ಧರ್ಮಾಂಧತೆ, ಮತಾಂಧತೆ ಅಳಿಯಬೇಕು, ಪ್ರತಿಯೊಬ್ಬರಲ್ಲೂ ಮಾನವೀಯತೆ ನೆಲಸಬೇಕು. ಸಮ ಸಮಾಜದ ನಿರ್ಮಾಣಕ್ಕೆ ವಿಶ್ವಮಾನವರಾಗಿ ಬಾಳ್ವೆ ನಡೆಸಬೇಕೆಂಬ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಪಾಲಿಸಬೇಕೆಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಮಂಡ್ಯ ನೆಹರು ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಶ್ರೀರಾಮನವಮಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವಾಲಯಗಳ ನಿರ್ಮಾಣದ ಜತೆಗೆ ಕೆರೆ- ಕಟ್ಟೆಗಳನ್ನು ಕಟ್ಟುವುದು ಪುಣ್ಯದ ಕೆಲಸವಾಗಿದ್ದು, ಪೂಜೆ ಪುನಸ್ಕಾರ, ಹಬ್ಬ, ಉತ್ಸವಗಳು ನಡೆಯದಿದ್ದರೆ ಮನುಷ್ಯ ವಿಕಾರ ಹಾಗೂ ವ್ಯಾಕುಲಕ್ಕೆ ಒಳಗಾಗಿ ನೆಮ್ಮದಿ ಕಳೆದುಕೊಳ್ಳುತ್ತಾನೆ. ಯಾಂತ್ರಿಕತೆಗಿಂತ ಮಾಂತ್ರಿಕತೆಗೆ ಮೌಲ್ಯವಿದ್ದು ಭಕ್ತಿಯ ತನ್ಮಯತೆಗೆ ಪರಮಾತ್ಮನ ದಿವ್ಯಶಕ್ತಿ ಪ್ರಾಪ್ತಿಯಾಗುತ್ತದೆ ಎಂದರು.
ರಾಮಕೃಷ್ಣ ಪರಮಹಂಸರು ಭಕ್ತಿಗೆ ತುಂಬು ಆದ್ಯತೆ ನೀಡಿದ್ದರು. ಕಾಳಿ ಮಾತೆಯ ಪೂಜೆಯನ್ನು ಶ್ರದ್ಧೆ, ಭಕ್ತಿ ಹಾಗೂ ವ್ಯಾಕುಲತೆಯಿಂದ ಆರಾಧಿಸಿ ಭಕ್ತಿ ಪರವಶರಾಗಿದ್ದರು. ಆದರೆ ಸ್ವಾಮೀ ವಿವೇಕಾನಂದರು ದೇಶದ ಭಾರತೀಯ ಧರ್ಮದಲ್ಲಿದ್ದ ಮೌಢ್ಯತೆ, ಸ್ತ್ರೀ ಕೀಳರಿಮೆ, ಬಾಲ್ಯವಿವಾಹ, ಮುಂತಾದ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸಿ ನಮ್ಮ ಸನಾತನ ಧರ್ಮದ ಹಿರಿಮೆಯನ್ನು ವಿಶ್ವ ವ್ಯಾಪಿ ಪಸರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆಂದು ಸ್ಮರಿಸಿದರು.
ತಮ್ಮ ಬುದ್ದಿ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಸಂಸ್ಕಾರವನ್ನು ರೂಢಿಸಿಕೊಂಡಿರುವ ಯಾವುದೇ ವ್ಯಕ್ತಿ. ತನ್ನ ದೇಶ ಅಥವಾ ಅನ್ಯ ಧರ್ಮದ ಮೇಲೆ ಕತ್ತಿ ಮಸೆಯುವ ದ್ವೇಷ ಭಾವನೆಯನ್ನು ಹೊರ ಹಾಕುವುದಿಲ್ಲ. ಭಾರತಾಂಬೆಯ ಮೇಲೆ ಅಭಿಮಾನವಿಟ್ಟಿರುವವರು ಇಂತಹ ಕೆಲಸಕ್ಕೆ ಎಂದಿಗೂ ಮುಂದಾಗುವುದಿಲ್ಲ ಎಂದರು.
ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ನಮ್ಮ ಹಿರಿಯರ ಬಗ್ಗೆ ನಮ್ಮ ಧೋರಣೆಗಳು ಬದಲಾಗಬೇಕು. ಆ ಸಂಕುಲವನ್ನು ತಾತ್ಸಾರವಾಗಿ ಕಂಡರೆ ನಮಗೆ ಒಳಿತಾಗುವುದಿಲ್ಲ ಎಂಬ ಅರಿವಿರಬೇಕು. ಯುವ ಜನಾಂಗವನ್ನು ದೇವಾಲಯದತ್ತ ಕರೆ ತರುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಬಿ.ಟಿ.ಜಯರಾಂ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾಧ್ಯಕ್ಷ ಎಂ.ವಿ.ಪ್ರಕಾಶ್, ಭಜನಾ ಸಭಾ ಕಾರ್ಯದರ್ಶಿ ಚನ್ನಪ್ಪ, ಉಪಾಧ್ಯಕ್ಷ ಸುರೇಶ್, ಖಜಾಂಚಿ ನಾಗರಾಜು, ಸಹಕಾರ್ಯದರ್ಶಿ ಶೇಖರ್, ಟ್ರಸ್ಟಿ ರಾಜರತ್ನಂ ಉಪಸ್ಥಿತರಿದ್ದರು.




