Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ನಾಯಕರು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ : ವಿಜಯೇಂದ್ರ

ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿದ ಬಳಿಕ ಕಾಂಗ್ರೆಸ್ ನಾಯಕರು ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನವಿರೋಧಿ ನೀತಿಯಿಂದ ಬಡವರು, ದಲಿತರು, ಹಿಂದುಳಿದ ವರ್ಗದವರು ಸರ್ಕಾರದ ಮೇಲಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬಿಜೆಪಿ ನಡೆಸಿದ ಜನಾಕ್ರೋಶ ಯಾತ್ರೆಯ ರ್‍ಯಾಲಿ ಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ಸಮುದಾಯಗಳ ಕ್ಷೇಮಾಭಿವೃದ್ಧಿ ಮರೆತು ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿದೆ. ಮತಕೊಟ್ಟ ಹಿಂದೂ ಸಮುದಾಯವನ್ನು ಸಂಪೂರ್ಣ ಮರೆತಿದೆ ಎಂದು ದೂರಿದರು.

ಮಂಡ್ಯ ಜನ ಛತ್ರಿಗಳಲ್ಲ-ಚಕ್ರವರ್ತಿಗಳು: ಆರ್.ಅಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮಂಡ್ಯ ಜನರನ್ನು ಛತ್ರಿಗಳು ಎಂದು ಟೀಕಿಸಿದ್ದಾರೆ. ಚುನಾವಣೆಯ ಮೊದಲು ಈ ಜನರ ಬಳಿ ಪೆನ್ನು ಪೇಪರ್ ಕೊಡಿ ಎಂದು ಭಿಕ್ಷೆ ಬೇಡಿದ್ದ ಡಿಕೆಶಿ, ಇದೀಗ ಅಧಿಕಾರಕ್ಕೇರಿದ ಬಳಿಕ ಮಂಡ್ಯ ಜನರನ್ನು ಈ ಮಟ್ಟದಲ್ಲಿ ಟೀಕಿಸಿದ್ದು, ಮಂಡ್ಯ ಜನ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ. ನನ್ನ ಪ್ರಕಾರ ಮಂಡ್ಯ ಜನ ಛತ್ರಿಗಳಲ್ಲ. ಚಕ್ರವರ್ತಿಗಳು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳ ದೃಷ್ಟಿಯಿಂದ ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯ ತಂದಿದ್ದೆವು. ಆದರೆ ಈ ಸರ್ಕಾರ ವಿವಿಯನ್ನು ಕದ್ದೊಯ್ದಿದೆ. ವಿವಿ ಉಳಿಸಲು ಕೇಂದ್ರ ಸರ್ಕಾರ ೫೦ ಕೋಟಿ ರೂ. ಅನುದಾನ ನೀಡಿತ್ತು. ಆದರೆ ಮುಸ್ಲಿಂ ತುಷ್ಟೀಕರಣದಿಂದ ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಲೂಟಿ ಕೋರ ಸರ್ಕಾರದಲ್ಲಿ ಸೊಳ್ಳೆ, ತಿಗಣೆಗಳ ಕಾಟ ಹೆಚ್ಚಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೊಳ್ಳೆ ತಿಗಣೆಗಳಂತೆ ರಾಜ್ಯದ ಜನರ ರಕ್ತ ಹೀರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ಅಧಿಕಾರಕ್ಕೆ ಬಂದು ೨೦ ತಿಂಗಳಾಗಿದೆ. ಅಲ್ಪ ಅವಧಿಯಲ್ಲಿ ೫೦ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್ ದರ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವ ಸಿದ್ದರಾಮಯ್ಯ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಕೊಡಗು ಜಿಲ್ಲೆಯ ಅಭಿವೃದ್ಧಿ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಎಫ್‌ಐಆರ್ ದಾಖಲು ಮಾಡಿ ಮಾನಸಿಕ ಹಿಂಸೆ ನೀಡಿ ಆತನ ಆತ್ಮಹತ್ಯೆಗೆ ಸರ್ಕಾರ ಪರೋಕ್ಷ ಕಾರಣವಾಗಿದೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಪರವಾಗಿ ನಾವಿದ್ದೇವೆ ಎಂದು ಭರವಸೆ ನೀಡಿದರು.

೨ ಸಾವಿರ ಕೊಟ್ಟು ೨೦ ಸಾವಿರ ಕಿತ್ತುಕೊಳ್ಳುತ್ತಿದ್ದಾರೆ

ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಎಂದು ೨ ಸಾವಿರ ರೂ.ನೀಡಿ ಜನರಿಂದ ೨೦ ಸಾವಿರ ರೂ.ಗಳನ್ನು ಕಿತ್ತುಕೊಳ್ಳುತ್ತಿದೆ. ಹೀಗೆ ಭಾಗ್ಯಗಳನ್ನು ನೋಡಿ ಬಾಯಿ ಬಡಿದುಕೊಳ್ಳುವ ದೌರ್ಭಾಗ್ಯ ಜನತೆಗೆ ಬಂದಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದರ ಮರ್ಮ ಇದೀಗ ನಮ್ಮ ಜನಕ್ಕೆ ಅರ್ಥವಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನರ ಮೇಲೆ ತೆರಿಗೆಯ ಬರೆ ಹಾಕುತ್ತಿರುವ ರಾಜ್ಯ ಸರ್ಕಾರ ಕೇವಲ ೨ ಸಾವಿರ ರೂ. ಕೊಟ್ಟು, ೨೦ ಸಾವಿರ ರೂ. ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಯಾತ್ರೆಯಲ್ಲಿ ಬಿಜೆಪಿ ನಾಯಕರಾದ ಅಶ್ವತ್ ನಾರಾಯಣ್ ಗೌಡ, ಸಿ.ಟಿ.ರವಿ, ಶ್ರೀರಾಮುಲು, ಸುಮಲತಾ ಅಂಬರೀಶ್,ಇಂಡುವಾಳು ಸಚ್ಚಿದಾನಂದ,ಅಶೋಕ್ ಜಯರಾಂ,ಸಿದ್ದರಾಮಯ್ಯ ಹಾಗೂ ಎಸ್.ಪಿ.ಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ