ಅಧ್ಯಾಪಕ, ಲೇಖಕ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಕುರಿತು ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಂಗಳವಾರ ಚಿತ್ರಕೂಟ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಯುವಜನರ ಮನಸೆಳೆಯಿತು. ಪತ್ರಿಕೋದ್ಯಮ, ಕನ್ನಡ ಮತ್ತು ಇಂಗ್ಲೀಷ್ ವಿಭಾಗದ ಪದವಿ ವಿದ್ಯಾರ್ಥಿಗಳು ಲಂಕೇಶ್ ಲೋಕದಲ್ಲಿ ಮೂರು ತಾಸು ವಿಹರಿಸಿದರು. ನೀಲೂ ಕಾವ್ಯ, ರಾಜಕಾರಣ ಮತ್ತು ಜನಚಳುವಳಿಗಳ ಮಜಲುಗಳು ಪ್ರೇಕ್ಷಕರನ್ನು ರಂಜಿಸಿದವು.
ಕನ್ನಡ ನಾಡಿಗೆ ಲಂಕೇಶ್ ಕೊಡುಗೆ ಅಪಾರ: ಅಭಿಗೌಡ
ಪಿ.ಲಂಕೇಶ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ನಾವು ದ್ರಾವಿಡ ಕನ್ನಡಿಗರು ಚಳುವಳಿಯ ಸಂಸ್ಥಾಪಕರಾದ ಅಭಿಗೌಡರು ಮಾತನಾಡಿ, ʼಎರಡು ದಶಕಗಳ ಕಾಲ ಕನ್ನಡನಾಡಿನ ಯುವ ಮನಸ್ಸುಗಳನ್ನು ಜಾಗೃತವಾಗಿಡುವಷ್ಟು ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡಿದ್ದವರು ಲಂಕೇಶ್ ಮಾತ್ರ. ಕುವೆಂಪು ಅವರ ನಂತರ ಕರ್ನಾಟಕದ ಜನತೆಯನ್ನು ಹೆಚ್ಚು ಪ್ರಭಾವಿಸಿದ ಲಂಕೇಶ್ ಅವರು ತಮ್ಮ ಪತ್ರಿಕೆಯ ಮೂಲಕ ರೈತ ಸಂಘಕ್ಕೆ ನೆರವಾದರು. ದಲಿತರ ಕಷ್ಟ ಸುಖಗಳಿಗೆ ಸ್ಪಂದಿಸಿದರು. ಬಂಡಾಯ ಸಾಹಿತ್ಯವನ್ನು ಪೋಷಿಸಿದರು. ಪ್ಯಾರಲಲ್ ಸಿನಿಮಾಗಳ ಮೂಲಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದರು. ಸರ್ಕಾರ ಬೀಳಿಸುವ ಶಕ್ತಿ ಲಂಕೇಶರಿಗೆ ಮಾತ್ರ ಇತ್ತು ಎಂದು ಹೇಳಿದರು.

ಎರಡು ತಲೆಮಾರುಗಳನ್ನು ಜಾಣಜಾಣೆಯರನ್ನಾಗಿ ರೂಪಿಸಿದ ಪಿ.ಲಂಕೇಶ್ ಜೀವನದ ಕಹಿಘಳಿಗೆಯಲ್ಲಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಾಗ ಕರ್ವಾಲೋ ಓದಿ ಮುಗಿಸಿ, ತೇಜಸ್ವಿಗೆ ಪತ್ರ ಬರೆದು ಕಾದಂಬರಿಯ ಕುರಿತು ಒಳ್ಳೆಯ ಮಾತನಾಡಬಲ್ಲ ಜೀವನ್ಮುಖಿಯಾಗಿದ್ದರು. ಲಂಕೇಶರ ಮೇಲೆ ಬುದ್ಧ, ಬಸವ, ಗಾಂಧಿ, ಕಮೂ, ಬೋದಿಲೇರ್ನ ಪ್ರಭಾವ ದಟ್ಟವಾಗಿತ್ತು. ಹಾಗಾಗಿ ಸಮಾಜದ ಓರೆಕೋರೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಸರಳವಾಗಿ ಜನರಿಗೆ ಹೇಳಲು ಸಾಧ್ಯವಾಯಿತು. ಜಾಹೀರಾತುಗಳಿಲ್ಲದೆ, ರಾಜಕಾರಣಿಗಳಿಗೆ ಸಲಾಂ ಹೊಡೆಯದೆ, ದುರಾಡಳಿತದ ಸರ್ಕಾರವನ್ನೇ ಕಿತ್ತೆಸೆದು ಹೊಸ ಸರ್ಕಾರವನ್ನು ತಂದ ಏಕೈಕ ಪತ್ರಕರ್ತರೆಂದರೆ ಅದು ಲಂಕೇಶ್ ಮಾತ್ರ ಎಂದು ಅಭಿಗೌಡರು ಹೇಳಿದರು.
ಲಂಕೇಶರ ʼನೀಲೂʼ ಮಂಡ್ಯದವಳು: ವಿನಯ್
ನಗಾರಿ ಬಾರಿಸುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ಅಧ್ಯಕ್ಷ ಎಂ.ವಿನಯ್ ಕುಮಾರ್ ಮಾತನಾಡಿ ʼಭ್ರಷ್ಟಾಚಾರ, ಕಿಡಿಗೇಡಿತನ, ಜಾತಿವ್ಯವಸ್ಥೆಯ ವಿರುದ್ಧ ಗಟ್ಟಿದನಿಯಲ್ಲಿ ಪ್ರಶ್ನಿಸುತ್ತಿದ್ದ ಪಿ.ಲಂಕೇಶ್ ಅವರು ಕುವೆಂಪು ನಂತರ ಮಂಡ್ಯ ಜಿಲ್ಲೆಯನ್ನು ಅತ್ಯಂತ ಹೆಚ್ಚು ಪ್ರೀತಿಸಿದ ಮಹನೀಯರು. ಮಂಡ್ಯದ ಹಚ್ಚ ಹಸಿರಿನ ಹಳ್ಳಿಗಾಡಿನ ಪರಿಸರ ಮತ್ತು ಕಾವೇರಿ ತೀರದ ಕುರಿತೇ ಅವರ ಅತಿ ಹೆಚ್ಚು ನೀಲೂ ಕವಿತೆಗಳು ಬಂದಿವೆʼ ಎಂದರು.
ಈ ಬೂಕರ್ ಪ್ರಶಸ್ತಿಯ ರೇಸಿನಲ್ಲಿರುವ ಲೇಖಕಿ ಭಾನು ಮುಷ್ತಾಕ್, ಸಾರಾ ಅಬೂಬಕರ್, ವೈದೇಹಿ, ಎಂ.ಎಸ್. ಆಶಾದೇವಿ ಸೇರಿದಂತೆ ಅನೇಕ ಮಹಿಳಾ ಲೇಖಕಿಯರನ್ನು ಮುಖ್ಯವಾಹಿನಿಗೆ ತಂದ ಪಿ.ಲಂಕೇಶರು ಹುಟ್ಟಿದ್ದು ವಿಶ್ವ ಮಹಿಳಾ ದಿನ ಮಾರ್ಚ್ 8ರಂದು ಕಾಕತಾಳಿಯೋ ಏನೋ ಎಂಬಂತೆ ಅವರೊಳಗೆ ಒಬ್ಬಳು ನೀಲೂವನ್ನು ಸಾಕಿಕೊಂಡಿದ್ದರು. ಮತ್ತಾಕೆಯನ್ನು ಮಂಡ್ಯದ ಹೆಣ್ಣುಮಗಳು ಎಂದು ಹೇಳಿಕೊಳ್ಳುತ್ತಿದ್ದರು. ಲಂಕೇಶ್ ಕನ್ನಡ ನಾಡು ಕಂಡ ಜನಪ್ರಿಯ ಬರಹಗಾರರಷ್ಟೇ ಅಲ್ಲ, ಸಂವೇದನಾಶೀಲ ಲೇಖಕ ಎಂದು ಅಭಿಪ್ರಾಯಪಟ್ಟರು.
ಬಿಸಿಬಿಸಿ ಬೋಂಡಾದಂತೆ ಖಾಲಿಯಾಗುತ್ತಿದ್ದ ಪತ್ರಿಕೆ
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ ಪ್ರಭು ಅವರು ಮಾತನಾಡಿ, ʼಮಾರುಕಟ್ಟೆಗೆ ಬಂದ ಒಂದೆರೆಡೇ ತಾಸುಗಳಲ್ಲಿ ಬಿಸಿ ಬಿಸಿ ವಡೆ, ಭಜ್ಜಿ, ಬೋಂಡಾದಂತೆ ಲಂಕೇಶ್ ಪತ್ರಿಕೆ ಖಾಲಿಯಾಗುತ್ತಿತ್ತು. ಎಷ್ಟೋ ಸಲ ಪತ್ರಿಕೆ ಸಿಗದೆ ಇನ್ನೊಬ್ಬರ ಬಳಿ ಕೇಳಿ ಓದಬೇಕಾದ ಸನ್ನಿವೇಶವೂ ಇತ್ತು. ಅನೇಕರು ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ ಕಾಲಂಗಳಿಗಾಗಿ ಇಡೀ ಪತ್ರಿಕೆಯನ್ನೇ ಸಂಗ್ರಹಿಸುತ್ತಿದ್ದರು. ಆಗ ಪಿ.ಲಂಕೇಶ್ ಸತ್ಯ ಹೇಳುತ್ತಿದ್ದರು; ನಾವೆಲ್ಲಾ ಕಾಯುತ್ತಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ, ಯೆಲ್ಲೋ ಜರ್ನಲಿಸಂ ಮಿತಿಮೀರುತ್ತಿದೆ. ಪತ್ರಿಕೆಗಳಲ್ಲಿ ಸತ್ಯವನ್ನು ಹುಡುಕಬೇಕಾದ ಪರಿಸ್ಥಿತಿಯಲ್ಲಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜೇಂದ್ರ ಸಿಂಗ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷರಾದ ಎಲ್. ಸಂದೇಶ್, ಚಿತ್ರಕೂಟ ಸಂಸ್ಥೆಯ ಅರವಿಂದ ಪ್ರಭು, ನುಡಿ ಕರ್ನಾಟಕದ ಜಿ.ಸಂತೋಷ್, ಸಹಪ್ರಾಧ್ಯಾಪಕರಾದ ಡಾ.ಹೆಚ್.ಎಸ್. ಶಿವರಾಜು, ಡಾ.ದೀಪಕ್, ಡಾ.ಚಂದ್ರಕಾಂತ್, ಪ್ರಾಂಕಿತರಾದ ರವಿಕಿರಣ್ ಮುಂತಾದವರು ಉಪಸ್ಥಿತರಿದ್ದರು.




