Thursday, November 19, 2026

ಪ್ರಾಯೋಗಿಕ ಆವೃತ್ತಿ

ಎಸ್‌ಸಿ, ಎಸ್‌ಟಿ ಸಮುದಾಯಗಳ ಸಮಸ್ಯೆ ಆಲಿಸಿ ಪರಿಹರಿಸಿ : ಡಾ. ಜಿ.ಪರಮೇಶ್ವರ್

ಎಸ್‌ಸಿ, ಎಸ್‌ಟಿ ಸಮುದಾಯಗಳ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಅನ್ಯಾಯಕ್ಕೆ ಒಳಗಾದವರ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಸಮಾಜದಲ್ಲಿ ಯಾರು ನ್ಯಾಯ ಕೇಳಿಕೊಂಡು ಠಾಣೆಗೆ ಬರುತ್ತಾರೆ, ಅವರ ಪರ‌ ನಿಲ್ಲಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ಕುರಿತು ಕೂಲಂಕುಷವಾಗಿ ಪರಿಶೀಲಿಸಿ, ಅಧಿಕಾರಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆ ಹಾವಳಿ ಹೆಚ್ಚಾಗಿ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕೆ.ಆರ್.ಪೇಟೆ, ಬಸ್ರಾಳು, ಕೊಪ್ಪ ಭಾಗದಲ್ಲಿ ಹೆಚ್ಚಾಗಿದೆ. ಗಸ್ತು ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ಅಂತವರ ವಿರುದ್ಧ ಕ್ರಮ ಜರುಗಿಸಬೇಕು‌ ಎಂದು ಸೂಚನೆ ನೀಡಿದರು.

ಮುಲಾಜಿಲ್ಲದೆ‌ ಕ್ರಮ ಜರುಗಿಸಬೇಕು

ಅಕ್ರಮ ಮರಳು ದಂಧೆಗೆ ನಮ್ಮವರೆ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾವಹಿಸಬೇಕು. ಆರೋಪಿಗಳ ಜೊತೆ ಪೊಲೀಸರು ಕೈಜೋಡಿಸುವುದು ಕಂಡು ಬಂದರೆ ಸಹಿಸುವುದಿಲ್ಲ‌. ಇದು ಮುಂದುವರಿಸುವುದು ಕಂಡು ಬಂದರೆ ಅಂತವರ ವಿರುದ್ಧ ಮುಲಾಜಿಲ್ಲದೆ‌ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಡ್ರಗ್ಸ್ ಚಟುವಟಿಕೆಗಳು ಕಂಡು ಬಂದರೆ ಆಯಾ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು. ಅಪರಾಧ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡುಗುವ‌ ರೌಡಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ. ನಿಮಗೆ, ಲಾಠಿ, ಗನ್ ಸುಮ್ಮನೆ ನೀಡಿಲ್ಲ. ಸಂದರ್ಭ ಬಂದಾಗ ಬಳಸಿ. ನಿಮ್ಮೊಂದಿಗೆ ಸರ್ಕಾರ ನಿಲ್ಲುತ್ತದೆ. ಪೊಲೀಸ್ ಅಂದರೆ ಕಾನೂನು. ಕಾನೂನಿಗೆ ಗೂಂಡಾಗಳು ಹೆದರಬೇಕು. ದ್ವಿಚಕ್ರ ವಾಹನಗಳಲ್ಲಿ ಗಸ್ತು ತಿರುಗಿದರೆ ಘಟನೆಗಳು ಏನೆಂಬುದು ಗೊತ್ತಾಗುವುದಿಲ್ಲ. ಗಸ್ತು ಸಿಬ್ಬಂದಿಗಳು ತಮಗೆ ವಹಿಸಿದ ಜವಾಬ್ಧಾರಿಯನ್ನು ಅರಿಯಬೇಕು. ಸ್ಥಳೀಯ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.

ನೊಂದವರಿಗೆ, ಬಡವರಿಗೆ ರಕ್ಷಣೆ ನೀಡುವುದು ಮತ್ತು ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆ. ಜಾತಿ, ಧರ್ಮ,‌ ಪಕ್ಷ ನೋಡುವುದು ಸರಿಯಲ್ಲ. ಪೊಲೀಸ್ ಸರ್ಕಾರದ ಮುಖ. ರಾಜ್ಯದಲ್ಲಿ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಪೊಲೀಸರಿಗೆ ಗೊತ್ತಿರಬೇಕು ಎಂದು ಸೂಚಿಸಿದರು.

ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಸದನದಲ್ಲಿ ತಿಳಿಸಿದ್ದೇವೆ. ಇದಕ್ಕೆ ಬದ್ಧವಾಗಿ ಪೊಲೀಸ್ ಇಲಾಖೆ ಕೆಲಸ‌ ಮಾಡಬೇಕಿದೆ. ಡ್ರಗ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ‌ ಮಾಡಬೇಕು. ಯಾವುದೇ ಕಾರಣಕ್ಕು ಕೋಮು ಸಂಘರ್ಷಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ದಕ್ಷಿಣ ವಲಯ ಐಜಿಪಿ ಡಾ. ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ