ಜಗತ್ತಿನಲ್ಲಿ ಮಾನವೀಯ ಧರ್ಮ ಒಂದಿದ್ದರೆ ಅದು ಬೌದ್ಧ ಧರ್ಮವಾಗಿದೆ. ಯಾವುದೇ ಭೇದ-ಬಾವವಿಲ್ಲದೆ ಎಲ್ಲಾ ಮನುಷ್ಯರು ಒಂದೇ ಎನ್ನುವ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ. ಭಗವಾನ್ ತಿಳಿಸಿದರು.
ಮಂಡ್ಯ ನಗರದ ಕುವೆಂಪು ನಗರದಲ್ಲಿರುವ ಮಿಮ್ಸ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಯೋಗೇಂದ್ರ ಕುಮಾರ್ ಅವರ ಸಮ್ಮಾಸಂಬುದ್ಧ ನಿಲಯದಲ್ಲಿ ಆಯೋಜಿಸಿದ್ದ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಮತ್ತು ಬೌದ್ಧ ಧಮ್ಮ ಉಪಾಸನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪ್ರಪಂಚದ ನಾನಾ ದೇಶಗಳಲ್ಲಿ ಬುದ್ದ ಗುರುವಿನ ಆಶಯಗಳನ್ನು ರಾಷ್ಟ್ರಗಳು ಅನುಸರಿಸಿ ಬೌದ್ಧ ರಾಷ್ಟ್ರಗಳಾಗಿವೆ. ಪ್ರಗತಿ ರಾಷ್ಟ್ರಗಳಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸುತ್ತಿವೆ. ಆದರೆ ಭಾರತ ದೇಶದಲ್ಲಿ ಹುಟ್ಟಿದ ಬೌದ್ಧಧಮ್ಮವು ಪಟ್ಟಭದ್ರ ಹಿತಾಕ್ತಿಗಳಿಂದ ನಾಶಗೊಂಡಿತು. ಕಾಲಕ್ರಮೇಣ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಮರುಸ್ಥಾಪನೆಯಾಯಿತು ಎಂದು ನುಡಿದರು.
ಮಿಮ್ಸ್ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ಯೋಗೇಂದ್ರಕುಮಾರ್ ಮಾತನಾಡಿ, ಇಂದು ನಮ್ಮ ಮನೆಯಲ್ಲಿಯೇ ಭೋದಿಸತ್ವ ಪರಮಪೂಜ್ಯ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಿ, ಬೌದ್ಧಭಿಕ್ಕು, ಬಂತೇಜಿಗಳನ್ನು ಆಹ್ವಾನಿಸಿ ಬೌದ್ದಸಂದೇಶ ಸಾರಿದ್ದೇವೆ ಎಂದರು.
ಇನ್ನಾದರೂ ಮನೆಮನೆಗಳಲ್ಲಿ ಬುದ್ಧ ಸಂದೇಶಗಳು, ಉಪಾಸನೆಗಳು ವೈಜ್ಞಾನಿಕ ಚಿಂತನೆಗಳನ್ನು ಬಿತ್ತಲಿ, ಬಾಳಿಗೆ ಬೆಳಕಾಗಲಿ, ಮನೆ ಮನೆಗಳಲ್ಲಿ ಅಂಬೇಡ್ಕರ್ ಹಬ್ಬ, ಗೌತಮ ಬುದ್ದರ ಜಯಂತಿ, ಬೌದ್ಧಧಮ್ಮದ ಪಠಣಗಳು ನಡೆಯಲಿ, ಉತ್ತಮ ಸಂದೇಶಗಳು ವಿದ್ಯಾವಂತರಿಂದ ಸಮಾಜಕ್ಕೆ ಬೆಳಕಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಪಾಸಕಿ ಶಿಲ್ಪಶ್ರೀ ಮತ್ತು ಮಿಮ್ಸ್ ವೈದ್ಯರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.




