Saturday, November 21, 2026

ಪ್ರಾಯೋಗಿಕ ಆವೃತ್ತಿ

ಬೆಲೆಏರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನಾಸ್ತ್ರ : ಮೋದಿ ಬಡವರ ವಿರೋಧಿ : ಸಿಎಂ ಸಿದ್ದರಾಮಯ್ಯ

ಅಡುಗೆ ಅನಿಲ, ಗೊಬ್ಬರ, ಔಷಧಿ, ರಾಗಿ, ಗೋದಿ, ಡೀಸೆಲ್, ಪೆಟ್ರೋಲ್ ಎಲ್ಲದರ ಬೆಲೆ ಆಕಾಶಕ್ಕೇರಿಸಿದ ಪ್ರಧಾನಿ ಮೋದಿ ಭಾರತದ ಮಧ್ಯಮ ವರ್ಗ ಮತ್ತು ಬಡವರ ವಿರೋಧಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದ ಬೆಲೆ ಏರಿಕೆ ಪರ್ವವನ್ನು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿ ಯಾವ‌ ಮುಖ ಇಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ಮಾತಾಡುತ್ತಿದೆ? 4ರೂ ಹಾಲಿನ ದರ ಹೆಚ್ಚಿಸಿ ಈ 4 ರೂಪಾಯಿಯನ್ನು ನೇರವಾಗಿ ರೈತರ ಜೇಬಿಗೆ ಹಾಕಿದ್ದೇವೆ. ಸರ್ಕಾರಕ್ಕೆ ಸೇರುವುದಿಲ್ಲ ಎಂದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಸೋನಿಯಾ, ರಾಹುಲ್ ವಿರುದ್ಧ ಆರೋಪ ಪಟ್ಟಿ ಹಾಕಿದ್ದನ್ನು ತೀವ್ರವಾಗಿ ಖಂಡಿಸಿದರು. RSS ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ RSS ಪರಿವಾರಕ್ಕೆ ಭಾರತದ ಬೆಲೆಯೂ ಗೊತ್ತಿಲ್ಲ. ಸ್ವಾತಂತ್ರ್ಯದ ಬೆಲೆಯೂ ಗೊತ್ತಿಲ್ಲ. RSS ನವರ ದೇಶದ್ರೋಹದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಮಾದರಿ ದೇಶಾದ್ಯಂತ ನಡೆಸೋಣ. ಇದಕ್ಕಾಗಿ ಸಜ್ಜಾಗಿ ಎಂದು ಕಾರ್ಯಕರ್ತರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ರಾಜಕೀಯ ಅಂದರೆ ಬರೀ ಅಧಿಕಾರ ಅಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಜನರ ಪರವಾಗಿ ನಿಂತು ನಿರಂತರ ಹೋರಾಟ ನಡೆಸುವುದೂ ರಾಜಕೀಯ ಬದ್ಧತೆಯೇ ಆಗಿದೆ. ಸುಳ್ಳೇ ಬಿಜೆಪಿಯ ಮನೆ ದೇವರು. RSS ಸುಳ್ಳಿನ ಮಹಾ ಕಾರ್ಖಾನೆಯಾಗಿದೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಸಾವರ್ಕರ್ ಮತ್ತು ಢಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಕಾಂಗ್ರೆಸ್ ಸೋಲಿಸಿದ್ದು ಎಂದು ಬಿಜೆಪಿ ಬಂಡಲ್ ಬಿಡುತ್ತಿದೆ ಎಂದು ತಿರುಗೇಟು ನೀಡಿದರು.

ನಾವು ಸುಳ್ಳಿನ ಕಾರ್ಖಾನೆ RSS ನ ಸುಳ್ಳುಗಳ ವಿರುದ್ಧ ಸತ್ಯವನ್ನು ದೇಶದ ತುಂಬ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಾ ಮೋದಿ ಸರ್ಕಾರ ತನ್ನ ಬಡವರ, ಮಧ್ಯಮ ವರ್ಗ ವಿರೋಧಿತನವನ್ನು ಬಚ್ಚಿಡಲು ಯತ್ನಿಸುತ್ತಿದೆ. ಸರ್ಕಾರ ದಿವಾಳಿ ಆಗಿದ್ದರೆ ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂಪಾಯಿ ಪ್ರತೀ ವರ್ಷ ತೆಗೆದಿಡಲು ಸಾಧ್ಯವಾಗುತ್ತಿತ್ತಾ? ಎಂದರು.

ರಾಜ್ಯದ ಉದ್ದಗಲಕ್ಕೂ ಹಾಲಿನ ಬೆಲೆ 4 ರೂ ಹೆಚ್ಚಳ ಮಾಡಿರುವುದು ರೈತರ ಜೇಬಿಗೆ ಹೋಗುತ್ತಿದೆ. ಸರ್ಕಾರಕ್ಕೆ ಬರುತ್ತಿಲ್ಲ. ನೀವು ಗ್ಯಾಸ್ ಬೆಲೆ ಹತ್ತಾರು ಬಾರಿ ಹೆಚ್ಚಿಸಿ ಈಗ ಮತ್ತೆ 50 ರೂ ಹೆಚ್ಚಿಸಿದ್ದೀರಿ. ಈ ಹೆಚ್ಚುವರಿ ಹಣ ಯಾರಿಗೆ ಹೋಗುತ್ತಿದೆ ಹೇಳಿ? ಎಂದು ತಿರುಗೇಟು ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ