Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಏ.5-6 ರಂದು ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್ : ವಿನಯ್ ಕುಮಾರ್

ಅಂತಾರಾಷ್ಟ್ರೀಯ ಕ್ರೀಡೆ ವಾಲಿಬಾಲ್ ಅನ್ನು ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯಗೊಳಿಸಲು ಮತ್ತು ಮಂಡ್ಯ ಜಿಲ್ಲೆಯ ವಾಲಿಬಾಲ್ ಕ್ರೀಡಾಪಟುಗಳನ್ನು ರಾಜ್ಯ, ಅಂತಾರಾಷ್ಟೀಯ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್ ಅನ್ನು ಇದೇ ಏಪ್ರಿಲ್ 5 ಮತ್ತು 6 ರಿಂದ ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯ್ ಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಲಿಬಾಲ್ ಕ್ರೀಡೆಯು ದೈಹಿಕವಾಗಿ ಕ್ರೀಡಾಪಟುಗಳನ್ನು ಸದೃಢರನ್ನಾಗಿ ಮಾಡುವುದರ ಜೊತೆಗೆ ಮಾನಸಿಕವಾಗಿ ಉತ್ಸಾಹಿ ನಾಗರೀಕರನ್ನಾಗಿ ರೂಪಿಸುತ್ತದೆ. ಗ್ರಾಮೀಣ ಭಾಗದಲ್ಲಿ ವಾಲಿಬಾಲ್ ಕ್ರೀಡೆ ನಶಿಸಿಹೋಗುತ್ತಿದ್ದು, ಅದನ್ನು ಉಳಿಸಲು ಯುವ ಸಮುದಾಯದ ಜತೆ ನಿಲ್ಲುವ ನಿಟ್ಟಿನಲ್ಲಿ ಕೆರಗೋಡು ಫ್ರೆಂಡ್ಸ್ ಕ್ಲಬ್ ಜತೆ ಸೇರಿ ಈ ವಾರಾಂತ್ಯಕ್ಕೆ ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್‌ನ 2025ರ ಮೊದಲ ಆವೃತ್ತಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

6 ತಂಡಗಳು, 19 ಪಂದ್ಯಗಳು
ಏಪ್ರಿಲ್ 5 ಮತ್ತು 6ರಂದು ನಡೆಯಲಿರುವ ವಾಲಿಬಾಲ್ ಪ್ರೀಮಿಯರ್ ಲೀಗ್ನಲ್ಲಿ ಕೆರಗೋಡಿನ ಸೂರ್ಯ ಸ್ಟ್ರೈಕರ್ಸ್, ಮಜಾ ಬಾಯ್ಸ್, ಬಾಣಸವಾಡಿ ರಾಯಲ್ ಚಾಲೆಂಜರ್ಸ್, ಹಲ್ಲೆಗೆರೆ ಮಾರುತಿ ಬಾಯ್ಸ್, ಅಂಕಣ್ಣನದೊಡ್ಡಿ ಈಗಲ್ಸ್ ಮತ್ತು ಕಲ್ಮಂಟಿದೊಡ್ಡಿ ರಾಮಾಂಜನೇಯ ಬಾಯ್ಸ್ ಸೇರಿದಂತೆ ಒಟ್ಟು 6 ತಂಡಗಳು ಈ ಆವೃತ್ತಿಯಲ್ಲಿ ಭಾಗವಹಿಸುತ್ತಿದ್ದು. ಏಪ್ರಿಲ್ 6ರಂದು ಸೆಮಿ ಫೈನಲ್ ಮತ್ತು ಫೈನಲ್ ನಡೆಯಲಿದೆ. ನಂತರ ಮೊದಲ ಸ್ಥಾನಕ್ಕೆ 25 ಸಾವಿರ, 2ನೇ ಸ್ಥಾನಕ್ಕೆ 15 ಸಾವಿರ ಮತ್ತು 3ನೇ ಸ್ಥಾನ ಪಡೆದವರಿಗೆ 10 ಸಾವಿರ ನಗದು ಬಹುಮಾನ ಮತ್ತು ಟ್ರೋಫಿಯನ್ನು ಆಯಾ ತಂಡಗಳಿಗೆ ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗಣ್ಯರು ವಿತರಿಸಲಿದ್ದಾರೆ ಎಂದು ಟೂರ್ನಿಯ ಸಂಚಾಲಕ ಅಮೃತ್ ಕೆರಗೋಡು ತಿಳಿಸಿದರು.

ಈ ಹಿಂದೆ ನಮ್ಮ ಮೈಸೂರು ಮಹಾರಾಜರು ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಇಂದು ಕ್ರೀಡೆಯ ಮಹತ್ವ ನಮಗೆಲ್ಲ ಅರಿವಾಗಿದೆ. ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರ ನಾವು ಸೀಮಿತರಾಗುತ್ತಿದ್ದೇವೆ. ಖೋ ಖೋ, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಗಳನ್ನು ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗುವುಂತಾಗುತ್ತದೆ. ಇದೇ ನಮ್ಮ ಆಶಯವಾಗಿದೆ ಎಂದರು.

ವಿಜೇತ ತಂಡಗಳಿಗೆ 50 ಸಾವಿರ ಬಹುಮಾನ

ಸಮಾರೋಪ ಸಮಾರಂಭದಲ್ಲಿ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ವಿಜೇತ ತಂಡಗಳಿಗೆ ಟ್ರೋಫಿ ಮತ್ತು 50 ಸಾವಿರ ನಗದು ಬಹುಮಾನ ವಿತರಿಸಲಿದ್ದಾರೆ ಎಂದು ವಿನಯ್ ಕುಮಾರ್ ಹೇಳಿದರು.

ಗೋಷ್ಟಿಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಪದಾಧಿಕಾರಿಗಳು, ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ರಾಜೇಂದ್ರ ಸಿಂಗ್ ಬಾಬು, ಕೆರಗೋಡು ಫ್ರೆಂಡ್ಸ್ ಕ್ಲಬ್‌ನ ಅಮೃತ್ ಕೆರಗೋಡು, ಕೆವಿಪಿಎಲ್‌ನ ಈ ಆವೃತ್ತಿಯ ತಂಡದ ಮಾಲೀಕರು ಮತ್ತು ನಾಯಕರುಗಳು ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ