ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಎನ್ನುವ ಸತ್ಯವನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರನ್ನು ಮೊದಲು ವಿರೋಧಿಸುತ್ತಾ ಬರುತ್ತಿದ್ದ ಸಂಘ ಪರಿವಾರ, ಬಿಜೆಪಿ ಪ್ರಸ್ತುತ ದಿನಗಳಲ್ಲಿ ಆರಾಧಿಸುವ ನಾಟಕವಾಡುತ್ತಿದ್ದಾರೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರವರ 134ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್‌ರವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ರಾಜಕೀಯ ಕ್ಷೇತ್ರದಲ್ಲಿ ಎಲ್ಲಾ ಪಕ್ಷದವರು ಮಾತಿನ ಚರ್ಚಾ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ, ಬಹುಸಂಖ್ಯಾತರು ಬಾಬಾ ಸಾಹೇಬರ ಅನುಯಾಯಿಗಳು ಆಗಿರುವುದರಿಂದ ಅವರ ಬೆಂಬಲಕ್ಕಾಗಿ ಅಂಬೇಡ್ಕರ್‌ರವರನ್ನು ಮಧ್ಯೆ ತಂದು ಶೋಚನೀಯ ಸ್ಥಿತಿಗೆ ತಂದಿದ್ದಾರೆಂದು ವಿಷಾದಿಸಿದರು.

ಪವಿತ್ರ ಗ್ರಂಥ ಸಂವಿಧಾನವನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ನಿಜವಾದ ಸಾಧನೆಯನ್ನು ತಿಳಿದುಕೊಳ್ಳಬಹುದಾಗಿದೆ. ಅಂಬೇಡ್ಕರ್‌ರವರು ಸ್ವಾರ್ಥಕ್ಕಾಗಿ ಯಾವುದನ್ನು ಬಯಸಲಿಲ್ಲ. ತನ್ನ ಮನೆತನವನ್ನು ಬೆಳಗಿಸಲಿಲ್ಲ. ಸಂವಿಧಾನ ಬರೆಯುವುದರ ಮೂಲಕ ನಾಡಿಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಸಂವಿಧಾನವನ್ನು ಅರಿತುಕೊಳ್ಳದವರು ನಾನಾ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಜ್ಞಾನದ ಸಂಕೇತವಾಗಿ ಪ್ರಪಂಚದಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್‌ರವರ ಹೆಚ್ಚು ಪುತ್ಥಳಿ ಸ್ಥಾಪನೆಯಾಗಿರುವುದು ಇತಿಹಾಸ ಎನ್ನುವುದನ್ನು ಮರೆಯುವಂತಿಲ್ಲ ಎಂದರು.
ದೇಶದಲ್ಲಿ ಹಲವು ಜಾತಿ, ಧರ್ಮ ವರ್ಣ, ಭಾಷೆ ಎಷ್ಟೇ ಇದ್ದರೂ ನಾವು ಭಾರತೀಯರು ಎಂದು ಸಂವಿಧಾನ ಪೀಠಿಕೆಯನ್ನು ತಿಳಿಸಿದ್ದಾರೆ, ಸಂವಿಧಾನದಲ್ಲಿ ಹಕ್ಕುಗಳನ್ನು ಕೊಟ್ಟಿದ್ದಾರೆ, ಸಮಾನತೆಯ ಹಕ್ಕನ್ನು ಪ್ರತಿಯೊಬ್ಬರು ಬಯಸುತ್ತೇವೆ, ಆದರೇ ನಾವು ಮೇಲು ಎನ್ನುವ ಸ್ವರ್ಥವನ್ನು ದೂರಮಾಡಿದರೇ ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಜಿಲ್ಲಾಪಂಚಾಯತ್ ನಿವೃತ್ತ ಕಾರ್ಯದರ್ಶಿ ಪ್ರೇಮ್‌ಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರಪಂಚದ ಜ್ಞಾನದ ಬೆಳಕು ಎಂದು ಪ್ರತಿಪಾದಿಸಲಾಗಿದೆ. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ದೇಶದಲ್ಲಿಯೂ ಆಚರಿಸಲಾಗುತ್ತಿದೆ, ಆದರೇ ಭಾರತ ದೇಶದಲ್ಲಿ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ, ಅಂಬೇಡ್ಕರ್ ಭಾರತ ದೇಶದ ಸ್ವತ್ತು ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.
ತಮ್ಮ ಶಕ್ತಿಯನ್ನು ದೇಶದ ಅಭಿವೃದ್ದಿಗಾಗಿ ಧಾರೆ ಎರೆದಿದ್ದಾರೆ, ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಲು ಸಂವಿಧಾನವೇ ಕಾರಣವಾಗಿದೆ, ಅಂಬೇಡ್ಕರ್ ಜಯಂತಿ ಒಂದು ದಿನದ ಕಾರ್ಯಕ್ರಮವಾಗಬಾರದು, ಪ್ರತಿಯೊಬ್ಬರು ಶಿಕ್ಷಣವಂತರಾಗಿ ತತ್ವ ಸಿದ್ದಂತಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪಿ.ಎಂ ನರೇಂದ್ರಸ್ವಾಮಿ ಮಾಲಾರ್ಪಣೆ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಿAದ ಅಂಬೇಡ್ಕರ್ ಭವನದವರೆಗೆ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಜಾನಪದ ಕಲಾಮೇಳದೊಂದಿಗೆ ನಡೆಯಿತು.




