ರಾಜ್ಯದಲ್ಲಿ 40% ಕಮಿಷನ್ ಸರ್ಕಾರ : ನಿರುದ್ಯೋಗ ಪ್ರಮಾಣ ಹೆಚ್ಚಳ
ಸರ್ಕಾರಿ ಹುದ್ದೆಗಳ ಮಾರಾಟ : ಹಣ ಮಾಡುವ ಧಂದೆಯಲ್ಲಿ ಸಚಿವರು
ದೇಶದ ಉಳಿವಿಗಾಗಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಭಾರತ ಜೋಡೋ ( ಭಾರತ ಐಕ್ಯತಾ) ಪಾದಯಾತ್ರೆ ಹಮ್ಮಿಕೊಂಡಿದ್ದಾರೆ, ಜನರ ರಕ್ಷಣೆಗಾಗಿ ನಾವೆಲ್ಲಾ ಅವರೊಂದಿಗೆ ಕೈ ಜೋಡಿಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಮಂಡ್ಯ ನಗರದ ಸುಮ ರವಿ ಕನ್ವೆನ್ಷನ್ ಹಾಲ್ ನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಅವರು ಯಾವುದೇ ಕಷ್ಟ ಇಲ್ಲದೇ ಮಂತ್ರಿ, ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಬಹುದಾಗಿತ್ತು. ಆದರೆ ಅವರು, ಆ ಅಧಿಕಾರ ತ್ಯಾಗ ಮಾಡಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಉದಯಪುರದಲ್ಲಿ ಕಾಂಗ್ರೆಸ್ ಪಕ್ಷದ 600ಕ್ಕೂ ಹೆಚ್ಚು ನಾಯಕರನ್ನು ಕರೆದು, ಜನರ ಕಷ್ಟದಲ್ಲಿ ಭಾಗಿಯಾಗಬೇಕು, ಅವರ ಸಮಸ್ಯೆ ಅರಿಯಬೇಕು ಎಂದಾಗ, ನಾವು ಕೊಟ್ಟ ಸಲಹೆಗಳನ್ನು ಸ್ವೀಕರಿಸಿ ಈ ಪಾದಯಾತ್ರೆ ಮಾಡಲು ನಿರ್ಧರಿಸಿದರು.
ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ನನಗೆ ಪಾದಯಾತ್ರೆ ಮಾಡುವ ಬಗ್ಗೆ ಆಲೋಚಿಸು ಎಂದು ಸಲಹೆ ನೀಡಿದ್ದರು. ಹೀಗಾಗಿ ಹಳೇ ಮೈಸೂರು ಭಾಗದ ಜನರ ಹಿತ ಕಾಯಲು ನಾವು ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡೆವು ಎಂದರು.
ಈ ದೇಶದಲ್ಲಿ ಸಾಮರಸ್ಯ ಮೂಡಿಸಿ, ನೆಮ್ಮದಿ, ಶಾಂತಿ ಸ್ಥಾಪಿಸಬೇಕು, ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು, ಜನಸಾಮಾನ್ಯರನ್ನು ಬೆಲೆ ಏರಿಕೆಯಿಂದ ರಕ್ಷಿಸಬೇಕು. ರೈತರು ಹಾಗೂ ಕಾರ್ಮಿಕರ ಬದುಕು ಸುಧಾರಿಸಬೇಕು ಹಾಗೂ ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಈ ಹೋರಾಟ ಆರಂಭಿಸಲಾಗಿದೆ ಎಂದರು.
40% ಕಮಿಷನ್ ಸರ್ಕಾರ
ನಮ್ಮ ರಾಜ್ಯ, ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯ ಎಂದು ಕುಖ್ಯಾತಿ ಪಡೆದಿದೆ. ಮೋದಿ ಅವರು ಕಳೆದ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬಂದಾಗ ಸಿದ್ದರಾಮಯ್ಯ ಸರ್ಕಾರವನ್ನು ಶೆ.10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದರು. ಆದರೆ ಅವರ ಸರ್ಕಾರ ಶೇ.40% ಸರ್ಕಾರ ಆಗಿದೆ ಎಂದು ರಾಜ್ಯ ಗುತ್ತಿಗೆದಾರರು, ಮಠಾಧೀಶರು, ಶಿಕ್ಷಣ ಸಂಸ್ಥೆಗಳು ತಿಳಿಸಿವೆ.
ಸರ್ಕಾರಿ ಇಲಾಖೆಗಳ ನೇಮಕಾತಿಗಳನ್ನು ಮಾರಾಟ ಮಾಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಹೆಚ್ಚಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ಈ ಯಾತ್ರೆ ನಿಮ್ಮ ಮನೆ ಬಾಗಿಲಿಗೆ ಬಂದಿರುವ ಭಾಗ್ಯ, ಈ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಗೆದ್ದಿರುವ ದಳಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ, ಪರಿಷತ್ ಚುನಾವಣೆ ಗೆಲ್ಲಲು ಆಗಿಲ್ಲ. ಇದು ನಿಮ್ಮ ಒಗ್ಗಟ್ಟಿನ ಪರಿಶ್ರಮಕ್ಕೆ ಮಂಡ್ಯ ಜನ ಮಾಡಿರುವ ಆಶೀರ್ವಾದ, ಇದನ್ನು ನೀವು ಉಳಿಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ 21 ದಿನಗಳ ಕಾಲ ಭಾರತ ಜೋಡೋ ಯಾತ್ರೆ ಸಂಚರಿಸಲಿದೆ, ಅದರಲ್ಲಿ ಮಂಡ್ಯ ಹಾಗೂ ತುಮಕೂರಿನಲ್ಲಿ ಮಾತ್ರ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ದಸರಾ ಹಬ್ಬದ ಪ್ರಯುಕ್ತ 2 ದಿನ ಬಿಡುವು ಸಿಕ್ಕಿದೆ ಎಂದು ವಿವರಿಸಿದರು.
ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ, ಮಂಡ್ಯದ ಜನ ಮನಸ್ಸು ಮಾಡಿದರೆ ಯಾತ್ರೆಗೆ ಒಂದೊಂದು ಕ್ಷೇತ್ರದಿಂದ 15-20 ಸಾವಿರ ಜನ ಸೇರಬಹುದು.ಮೂರು ದಿನಗಳಲ್ಲಿ ಕನಿಷ್ಠ 75 ಸಾವಿರ ಜನರನ್ನು ಸೇರಿಸಬಹುದು. ನೀವು ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಮಹಿಳಾ ಕಾಂಗ್ರೆಸ್ ನಾಯಕಿಯರು ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ, ಶ್ರೀಶಕ್ತಿ ಸಂಘದವರನ್ನು ಯಾತ್ರೆಗೆ ಕರೆತರಬೇಕು ಎಂದರು.
ನಿರುದ್ಯೋಗಿ ಯುವಕರನ್ನು ಕೂಡ ನೋಂದಣಿ ಮಾಡಿಕೊಳ್ಳುತ್ತಿದ್ದು, ಮೊದಲ ಹಂತದಲ್ಲಿ 41 ಸಾವಿರ ಹಾಗೂ ಇತ್ತೀಚೆಗೆ 9 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರತಿನಿತ್ಯ ಒಂದೊಂದು ವರ್ಗದ ಜನರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ. ಮಂಡ್ಯದಲ್ಲಿ ಸುಮಾರು 25 ಸಾವಿರ ರೈತರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂಬ ಭರವಸೆ ಇದೆ. ಪ್ರತಿ ತಾಲ್ಲೂಕಿನ ಜನ ಬರಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ, ನೀವು ನಿಮ್ಮ ಬೂತ್ ಮಟ್ಟದಲ್ಲಿ ಮುನ್ನಡೆ ತಂದುಕೊಡಲು ಶ್ರಮಿಸಿ. ರಾಹುಲ್ ಗಾಂಧಿ ಅವರು ನಿಮ್ಮ ಜಿಲ್ಲೆಯಲ್ಲಿ ಹೆಜ್ಜೆ ಹಾಕುತ್ತಿರುವಾಗ ನಿಮಗೆ ಶಕ್ತಿ ಹೆಚ್ಚುತ್ತದೆ.ಈ ಅವಕಾಶ ಬಳಸಿಕೊಳ್ಳಿ ಎಂದರು.




