ಮಾಜಿ ಶಾಸಕ ಬೊಮ್ಮೇಗೌಡ ಮಂಡ್ಯ ಜಿಲ್ಲೆಯನ್ನು ಕೆ.ವಿ.ಶಂಕರಗೌಡರ ನೇತೃತ್ವದಲ್ಲಿ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ಮರಿಸಿದರು.
ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಜಿ.ಎಸ್.ಬೊಮ್ಮೇಗೌಡರವರ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇವತ್ತಿನ ನಮ್ಮಂತಹ ರಾಜಕಾರಣಿಗಳು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ, ಡಿ.ಮಾದೇಗೌಡರಿಗೆ ಬೊಮ್ಮೇಗೌಡ ಪ್ರಶಸ್ತಿ ಪ್ರದಾನ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ, ಡಿ.ಮಾದೇಗೌಡರ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ಮಠದ ಹಲವು ಕಾರ್ಯಗಳು ಜರುಗಿವೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಿ. ಮಾದೇಗೌಡರವರಿಗೆ ಚಿಕ್ಕನಾಯಕನಹಳ್ಳಿಯ ಮಾಜಿ ಸಚಿವರಾದ ಜೆ.ಸಿ. ಮಧುಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಿ. ಜಯಪ್ರಕಾಶಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.




