ರಾಷ್ಟ್ರಕವಿ ಕುವೆಂಪು ನಂತರ ಕರ್ನಾಟಕ ಕಂಡ ನಿರ್ಣಾಯಕ ಹಾಗೂ ಪ್ರಭಾವಶಾಲಿ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿ ಲಂಕೇಶ್ ನಿಲ್ಲುತ್ತಾರೆ. ಅವರು ಬಿಟ್ಟು ಹೋಗಿರುವ ಬರವಣಿಗೆಯ ಮೂಲಕ ನಮ್ಮ ನಡುವೆ ಈಗಲೂ ಇದ್ದಾರೆ ಎಂದು ‘ಎಲ್ಲರೊಳಗೊಂದಾಗು ಮುಂಕುತ್ತಿಮ್ಮ ಟ್ರಸ್ಟ್’ ಅಧ್ಯಕ್ಷ ಎಂ.ವಿನಯ್ ಕುಮಾರ್ ಹೇಳಿದರು.
ಮಂಡ್ಯನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಲಂಕೇಶ್ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಚಾರ ಸಂಕಿರಣ ಮತ್ತು ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬರಹಗಳ ಮೂಲಕ ಕಟುವಾಗಿ ಟೀಕಿಸುತ್ತಾ ಇಡೀ ರಾಜಕೀಯ ವ್ಯವಸ್ಥೆಯನ್ನೇ ಬದಲಿಸುವ ಹಾಗೂ ಸರ್ಕಾರವನ್ನೇ ಬೀಳಿಸುವ ಶಕ್ತಿ ಪಿ.ಲಂಕೇಶ್ ಅವರ ಬರವಣಿಗೆಯಲ್ಲಿತ್ತು. ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಸಿಗುತ್ತಾರೆ ಆದರೆ, ಅವರಲ್ಲಿ ಭಿನ್ನವಾಗಿ ಪಿ.ಲಂಕೇಶ್ ಕಾಣುತ್ತಾರೆ. ನೆಲ, ಜಲ, ಭಾಷೆ ಉಳಿವಿಗೆ ಹೋರಾಟದ ಮುಂಚೂಣಿಯಲ್ಲಿದ್ದ ಲಂಕೇಶ್ ಅವರ ತೀಕ್ಷ್ಣ ಬರವಣಿಗೆಯಿಂದಲೇ ಹೆಸರುವಾಸಿಯಾಗಿದ್ದಾರೆ ಎಂದು ಸ್ಮರಿಸಿದರು.

ಮಾನವೀಯ ಮೌಲ್ಯಗಳಿಗೆ ಬೆಲೆ
ಕವಿ, ನಾಟಕ, ನಟನೆ, ನಿರ್ದೇಶನ, ಅನುವಾದ, ಸಂಪಾದಕ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿರುವ ಪಿ.ಲಂಕೇಶ್ ಅವರು ಇತರಿಗೂ ಮಾದರಿಯಾಗಿದ್ದಾರೆ. ಇವರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು. ನೊಂದವರ ಬಗ್ಗೆ ಕಾಳಜಿ ವಹಿಸಿದ್ದರು. ವಿದ್ಯಾರ್ಥಿಗಳು ಇವರ ಹಾದಿಯಲ್ಲಿಯೇ ಸಾಗಬೇಕಿದೆ. ಏಕೆಂದರೆ ಪ್ರಸ್ತುತದಲ್ಲಿ ಕೇವಲ ಜ್ಞಾನಕ್ಕಾಗಿ ಓದುವುದೇ ಆಗಿದೆ. ಜೊತೆಗೆ ಸಂಬಳ ತರುವ ಕೆಲಸ ಸಿಕ್ಕರೆ ಸಾಕೆನ್ನುವ ಪರಿಸ್ಥಿತಿ ಇದೆ. ಆದರೆ ಇಲ್ಲಿ ಲಂಕೇಶ್ ಅಂತಹವರು ಬರೆದಿರುವ ಕೃತಿಗಳನ್ನು ಓದುವ ಹವ್ಯಾಸ ಬೆಳೆಸುವುದು ಮುಖ್ಯವಾಗಬೇಕು ಎಂದು ಸಲಹೆ ನೀಡಿದರು.
ಟಿಆರ್ಪಿಗಾಗಿ ತೋರಿಸುವ ಭರದಲ್ಲಿ ಕೆಲವು ಮಾಧ್ಯಮಗಳು ಆರಂಭ ಎಲ್ಲಿಂದ ಮತ್ತು ಅಂತ್ಯ ಯಾವುದು ಎಂಬುದನ್ನೇ ಹೇಳುವ ಸಾಮರ್ಥ್ಯ ಕಳೆದುಕೊಂಡಿವೆ. ಆದರೆ ಇದಕ್ಕೆ ವಿರುದ್ಧವಾಗಿದ್ದ ಪಿ.ಲಂಕೇಶ್ ಅವರು ನಿಷ್ಠುರವಾಗಿ ಹೇಳುವ ಮೂಲಕ ಆರಂಭ ಮತ್ತು ಕೊನೆ ಯಾವುದು ಎಂಬುದನ್ನು ತಮ್ಮ ಬರವಣಿಗೆಯಲ್ಲಿ ತಿಳಿಸುತ್ತಿದ್ದರು, ಇಂತಹ ಬರಹಗಾರರು ಇತರರಿಗೂ ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದು ಶ್ಲಾಘಿಸಿದರು.
ಪತ್ರಿಕೋದ್ಯಮ ಸಂಕಷ್ಟದಲ್ಲಿದೆ
ಪಿ.ಲಂಕೇಶ್ ಮತ್ತು ಸಮಕಾಲೀನ ಪತ್ರಿಕೋದ್ಯಮ ಕುರಿತು ವಿಶೇಷ ಉಪನ್ಯಾಸ ನೀಡಿದ ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ಯ ಸಂಚಾಲಕ ಅಭಿಗೌಡ ಹನಕೆರೆ, ಪತ್ರಿಕೋದ್ಯಮ, ಕನ್ನಡ, ಇಂಗ್ಲಿಷ್ ಈ ವಿಭಾಗಗಳು ಪ್ರಸ್ತುತದಲ್ಲಿ ಸಂಕಷ್ಟದಲ್ಲಿವೆ. ‘ಒಂದು ದೇಶ ಒಂದು ಭಾಷೆ’ಯ ಘೋಷಣೆಯಲ್ಲಿ ಕೇವಲ ಹಿಂದಿ ಭಾಷೆ ಹೇರಲು ಹೊರಟಿದ್ದಾರೆ, ಈ ಹಿಂದೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನ ಆಡಳಿತ ಭಾಷೆಯಾಗಿ ಬಳಸಿ ಎನ್ನಲಾಗಿದೆ. ಆದರೆ ಇಲ್ಲಿ ಇಂಗ್ಲಿಷ್ ಕೈಬಿಡುವ ಹುನ್ನಾರ ನಡೆಯುತ್ತಿದೆ. ಇದನ್ನು ವಿರೋಧಿಸಬೇಕಾದರೆ ಪಿ.ಲಂಕೇಶ್ ಕೃತಿಗಳನ್ನು ಓದಬೇಕಿದೆ ಎಂದು ತಿಳಿಸಿದರು.
ಉಪನ್ಯಾಸಕ ರಾಜೇಂದ್ರ ಸಿಂಗ್ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಪಿ.ಲಂಕೇಶ್ ಮೂಲತಃ ಇಂಗ್ಲೀಷ್ ಸಾಹಿತ್ಯ ಅಧ್ಯಯನ ಮಾಡಿದ ವಿದ್ಯಾರ್ಥಿಯಾಗಿದ್ದರು. ಆದರೆ ಸಂವಿಧಾನದ ಮೂಲತತ್ವಗಳಾದ ಸಮಾಜವಾದಿ, ಜಾತ್ಯತೀತ, ಭಾತೃತ್ವವನ್ನು ಉಳಿಸುವ ಉದ್ದೇಶದಿಂದ, ತಮ್ಮದೇ ಹೆಸರಿನಲ್ಲಿ ಪತ್ರಿಕೆ ಆರಂಭಿಸಿ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರು, ಅಲ್ಲದೇ ತಳ ಸಮುದಾಯಗಳ ಆಶೋತ್ತರಗಳ ಈಡೇರಿಕೆಗಾಗಿ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಕಾಲೇಜಿನ ಪ್ರಾಂಶುಪಾಲ ಗುರುರಾಜ ಪ್ರಭು ಕೆ. ಅವರು ಅಧ್ಯಕ್ಷತೆ ವಹಿಸಿದ್ದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಸಹಾಯಕ ಪ್ರಾಧ್ಯಾಪಕರಾದ ಎಚ್.ಎಸ್.ಶಿವರಾಜು, ಕೆ.ಚಂದ್ರಕಾಂತ್, ಟಿ.ಆರ್.ದೀಪಕ್, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಪ್ರಭು ಅರವಿಂದ್ ಭಾಗವಹಿಸಿದ್ದರು.




