Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಡಾ.ಬಿ.ಆರ್.ಅಂಬೇಡ್ಕರ್ ಜೋಡಿರಸ್ತೆ ನಾಮಫಲಕ ಅನಾವರಣ

ಮಂಡ್ಯ ನಗರದ ಪ್ರಮುಖ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಗೆ ನಾಮಫಲಕ ಅಳವಡಿಸಲು ಜಿಲ್ಲಾಡಳಿತ ಮತ್ತು ನಗರ ಸಭೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಅನಾವರಣ ಮಾಡಲಾಯಿತು.

ಅಂಬೇಡ್ಕರ್ ವೃತ್ತ ಹಾಗೂ ಶ್ರೀಸಪ್ತಗಿರಿ ಎಲೆಕ್ಟ್ರಿಕಲ್ ಬಳಿ ಡಾ.ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಅನಾವರಣ ಮಾಡುವ ಮೂಲಕ ನಗರ ಸಭೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸ್ವಾಭಿಮಾನಿ ಸಮ ಸಮಾಜ ರಾಜ್ಯಾಧ್ಯಕ್ಷ ಎಚ್ ಎನ್ ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿ ಒಕ್ಕಲಿಗ, ಬುದ್ಧ ಭಾರತ ಫೌಂಡೇಶನ್ ನ ಜೆ. ರಾಮಯ್ಯ ಪರಿವರ್ತನಾ ಸಂಸ್ಥೆಯ ಟಿ.ಡಿ ನಾಗರಾಜ್, ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ, ದಲಿತ ಸಂಘರ್ಷ ಸಮಿತಿಯ ಅಂದಾನಿ ಸೋಮನಹಳ್ಳಿ, ಹಾಲಹಳ್ಳಿ ಮುಕುಂದ, ಪ್ರದೀಪ್ ಸೇರಿದಂತೆ ಹಲವರು ನಾಮಫಲಕ ಅನಾವರಣ ಮಾಡಿ ವಿನೂತನ ಹೋರಾಟಕ್ಕೆ ನಾಂದಿ ಹಾಡಿದರು.

1976 ರಲ್ಲಿ ಮಂಡ್ಯ ನಗರಸಭೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಬೆಸಗರಹಳ್ಳಿ ರಾಮಣ್ಣ ವೃತದವರೆಗೆ ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಕರಣ ಮಾಡುವ ನಿರ್ಣಯ ಮಾಡಿತ್ತು ಅದರಂತೆ ರಸ್ತೆಯ ಎರಡು ಬದಿಯಲ್ಲಿ ಅಂಬೇಡ್ಕರ್ ರಸ್ತೆ ನಾಮಫಲಕ ಅಳವಡಿಸಿದ್ದರು, ಸರ್ಕಾರಿ ದಾಖಲೆಗಳಲ್ಲಿಯೂ ಅಂಬೇಡ್ಕರ್ ರಸ್ತೆ ಎಂದು ನಮೂದಿಸಲಾಗುತ್ತಿತ್ತು ಆದರೆ ರಸ್ತೆಯು ನೂರು ಅಡಿ ಅಗಲ ಇದ್ದಿದ್ದರಿಂದ ನೂರಡಿ ರಸ್ತೆ ಎಂದು ಪ್ರಚಲಿತಕ್ಕೆ ಬಂದಿತ್ತು.

ನಗರಸಭೆಯು ಕಳೆದ ವರ್ಷದ ಹಿಂದೆ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ಮುಂದಾಗಿದ್ದಾಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ವಿರೋಧ ಮಾಡಿದ್ದವು. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಹಾಕಲು ಒತ್ತಡ ಹಾಕುತ್ತಾ ಬಂದಿದ್ದವು. ಆದರೆ ನಗರಸಭೆ ಅಂದಿನಿಂದಲೂ ನಿರ್ಲಕ್ಷ ತೋರುತ್ತ ಬಂದಿತ್ತು, ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದರೂ ಸಹ ರಸ್ತೆಯಲ್ಲಿ ನಾಮಫಲಕವನ್ನು ಹಾಕಿರಲಿಲ್ಲ.

ಈ ವಿಚಾರ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಪ್ರತಿಧ್ವನಿಸಿ ಹಾಗೊಮ್ಮೆ ಡಾ.ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆಯಲ್ಲಿ ಫಲಕ ಹಾಕದಿದ್ದರೆ ಕಪ್ಪು ಬಾವುಟ ಪ್ರದರ್ಶಿಸುವುದರ ಜೊತೆಗೆ ಜಿಲ್ಲಾಡಳಿತ ಆಚರಿಸುವ ಅಂಬೇಡ್ಕರ್ ಜಯಂತಿ ಬಹಿಷ್ಕರಿಸಬೇಕಾಗುತ್ತದೆ ಎಂದು ದಲಿತ ಹಾಗೂ ಪ್ರಗತಿಪರ ಮುಖಂಡರು ಎಚ್ಚರಿಕೆ ನೀಡಿದ್ದರು.

ಆದರೂ ಸಹ ಜಿಲ್ಲಾಡಳಿತ ಹಾಗೂ ನಗರಸಭೆ ನಿರ್ಲಕ್ಷತೆ ಮುಂದುವರಿಸಿದ್ದರಿಂದ ಅಂಬೇಡ್ಕರ್ ಜಯಂತಿ ಬಹಿಷ್ಕರಿಸುವುದಾಗಿ ಘೋಷಣೆ ಮಾಡಿದ್ದರಿಂದ ದಲಿತ ಮತ್ತು ಪ್ರಗತಿಪರ ಮುಖಂಡರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದ ಜಿಲ್ಲಾಡಳಿತ ರಸ್ತೆಗೆ ನಾಮಫಲಕ ಹಾಕುವ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕವನ್ನು ಅನಾವರಣ ಮಾಡುವ ಮೂಲಕ ಜಿಲ್ಲಾಡಳಿತ ಮತ್ತು ನಗರಸಭೆಗೆ ಸೆಡ್ಡು ಹೊಡೆದು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ, ರಸ್ತೆಯುದ್ಧಕ್ಕೂ ನಾಮಫಲಕ ಹಾಕಲಾಗುವುದು ಎಂದು ಎಚ್ಚರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ