ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅವಿರತವಾಗಿ ಶ್ರಮಿಸುತ್ತಾರೆ, ಅವರ ಕನಸಿನ ಮೌಲ್ಯವನ್ನು ಅರಿತು ಸತ್ಪ್ರಜೆಗಳಾಗಿ ಹೊರ ಹೊಮ್ಮುವ ಕನವರಿಕೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ರೂಢಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಿಸಿದರು.
ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದ ಬಳಿ ಇರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಆರವಣದಲ್ಲಿ ಆಯೋಜನೆಗೊಂಡಿದ್ದ ಜಪಾನ್ ದೇಶದಲ್ಲಿ ನಡೆಯುವ ‘ವಿದ್ಯಾರ್ಥಿ ವಿನಿಮಯ’ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಉತ್ತಮ ಪರಿಸರದಲ್ಲಿ, ಅತ್ಯುತ್ತಮ ವಾತಾವರಣದಲ್ಲಿ ನಿರ್ಮಾಣಗೊಂಡಿದ್ದು, ಉತ್ತಮ ಬೋಧಕ ವರ್ಗವನ್ನು ಹೊಂದಿದೆ. ಶಾಲಾ ಸಮಿತಿ ಅಧ್ಯಕ್ಷ ಮಂಜು ಅವರ ಕಾಳಜಿ ಅನನ್ಯವಾಗಿದ್ದು, ಇಂತಹ ಸುಂದರ ಪರಿಸರದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಗುಣಗಾನ ಮಾಡಿದರು.

ರಿಪಬ್ಲಿಕ್ ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳು – ಮಂಜು
ಶೈಕ್ಷಣಿಕ ಕ್ಷೇತ್ರದ ಸವಾಲುಗಳನ್ನು ಮೆಟ್ಟಿ ನಿಲ್ಲಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸದುದ್ದೇಶದಿಂದ ಆರಂಭಗೊಂಡಿರುವ ಮಂಡ್ಯ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲು ಬಳಿ ಇರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಎಲ್.ಕೆ.ಜಿ ಯಿಂದ ಎಸ್ ಎಸ್ ಎಲ್ ಸಿ ವರೆಗೆ 503 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ.
ಸಂಸ್ಥೆಯ ಅಧ್ಯಕ್ಷ ಎಸ್.ಮಂಜು ಅವರ ವಿಶೇಷ ಕಾಳಜಿಯಿಂದ ಅತ್ಯುತ್ತಮ ಪರಿಸರದಲ್ಲಿ ನಿರ್ಮಾಣಗೊಂಡಿರುವ ಸಂಸ್ಥೆಯಲ್ಲಿ ಉತ್ತಮ ಬೋಧಕ ವೃಂದವು ಕಾರ್ಯ ನಿರ್ವಹಿಸುತ್ತಿದೆ.
ಆಧುನಿಕ ಜಗತ್ತಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಹಾಗೂ ಬಾಂಧವ್ಯ ವೃದ್ದಿಸುವ ಸದುದ್ದೇಶದಿಂದ ಜಪಾನ್ ದೇಶದಲ್ಲಿ ನಡೆಯುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಭಾರತ, ಆಸ್ಟ್ರೇಲಿಯಾ, ಫಿಲಿಪೈನ್ಸ್, ಇಂಡೋನೇಷಿಯಾ, ವಿಯೆಟ್ನಾಂ ದೇಶಗಳು ಸೇರಿದಂತೆ ಹತ್ತಾರು ದೇಶಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳು ಸದರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಈ ಬಾರಿಯ ವಿಶೇಷವೆನೆಂದರೆ ಜಪಾನ್ ದೇಶದ ಒಸಾಕೋ ನಗರದಲ್ಲಿ ನಡೆಯಲಿರುವ ಎಕ್ಸ್ ಪೋ- 2025 ಕಾರ್ಯಕ್ರಮದಲ್ಲಿ ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ನಮ್ಮ ಮಕ್ಕಳ ಪಾಲ್ಗೊಳ್ಳುವಿಕೆ ಹೆಮ್ಮೆ ತರಲಿದೆ ಎಂದರು.
ಏ.12ರಿಂದ 20ರವರೆಗೆ ನಡೆಯಲಿರುವ ಸದರಿ ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಶಾಲೆಯ ರೇವತಿ ಕೆ.ವಿ., ಮೋಹನ್ ಕುಮಾರ್ ಎಸ್, ಯಶಸ್ವಿನಿ ಕೆ.ಬಿ., ಸಾನಿಕ ಪಿ, ಏಕಾಂತ್ ಹೆಚ್.ವೈ., ಧನುಷ್ ಕೆ. ಗೌಡ ಮತ್ತು ಅಪೂರ್ವ ಎ. ಸೇರಿದಂತೆ 7 ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಮಂಜು ತಿಳಿಸಿದರು.
ಭಾರತ ಮತ್ತು ಜಪಾನ್ ರಾಷ್ಟ್ರಗಳ ನಡುವಿನ ವಿದ್ಯಾರ್ಥಿಗಳಲ್ಲಿ ಬಾಂಧವ್ಯ ವೃದ್ದಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಸತತ ಮೂರನೇ ಬಾರಿಗೆ 7 ವಿದ್ಯಾರ್ಥಿಗಳು ಆಯ್ಕೆಗೊಂಡಿರುವುದು ಸಂತಸದ ವಿಚಾರವಾಗಿದ್ದು, ವಿದ್ಯಾರ್ಥಿಗಳ ಪ್ರಗತಿ ಪೋಷಕರ ಸಂತಸಕ್ಕೆ ನಾಂದಿಯಾಡುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ಶೈಕ್ಷಣಿಕ ಅವಧಿ ಅಮೂಲ್ಯವಾಗಲಿದ್ದು, ಅದನ್ನು ಸದ್ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳುವ ಅವಕಾಶವಿದ್ದು, ಶೈಕ್ಷಣಿಕ ಅವಧಿಯಲ್ಲಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಗುರು- ಹಿರಿಯರಿಗೆ ಮತ್ತು ಪೋಷಕರಿಗೆ ಗೌರವಿಸುವ ಮೌಲ್ಯಯುತ ಶಿಕ್ಷಣದ ಜೊತೆಗೆ ಅಧಿಕ ಅಂಕ ಗಳಿಸುವ ಜಾಣ್ಮೆ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ವಿದೇಯತೆ ರೂಢಿಸಿಕೊಳ್ಳಬೇಕು. ಮಾತಾ- ಪಿತೃಗಳೇ ತಮಗೆ ಆದರ್ಶವಾಗಬೇಕು. ಜಿಲ್ಲೆಯಲ್ಲಿ ಕೃಷಿ ಅವಲಂಬಿತ ಪೋಷಕರು ಹೆಚ್ಚಾಗಿದ್ದು, ಅವರ ಕನಸಿಗೆ ನೀರೆರೆಯುವ ಜಾಣ್ಮೆ ರೂಢಿಸಿಕೊಂಡು ಕಾಣದ ದೇವರನ್ನು ಪೋಷಕರಲ್ಲೇ ಕಾಣಬೇಕೆಂದರು.
ಶಿಕ್ಷಣದ ಅವಧಿಯಲ್ಲಿ ಅಭ್ಯಾಸದ ಗೀಳು ರೂಢಿಸಿಕೊಳ್ಳಬೇಕು. ಉತ್ತಮ ಸ್ನೇಹಿತರ ಆಯ್ಕೆಗೆ ಮಾನದಂಡ ರೂಢಿಸಿಕೊಳ್ಳಬೇಕು. ಶಿಸ್ತು, ಶುಚಿತ್ವ, ಏಕಾಗ್ರತೆ ರೂಢಿಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯುಲು ಮುಂದಾಗಬೇಕು. ಡಿಜಿಟಲ್ ಕ್ರಾಂತಿಯ ಲಾಭವನ್ನು ಸದುಪಯೋಗ ಪಡೆದುಕೊಳ್ಳುವಾಗ ಜಾಗೃತಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಂಜು ಎಸ್., ಪಾಂಶ್ರುಪಾಲರಾದ ಸುನೀತಾ ರಾಜನ್ ಉಪಸ್ಥಿತರಿದ್ದರು.




