ಅರವಿಂದ ಪ್ರಭು
(ವಿಶ್ವ ರಂಗಭೂಮಿ ದಿನದ ಅಂಗವಾಗಿ ವಿಶೇಷ ಲೇಖನ)
ನಮ್ಮ ಮಂಡ್ಯದ ನೆಲದಲ್ಲಿ ರಂಗಭೂಮಿ ಚಟುವಟಿಕೆಗಳು ಹೆಚ್ಚುತ್ತಿರುವುದು ಸಕ್ಕರೆ ನಾಡಿನ ಸಾಂಸ್ಕೃತಿಕ ಸೌಂದರ್ಯವನ್ನು ವಿಸ್ತರಿಸುತ್ತಿದೆ. ನಾಟಕ ಕಲೆಗೆ ಮತ್ತು ರಂಗಾಸಕ್ತರಿಗೆ ಭದ್ರ ನೆಲೆ ಸಿಗಲು ಮೂಲ ಕಾರಣರಾದ ಮಂಡ್ಯ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದ ಕನಸುಗಾರ ‘ನಿತ್ಯ ಸಚಿವ’ ಕೆ.ವಿ.ಶಂಕರಗೌಡರನ್ನು ಮತ್ತು ನಮ್ಮ ನೆಲದ ಕಲೆಯಾದ ಮೂಡಲಪಾಯ ಯಕ್ಷಗಾನಕ್ಕೆ ಮರುಜೀವ ನೀಡಿದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶಗೌಡರನ್ನು ವಿಶ್ವ ರಂಗಭೂಮಿ ದಿನದಂದು ನಾವು ನೆನೆಯಲೇಬೇಕಿದೆ.

ನೀನಾಸಂ ಮತ್ತು ಭೂಮಿ ಬೆಳಗು
ಕುವೆಂಪು ಅವರು ಅತ್ಯಂತ ಹೆಚ್ಚು ಪ್ರೀತಿಸಿದ ನಮ್ಮ ಮಂಡ್ಯ ನೆಲದಲ್ಲಿ ವೈಚಾರಿಕ ನಾಟಕಗಳನ್ನು ನಿಯಮಿತವಾಗಿ ಆಯೋಜಿಸುವ ಮೂಲಕ ಸಹಬಾಳ್ವೆ, ಸೋದರತೆಯನ್ನು ಪೋಷಿಸುತ್ತಿರುವ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಮಂಗಲ ಎಂ.ಯೋಗೀಶರು ನೀನಾಸಂ ನಾಟಕಗಳನ್ನು ಮಂಡ್ಯದ ಜನರಿಗೆ ಪ್ರತಿವರ್ಷ ಉಚಿತವಾಗಿ ತೋರಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ.

ಈ ಬಾರಿಯ ನೀನಾಸಂ ತಿರುಗಾಟದಲ್ಲಿ ದೃಶ್ಯಕಾವ್ಯಗಳಾದ ‘ಮಾಲತಿ ಮಾಧವ’ ಮತ್ತು ‘ಅಂಕದ ಪರದೆ’ ನಾಟಕಗಳು ಈ ವರ್ಷದ ಆರಂಭಕ್ಕೆ ಒಳ್ಳೆಯ ಮೆರುಗನ್ನು ನೀಡಿದವು.

ನಿರ್ದಿಗಂತ ಮತ್ತು ನೆಲದನಿ ಬಳಗ
ಜರ್ಮನಿಯ ಪ್ರಸಿದ್ಧ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್‌ನ ಕೃತಿಯೊಂದನ್ನು ಪ್ರಕಾಶ್ ರೈ ಅವರ ನಿರ್ದಿಗಂತ ತಂಡ ಕಳೆದ ವರ್ಷ ಕನ್ನಡಕ್ಕೆ ತಂದಿತು. ಶಕೀಲ್ ಅಹ್ಮದರ ನಿರ್ದೇಶನದಲ್ಲಿ ಸರ್ವಾಧಿಕಾರಿಯೊಬ್ಬನ ಭಾನಗಡಿಗಳಿಂದ ನೋಯುವ ಸಮಾಜದ ಸನ್ನಿವೇಶವನ್ನು ವಿವೇಕಾನಂದ ರಂಗಮಂದಿರದ ಮೇಲೆ ನಿರ್ದಿಗಂತದ ಕಲಾವಿದರು ಅದ್ಭುತವಾಗಿ ಪ್ರಸ್ತುತಪಡಿಸಿದರು.

ತುಂಡೆರಾಯನನ್ನು ಮಂಡ್ಯಕ್ಕೆ ತಂದ ನೆಲದನಿ ಬಳಗದ ಮಂಗಲ ಲಂಕೇಶ್ ಅವರ ತಂಡದ ಸೃಜನಶೀಲ ಹೆಜ್ಜೆ ಶ್ಲಾಘನೀಯ.
ಕೋಮುಸಂಘರ್ಷ ಮತ್ತು ನಾಗರಂಗ
ಜಿಲ್ಲಾಕೇಂದ್ರ ಮಂಡ್ಯದಿಂದ ಬರೋಬ್ಬರಿ 40 ಕಿಲೋಮೀಟರ್ ದೂರವಿರುವ ನಾಗಮಂಗಲ ಕಳೆದ ವರ್ಷ ಗಣೇಶ ವಿಸರ್ಜನೆಯ ವೇಳೆ ಭೀಕರ ಕೋಮು ಸಂಘರ್ಷಕ್ಕೆ ಗುರಿಯಾಯಿತು. ಹಿಂದೂ ಮುಸ್ಲಿಂ ಜನಾಂಗೀಯ ಕಲಹದಿಂದ ತಲ್ಲಣಗೊಂಡಿತ್ತು. ಪರಿಸ್ಥಿತಿ ಗಂಭೀರವಾಗಿದ್ದ ಆ ದಿನಗಳಲ್ಲಿ ಮತ್ತೆ ಒಡೆದ ಮನಸ್ಸುಗಳನ್ನು ಒಂದುಗೂಡಿಸಿದ್ದು ಅಲ್ಲಿನ ‘ಕನ್ನಡ ಸಂಘ’.

ದಶಕಗಳಿಂದ ನಿರಂತರವಾಗಿ ಕನ್ನಡ ಸಂಘ ನಾಟಕೋತ್ಸವವನ್ನು ಆಯೋಜಿಸುತ್ತಿದ್ದರೂ ಈ ಸಲದ ‘ನಾಗರಂಗ’ ಅತ್ಯಂತ ಅರ್ಥಪೂರ್ಣವಾಗಿತ್ತು. ಹಿಂದೂ ಮುಸ್ಲಿಂ ಭಾವೈಕ್ಯತೆಗಾಗಿ ಹಂಬಲಿಸಿದ ಅಲ್ಪಕಾಲದ ಮೊಘಲ್ ದೊರೆ “ದಾರಾಶೀಕೋ” ನಾಟಕ ಸೋದರತೆಯ ಪಾಠ ಕಲಿಸಿತು. ಕೃಷ್ಣ ಆಲನಹಳ್ಳಿಯ ‘ಪರಸಂಗದ ಗೆಂಡೆತಿಮ್ಮ’ನೂ ಸೇರಿದಂತೆ ಒಟ್ಟು ಏಳು ನಾಟಕಗಳು ಒಡೆದ ಸಮಾಜವನ್ನು ಒಂದುಗೂಡಿಸುವ, ಅರಿವನ್ನು ವಿಸ್ತರಿಸುವ ನಾಟಕಗಳೇ ಆಗಿದ್ದವು.
ಕಾಡಿದ ಇನ್ನಿತರ ನಾಟಕಗಳು
ಶ್ರೀರಂಗಪಟ್ಟಣದ ಅರುಣೋದಯ ಕಲಾತಂಡದ ಜನಪದ ಗಾಯಕಿ ಮಂಜುಳಾ ಅವರು ಆಯೋಜಿಸಿದ್ದ ಭಾವೈಕ್ಯತೆ, ಕಾರುಣ್ಯಗಳನ್ನು ಬಿತ್ತುವ ‘ಜತೆಗಿರುವನು ಚಂದಿರ’ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟಿತು.

ಮಳವಳ್ಳಿಯ ಮಕ್ಕಳ ನಾಟಕೋತ್ಸವದಲ್ಲಿ ಚಿಣ್ಣರು ಪ್ರಸ್ತುತ ಪಡಿಸಿದ ‘ಅಳಿಲು ರಾಮಾಯಣ’ ಹೊಸ ತಲೆಮಾರಿನಲ್ಲಿ ರಂಗಾಭಿರುಚಿ ಹೆಚ್ಚಿಸುವ ಅತ್ಯುತ್ತಮ ಪ್ರಯತ್ನವೆನ್ನಬಹುದು. ಮಂಡ್ಯದ ಕಲಾಮಂದಿರದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ಕರ್ನಾಟಕ ಸಂಘದ ‘ಸಾಹೇಬರ ಸರ್ಕೀಟು’ ಕಥೆ ಹಳೆಯದಾದರೂ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿತು.
ರಂಗಮಂದಿರಗಳು ಹೌಸ್‌ಫುಲ್
ಕಳೆದ ಎರಡು ವರ್ಷಗಳಲ್ಲಿ ನಾನು ಗಮನಿಸಿದಂತೆ ಮಂಡ್ಯದಲ್ಲಿ ಸಿನಿಮಾಗಳಿಗಿಂತ ನಾಟಕಗಳೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಜನವರಿಯಲ್ಲಿ ನಡೆದ ‘ಮಾಲತಿ ಮಾಧವ’ ನಾಟಕ ತನ್ನ ಗಟ್ಟಿಕಥೆ, ನೈಜ ಅಭಿನಯ, ಲೈವ್ ಸಂಗೀತ ಸಂಯೋಜನೆ, ಆಕರ್ಷಕ ಧ್ವನಿ ಬೆಳಕಿನಿಂದ ರಾತ್ರಿ 9.45ರ ವೇಳೆಗೂ ರಂಗಮಂದಿರದಿಂದ ಒಬ್ಬ ಪ್ರೇಕ್ಷಕನೂ ಹೊರಗೆ ಹೋಗದಂತೆ ಹಿಡಿದು ಕೂರಿಸಿತ್ತು.

ವಿಶ್ವ ರಂಗಭೂಮಿ ದಿನವಾದ ಇಂದು ಮಂಡ್ಯದ ನೆಲದಲ್ಲಿ ನಾಟಕಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಖಚಿತವಾಗಿ ಹೇಳಬಹುದು.




