆ ನೀರು ಕುಡಿಯಲು ಈ ರಸ್ತೆಯಲ್ಲಿಯೇ ಹೋಗಬೇಕಿದೆ ಎಂದಿದ್ದಾರೆ. ಆದರೆ ಕಳೆದ ಇಪ್ಪತ್ತು ದಿನಗಳ ಹಿಂದೆ ಗ್ರಾಮದ ರೈತ ಅಂದಾನಿಗೌಡ ಎಂಬುವವರು ಈ ರಸ್ತೆಯ ಜಾಗ ತಮಗೆ ಸೇರಿದ್ದೆಂದು ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿ ತಡೆಯೊಡ್ಡುತ್ತಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವೇಳೆ ಸ್ಮಶಾನ ಜಾಗಕ್ಕೆ ರಸ್ತೆ ಬಿಡಿಸಿಕೊಡುವಂತೆ ಗ್ರಾಮಸ್ಥರು ರಸ್ತೆಯಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿ ಘೋಷಣೆ ಕೂಗಿದರು.

ಸಂಬಂಧಪಟ್ಟ ಅಧಿಕಾರಿಗಳು ಸ್ಮಶಾನ ಜಾಗದ ರಸ್ತೆ ಬಿಡಿಸಿ ಕೊಡದಿದ್ದರೆ ಮುಂದೆ ಯಾವುದೇ ವ್ಯಕ್ತಿ ಸತ್ತರು ತಾಲೂಕು ಕಚೇರಿ ಮುಂದೆ ಶವ ಸಂಸ್ಕಾರ ನಡೆಸುವ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ಇಡೀ ಊರಿಗೆ ಒಬ್ಬ ರೈತನಿಂದ ತೊಂದರೆಯಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ