ಮಾಚಯ್ಯ ಎಂ ಹಿಪ್ಪರಗಿ
ಮೊನ್ನೆ ಜಾತಿಗಣತಿ ವಿಚಾರವಾಗಿ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಮೀಡಿಯಾಗಳಲ್ಲಿ ರೋಚಕ ಸುದ್ದಿಗಳು ವರದಿಯಾದವು. ಅವರು ಎಗರಾಡಿದರು, ಇವರು ಹಾರಾಡಿದರು, ಡಿಸಿಎಂ ರೇಗಿದರು, ಸಿಎಂ ಗದರಿದರು, ನೀನ್ಯಾರಯ್ಯಾ ಎಂದು ಏಕವಚನದಲ್ಲೆ ಬೈದಾಡಿಕೊಂಡರು ಎಂಬಿತ್ಯಾದಿ ಒಗ್ಗರಣೆ ಮೂಲಕ ನೇರವೀಕ್ಷಕ ವಿವರಣೆ ಕೊಟ್ಟಷ್ಟೆ ರೋಚಕವಾಗಿ ವರದಿ ಮಾಡಲಾಯ್ತು. ಪತ್ರಕರ್ತರು ಸ್ವತಃ ಅಲ್ಲಿ ಕೂತು, ಆ ಕದನವನ್ನೆಲ್ಲ ಕಣ್ಣಾರೆ ಕಂಡಿದ್ದರೇನೊ ಎಂದು ವೀಕ್ಷಕರು-ಓದುಗರು ನಂಬುವಂತೆ ಇದ್ದವು ಸುದ್ದಿಗಳು. ವಾಸ್ತವದಲ್ಲಿ ಸಚಿವ ಸಂಪುಟ ಸಭೆಗಳಿಗೆ ಸಚಿವರುಗಳಿಗೆ ಮಾತ್ರ ಪ್ರವೇಶ. ಸಭೆಯ ಮಿನಿಟ್ಸ್ ಮಾಡಿಕೊಳ್ಳಲು ಕಾನೂನು ಸಚಿವರ ಪರವಾಗಿ ಒಬ್ಬರು ಅಧಿಕಾರಿ ಮತ್ತು ಸಿಎಂ ಕಚೇರಿಯಿಂದ ಇಬ್ಬರು ಉನ್ನತಾಧಿಕಾರಿಗಳನ್ನು ಹೊರತುಪಡಿಸಿದರೆ ಆ ಮುಚ್ಚಿದ ಕೋಣೆಗೆ ಮತ್ತ್ಯಾರಿಗೂ ಪ್ರವೇಶವಿಲ್ಲ. ಒಳಗಿರುವ ಸಚಿವರು ಕೂಡಾ ತಮ್ಮ ಮೊಬೈಲ್ ಬಳಸುವಂತಿಲ್ಲ ಎಂಬ ಅಲಿಖಿತ ಸಂಪ್ರದಾಯವಿದೆ. ಮೀಡಿಯಾದವರಿಗಂತೂ ಅಲ್ಲಿಗೆ ಪ್ರವೇಶವಿಲ್ಲ. ಹಾಗಾಗಿ ಸಚಿವ ಸಂಪುಟ ಸಭೆಯ ನಂತರ, ಒಳಗಡೆ ಏನೆಲ್ಲಾ ವಿಚಾರ ಚರ್ಚೆಯಾದವು, ಯಾವೆಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಲಾಯ್ತು ಅಂತ ಕಾನೂನು ಸಚಿವರೋ, ಅಥವಾ ಮತ್ತ್ಯಾರೋ ಉನ್ನತ ಸಚಿವರೋ ಹೊರಬಂದು ಮೀಡಿಯಾದವರಿಗೆ ಬ್ರೀಫ್ ಮಾಡುತ್ತಾರೆ.
ಇದು ಕ್ಯಾಬಿನೆಟ್ ಸಭೆ ನಡೆಯುವ ವೈಖರಿ. ಅಂತದ್ದರಲ್ಲಿ ಮೊನ್ನೆ ನಮ್ಮ ಮೀಡಿಯಾದವರು, ಒಳಗೆ ನಡೆದದ್ದನ್ನೆಲ್ಲ ತಾವು ಕಣ್ಣಾರೆ ನೋಡಿದೆವೇನೊ ಎಂಬಂತೆ ಬಣ್ಣಿಸಿ ಬರೆದವು, ಸುದ್ದಿ ಬಿತ್ತರಿಸಿದವು. ಸಾಮಾನ್ಯವಾಗಿ ಪತ್ರಕರ್ತರಿಗೆ ಸುದ್ದಿಯ ಮೂಲಗಳು ಅಂತ ಒಂದಿಷ್ಟು ಇರ್ತವೆ. ಅದು ಪೊಲೀಸ್ ಇಲಾಖೆಯೊಳಗಿನ ಮಾಹಿತಿ ಇರಬಹುದು ಅಥವಾ ರಾಜಕಾರಣದ ಪಡಸಾಲೆಯೊಳಗಿನ ಮಾಹಿತಿ ಇರಬಹುದು, ನಡೆಯುತ್ತಿರುವ ಅಥವಾ ನಡೆದ ವಿದ್ಯಮಾನದ accessibility ಇರುವವರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ತಮಗೆ ಇವತ್ತಲ್ಲ ನಾಳೆ ಬೇಕಾಗಬಹುದು, ಹಾಗಾಗಿ ಪತ್ರಕರ್ತರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶವೂ ಆ ಸುದ್ದಿಮೂಲದ ವ್ಯಕ್ತಿಗಳಿಗೆ ಇರುತ್ತದೆ. ಅಂತವರು ನೀಡುವ ಮಾಹಿತಿಯನ್ನು ಆಧರಿಸಿ ಪತ್ರಕರ್ತರು ಸುದ್ದಿ ಮಾಡುವುದು ಸಹಜ.
ಆದರೆ, ಹೀಗೆ ಮಾಡುವಾಗ ಒಂದು ಸಮಸ್ಯೆ ಇರುತ್ತದೆ. ತಮಗೆ ಸುದ್ದಿಯನ್ನು ಹೇಳುತ್ತಿರುವವರು ಸತ್ಯವನ್ನು ಹೇಳುತ್ತಿದ್ದಾರಾ? ಅದರಲ್ಲಿ ತಮ್ಮ ಸ್ವಾರ್ಥ ಹಿತಾಸಕ್ತಿಯ ಆಯಾಮವನ್ನೊ, ಒಗ್ಗರಣೆಯನ್ನೋ ಬೆರೆಸಿಲ್ಲವಾ? ತಮ್ಮನ್ನು ದಿಕುತಪ್ಪಿಸುವ ದುರುದ್ದೇಶವೇನಾದರೂ ಆ ಸುದ್ದಿಮೂಲದಲ್ಲಿದೆಯೇ? ಎಂದು ಪತ್ರಕರ್ತರಾದವರು ತಮ್ಮ ಅನುಭವ ಮತ್ತು ಆಲೋಚನೆಯನ್ನು ಬಳಸಿಕೊಂಡು ನಿರ್ಧಾರಕ್ಕೆ ಬರಬೇಕಾಗುತ್ತದೆ.
ಆದರೆ ಇವತ್ತು ಪತ್ರಿಕೋದ್ಯಮ ಎನ್ನುವುದು ಟಿಆರ್ಪಿ ಸರಕಿನ ಕೈತೊತ್ತು. ’ನಮ್ಮಲ್ಲೇ ಮೊದಲು’, ’ನಮ್ಮದೇ ಇಂಪ್ಯಾಕ್ಟು’ ಎಂಬ ಧಾವಂತದ ಕ್ಲೇಮ್ಗಳಿಗೆ ಒಳಪಟ್ಟು ಪತ್ರಕರ್ತರು ಕೆಲಸ ಮಾಡಬೇಕಾದ ಒತ್ತಡವಿದೆ. ಹಾಗಾಗಿ ಸುದ್ದಿಮೂಲಗಳು ತಲುಪಿಸಿದ ಸುದ್ದಿಯ ವಿಶ್ವಾಸಾರ್ಹತೆಯನ್ನು ಪರಾಮರ್ಶಿಸುವ ಪುರಸೊತ್ತೂ ಪತ್ರಕರ್ತರಿಗೆ ಸಿಗುವುದಿಲ್ಲ. ತಮ್ಮ ಕಿವಿಗೆ ಬಿದ್ದಿದ್ದು ಅಕ್ಷರರೂಪದಲ್ಲಿ ಡೆಸ್ಕ್ರೂಮಿಗೆ ತುಲುಪಿಬಿಡಬೇಕಷ್ಟೆ. ಇಂಥಾ ಧಾವಂತದಿಂದಾಗಿ ಒಮ್ಮೊಮ್ಮೆ ಪತ್ರಕರ್ತರು ನಗೆಪಾಟಲಿಗೆ ಈಡಾಗುವುದರ ಜೊತೆಗೆ, ತಮ್ಮ ವೃತ್ತಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆಗೆ ಒಡ್ಡುತ್ತಿದ್ದಾರೆ.
ಮನುಷ್ಯ ಎಷ್ಟೇ ಆಲೋಚನಾಶಾಲಿಯಾಗಿದ್ದಾಗಲೂ ಅವನೊಳಗೆ ತರ್ಕಗಳು ಗರಿಬಿಚ್ಚುವುದು ಬರವಣಿಗೆಗೆ ಕೂತಾಗ. ಒಂದು ಸಾಲು ಬರೆದು, ಅದು ಸಮಾಧಾನವೆನಿಸದೆ ಅಳಿಸಿಹಾಕಿ, ಮತ್ತೆ ಹೊಸದಾಗಿ ಬರೆಯುತ್ತೇವಲ್ಲವಾ, ಅದೇ ತರ್ಕ. ನನ್ನ ಈ ವಾಕ್ಯ ಏನೆಲ್ಲಾ ಪ್ರಶ್ನೆಗಳಿಗೆ ತುತ್ತಾಗಬಹುದು? ಇದನ್ನು ನಾನು ಸಮರ್ಥಿಸಿಕೊಳ್ಳಬಲ್ಲನೆ? ಹೀಗೆ ಬರೆದರೆ ಓದುಗರಿಗೆ ಅದು ಸರಾಗವಾಗಿ ಅರ್ಥವಾಗುತ್ತಿದೆಯೇ ಅಥವಾ ಗೊಂದಲಕ್ಕೆ ಕಾರಣವಾಗಬಹುದೇ? ಅಥವಾ ಬರಹದ ಆಶಯಕ್ಕೆ ವ್ಯತಿರಿಕ್ತ ಅರ್ಥವೇನಾದರೂ ಹೊರಹೊಮ್ಮುತ್ತಿದೆಯೇ? ಅಂತೆಲ್ಲ ತರ್ಕಿಸಿಕೊಳ್ಳುತ್ತಾ ಬರೆಯುತ್ತೇವೆ. ಆಗ ನಮ್ಮ ಅಭಿಪ್ರಾಯಕ್ಕೆ ನಮ್ಮದೇ ಪ್ರಶ್ನೆಗಳು ಪುಟಿದೆದ್ದು ನಿಲ್ಲುತ್ತವೆ. ಅವುಗಳಿಗೆ ಉತ್ತರ ಕಂಡುಕೊಳ್ಳುತ್ತಾ ಸಾಗಿದಂತೆ ನಮಗೆ ವಿಚಾರ ಸ್ಪಷ್ಟವಾಗುತ್ತಾ ಸಾಗುತ್ತದೆ. ಇಲ್ಲವೆಂದರೆ ಓದುಗನಿಗೂ, ಬರಹಗಾರನಿಗೂ ಒಂದು ದೊಡ್ಡ ಕಂದಕ ಸೃಷ್ಟಿಯಾಗುತ್ತದೆ. ವಿಚಾರ ಅಥವಾ ಸುದ್ದಿ ಅಪವ್ಯಯವಾಗುತ್ತದೆ. ಆದರೆ ಇವತ್ತಿನ ಪತ್ರಿಕೋದ್ಯಮ ಬರವಣಿಗೆಗೆ ಪುರಸೊತ್ತಿಲ್ಲದ ಮಾತುಗಾರಿಕೆಗೆ ಹೊರಳಿದೆ. ಅದೂ ಎಂಥಾ ಮಾತುಗಾರಿಕೆ, ಮೈಕ್ ಮುಂದೆ ಒಮ್ಮೆ ಮಾತು ಶುರು ಮಾಡಿದರೆ ಎಲ್ಲೂ ಬ್ರೇಕ್ ಕೊಡದೆ ಒಂದು ಲಯಬದ್ಧ ದಾಟಿಯಲ್ಲಿ ನಿರಂತರವಾಗಿ ಮಾತಾಡುತ್ತಲೇ ಇರಬೇಕೆಂಬ ಒತ್ತಡದ ಮಾತುಗಾರಿಕೆ. ಅಲ್ಲಿ ರೋಚಕತೆಗೆ ಜಾಗವಿದೆಯೇ ಹೊರತು ತರ್ಕಗಳಿಗೆ ಅವಕಾಶವೂ ಇಲ್ಲ, ಪುರಸೊತ್ತೂ ಇಲ್ಲ. ಇನ್ನು, ಮುದ್ರಣ ಮಾಧ್ಯಮದ ಪತ್ರಕರ್ತರು ಕೂಡಾ ತಮ್ಮ ದೃಶ್ಯಮಾಧ್ಯಮ ಸಹೋದ್ಯೋಗಿಗಳ influenceಗೆ ಒಳಗಾಗಿ, ಅವರಿಗಿಂತಲೂ ರೋಚಕವಾಗಿ, ಓದುಗರನ್ನು ರೋಮಾಂಚನಗೊಳಿಸುವ ಸುದ್ದಿ ನೀಡಬೇಕಾದ ಒತ್ತಡಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ.
ಹಾಗಾದರೆ, ಅವತ್ತು ತಾವು ಪ್ರತ್ಯಕ್ಷವಾಗಿ ನೋಡದೆಯೂ ಕ್ಯಾಬಿನೆಟ್ ಸಭೆಯಲ್ಲಿ ದೊಡ್ಡ ಕದನವೇ ನಡೆಯಿತು ಎಂಬಂತೆ ಮಾಧ್ಯಮಗಳು ವರದಿ ಮಾಡಿದ್ದು, ಮೂಲಗಳ ಮಿಸ್ಟೇಕಿನಿಂದ ಮಾತ್ರವೇ? ಏಕಾಏಕಿ ಈ ತೀರ್ಮಾನಕ್ಕೆ ಬರುವುದಕ್ಕು ಮುನ್ನ ನಾವು ಇವತ್ತಿನ ಪತ್ರಿಕೋದ್ಯಮದ ಇನ್ನೊಂದು ಆಯಾಮವನ್ನೂ ಪರಿಗಣಿಸಬೇಕಾಗುತ್ತದೆ. ಇವತ್ತಿನ ಮಾಧ್ಯಮಲೋಕ ಜಾತಿ ಮತ್ತು ಸೈದ್ಧಾಂತಿಕ ರಾಜಕಾರಣಗಳಿಂದ ವಿಪರೀತ ಎನ್ನುವಷ್ಟು ಸೋಂಕಿಗೆ ತುತ್ತಾಗಿದೆ. ಮಾಧ್ಯಮ ಸಂಸ್ಥೆಗಳ ಚುಕ್ಕಾಣಿಗಳು ಮತ್ತು ಸುದ್ದಿ ನಿರ್ಣಯಿಸುವ ಆಯಕಟ್ಟಿನ ಜಾಗೆಗಳು, ಒಂದೋ ಮೇಲ್ಜಾತಿಯವರ ಕೈಯಲ್ಲಿವೆ ಇಲ್ಲವೇ ಬಂಡವಾಳಶಾಹಿಗಳ ಹಿಡಿತಕ್ಕೊಳಪಟ್ಟಿವೆ. ಕ್ಯಾಮೆರಾವನ್ನು ಹೆಗಲಮೇಲೆ ಹೊತ್ತೊ, ಮೈಕನ್ನು ಕೈನಲ್ಲಿ ಹಿಡಿದೋ ಅಥವಾ ಪೆನ್ನು-ಪೇಪರ್ ಹಿಡಿದು ಬಿಸಿಲಲ್ಲಿ ಅಲೆದಾಡಿ ಸುದ್ದಿಗಳ ಬೇಟೆಯಾಡುವ ಪತ್ರಕರ್ತರ ಬಗ್ಗೆ ಹೇಳುತ್ತಿಲ್ಲ. ಆದರೆ ಸುದ್ದಿ ಯಾವ ಆಯಾಮದಿಂದ, ಯಾವೆಲ್ಲ ವಿವರಣೆಯೊಂದಿಗೆ ಜನರನ್ನು ತಲುಪಬೇಕು ಎಂದು ನೆರೇಟಿವಿಟಿಯನ್ನು ಡಿಸೈಡ್ ಮಾಡುವ ಮತ್ತು ಫೀಲ್ಡ್ ಜರ್ನಲಿಸ್ಟುಗಳ ಮೇಲೆ ಈ ತಮ್ಮ ಡಿಸೀಷನ್ನ ಪ್ರಭಾವ ಹೇರುವ ಆಯಕಟ್ಟಿನ ಜರ್ನಲಿಸ್ಟಿಕ್ ಹುದ್ದೆಗಳಿವೆಯಲ್ಲ, ಅಲ್ಲೆಲ್ಲ ಮೇಲ್ಜಾತಿಯವರ ಉಪಸ್ಥಿತಿಯೇ ಹೆಚ್ಚು. ಹಾಗಾಗಿ ಸುದ್ದಿಗಳು ಪತ್ರಕರ್ತರ ಮೂಗಿನ ನೇರಕ್ಕೆ ವಿನ್ಯಾಸಗೊಳ್ಳುತ್ತಿವೆ ಎಂಬ ಅಪವಾದ ದಟ್ಟವಾಗುತ್ತಿದೆ.
ಈ ಆಯಮಾದಿಂದ ನೋಡಿದಾಗ, ಮೇಲ್ಜಾತಿಯವರ ಗಣನೀಯ ಹಿಡಿತದಲ್ಲಿರುವ ಪತ್ರಿಕೆಗಳು ಮತ್ತು ನ್ಯೂಸ್ಚಾನೆಲ್ಲುಗಳ ಪಾಲಿಗೆ ಜಾತಿಗಣತಿ ಅಪಥ್ಯವೆನಿಸಿರುವ ಸಾಧ್ಯತೆಯನ್ನು ನಾವು ಊಹಿಸಬಹುದು. ಜಾತಿಗಣತಿಗೆ ವ್ಯಾಪಕ ವಿರೋಧವಿದೆ ಎಂಬ ನೆರೇಟಿವಿಟಿಯನ್ನು ಗಟ್ಟಿಗೊಳಿಸಲು ಮೇಲ್ಜಾತಿಯ ಸಂಘಟನೆಗಳು, ಮಠಗಳು, ಸ್ವಾಮೀಜಿಗಳು, ರಾಜಕೀಯ ನಾಯಕರುಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಗೆ ಇರುವ ಮೇಲ್ಜಾತಿ ರಾಜಕಾರಣಿಗಳು ತಮ್ಮ ಸಮುದಾಯದ ಒತ್ತಡಗಳ ಕಾರಣಕ್ಕೆ ಆಗಾಗ್ಗೆ ಅಪಸ್ವರದ ಮಾತುಗಳನ್ನಾಡುತ್ತಿರುವುದನ್ನೂ ಕಂಡಿದ್ದೇವೆ. ಜಾತಿಗಣತಿಗೆ ಸರ್ಕಾರದೊಳಗೇ ಆಂತರಿಕ ವ್ಯಾಪಕ ವಿರೋಧವಿದೆ ಎಂಬ ನೆರೇಟಿವಿಟಿಯನ್ನು ಗಟ್ಟಿಗೊಳಿಸುವ ಲೆಕ್ಕಾಚಾರದ ಭಾಗವಾಗಿ ಮೇಲ್ಜಾತಿ ಪ್ರಣೀತ ಮೀಡಿಯಾಗಳು ಅವತ್ತು ತಮ್ಮ ಕಣ್ಣಮುಂದೆ ನಡೆಯದ ಚರ್ಚೆಯನ್ನೂ ಯುದ್ದದಂತೆ ಬಿಂಬಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.
ಇನ್ಫ್ಯಾಕ್ಟ್, ಹಲವು ಭಿನ್ನಾಭಿಪ್ರಾಯಗಳಿರುವ ಕಾರಣಕ್ಕೇ ಚರ್ಚಿಸಲಿಕ್ಕೆಂದು ಅವತ್ತು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿತ್ತು. ಸಹಜವಾಗಿಯೇ ಅಭಿಪ್ರಾಯಗಳು ವಿನಿಮಯವಾಗಿರುತ್ತವೆ. ಚರ್ಚೆ ನಡೆದಿರುತ್ತದೆ. ಗೊಂದಲ, ಸಲಹೆ, ಪರಿಹಾರಗಳೂ ವ್ಯಕ್ತವಾಗಿರುತ್ತವೆ. ಆದರೆ ವಿಧಾನಸಭೆಯ ಅಸೆಂಬ್ಲಿ ಹಾಲಿನಲ್ಲಿ ಆಡಳಿತ ಪಕ್ಷದವರೂ, ವಿರೋಧಪಕ್ಷದವರೂ ಪರಸ್ಪರ ಕಚ್ಚಾಡುವಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಕಚ್ಚಾಡುತ್ತಾರೆ, ಅಥವಾ ಕಚ್ಚಾಡಬೇಕು ಎಂಬುದು ಈ ಮೇಲ್ಜಾತಿ ಪತ್ರಿಕೋದ್ಯಮಿಗಳ ನಿರೀಕ್ಷೆಯಾಗಿತ್ತು ಅನ್ನಿಸುತ್ತೆ. ಸ್ವತಃ ಹೈಕಮಾಂಡ್, ಮುಖ್ಯವಾಗಿ ರಾಹುಲ್ ಗಾಂಧಿಯವರು ಜಾತಿಗಣತಿ ಬಗ್ಗೆ ತುಂಬಾ ಆಸಕ್ತಿ ಹೊಂದಿರುವುದರಿಂದ ತೀರಾ ತೋಳೇರಿಸಿಕೊಂಡು, ಕೈಕೈ ಮಿಲಾಯಿಸಿ ಬೀದಿ ಜಗಳದಂತೆ ಕಾದಾಡುವುದಕ್ಕೆ ಸಚಿವರುಗಳೇನು ದಡ್ಡರಲ್ಲ. ಅವರಿಗೂ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಯಿರುತ್ತದೆ.
ಆದರೆ, ಸರ್ಕಾರದ ಸಚಿವರುಗಳೇ ಪರಸ್ಪರ ಕಚ್ಚಾಡುವಷ್ಟು ಜಾತಿಗಣತಿಗೆ ವಿರೋಧವಿದೆ ಎಂಬ ಅಭಿಪ್ರಾಯವನ್ನು ಜನರ ನಡುವೆ ಹರಡಿ, ಜಾತಿಗಣತಿಗೆ ಹಿನ್ನಡೆ ಉಂಟುಮಾಡುವ ಮೇಲ್ಜಾತಿ ಮೀಡಿಯಾಗಳ ಹುನ್ನಾರದ ಭಾಗವಾಗಿರಬಹುದು ಆ ವರದಿಗಾರಿಕೆ. ಯಾಕೆಂದರೆ ಸ್ವತಃ ಸಿಎಂ, ಡಿಸಿಎಂ, ಸಚಿವರುಗಳೇ ಅಂತಹ ಯಾವ ವಾಗ್ವಾದಗಳೂ ನಡೆದಿಲ್ಲ ಎಂದು ಹೇಳುತ್ತಿದ್ದಾರೆ. ಈ ರಾಜಕಾರಣಿಗಳ ಮಾತನ್ನು ನಂಬಲು ಸಾಧ್ಯವಿಲ್ಲ, ಜಗಳವಾಗಿದ್ದರೂ ಇಲ್ಲ ಅಂತಲೇ ಹೇಳ್ತಾರೆ ಅಂತ ಕೆಲವರು ವಾದಿಸಬಹುದು. ಓಕೆ, ಇವರುಗಳೆಲ್ಲ ಸುಳ್ಳು ಹೇಳುತ್ತಿದ್ದಾರೆ ಅಂತಲೇ ಅಂದುಕೊಳ್ಳೋಣ. ಆದರೆ, ಸಭೆ ನಡೆಯುವಾಗ ಉಪಸ್ಥಿತಿಯೇ ಇಲ್ಲದ ಮೀಡಿಯಾದವರು ಸತ್ಯವನ್ನೆ ಹೇಳುತ್ತಿದ್ದಾರೆ ಎಂದು ಹೇಗೆ ನಂಬುವುದು? ಅಷ್ಟಕ್ಕೂ ಮೀಡಿಯಾದವರು ನೀಡುತ್ತಿರುವ ವಾಗ್ವಾದದ ಮಾಹಿತಿಯನ್ನು ಅವರಿಗೆ ಕೊಟ್ಟವರು ಕೂಡಾ ಒಬ್ಬ ರಾಜಕಾರಣಿಯೇ ಆಗಿರಬೇಕಲ್ಲವೇ?
ಮೀಡಿಯಾಗಳ ಸುದ್ದಿಮೂಲಗಳು ಮತ್ತು ರೋಮಾಂಚಕಾರಿ ಟಿ.ಆರ್.ಪಿ. ಕುರಿತಂತೆ ನನ್ನ ಗೆಳೆಯರೊಬ್ಬರು ಹಂಚಿಕೊಂಡ ಅನುಭವ ಹೀಗಿದೆ. ಅವರೂ ಪತ್ರಕರ್ತರು. ಗೌರಿ ಲಂಕೇಶರ ಒಡನಾಡಿಯಾಗಿ, ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗಷ್ಟೇ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಇಂಟರ್ನ್ಯಾಷನಲ್ ಮಟ್ಟದಲ್ಲಿ ಚರ್ಚೆಗೀಡಾಗಿದ್ದ ಪ್ರಕರಣ. ಪೊಲೀಸರ ಮೇಲೆ ಸಾಕಷ್ಟು ಒತ್ತಡವಿತ್ತು. ಅವರು ಎಲ್ಲಾ ಆಯಾಮದಿಂದಲೂ ತನಿಖೆ ಮಾಡುತ್ತಿದ್ದರು. ಮೇಲ್ನೋಟಕ್ಕೆ ಇದು ಸೈದ್ಧಾಂತಿಕ ಕಾರಣಕ್ಕೆ ನಡೆದ ಹತ್ಯೆ ಎಂಬುದು ಸ್ಪಷ್ಟವಾಗಿದ್ದರೂ, ಬೇರಾವ ಆಯಾಮವನ್ನೂ ಪೊಲೀಸರು ಸುಲಭವಾಗಿ ರೂಲ್ಡ್ಔಟ್ ಮಾಡಿ ನಿರ್ಲಕ್ಷಿಸುವಂತಿರಲಿಲ್ಲ. ಹಾಗಾಗಿ, ಇದರಲ್ಲಿ ಪ್ಯೂರ್ಲಿ ಕ್ರೈಮ್ ಆಯಾಮವೇನಾದರೂ ಇದೆಯಾ? ಪತ್ರಕರ್ತೆಯಾಗಿದ್ದ ಅವರ ವಿರುದ್ಧ ಲೋಕಲ್ ರೌಡಿಗಳಿಗೇನಾದರೂ ಮತ್ಸರವಿತ್ತೆ? ಅವರಲ್ಲೆ ಯಾರಾದರು ಒಬ್ಬರು ಕೊಲೆ ಮಾಡಿರಬಹುದೆ? ಎಂಬ ಆಯಾಮದಿಂದಲೂ ಒಂದು ತಂಡ ತನಿಖೆ ನಡೆಸುತ್ತಿತ್ತು. ಅದರ ಭಾಗವಾಗಿ ಒಬ್ಬ ರೌಡಿಯನ್ನು ವಿಚಾರಣೆ ಮಾಡಲು ಪೊಲೀಸರು ಗೌರಿ ಲಂಕೇಶ್ ಅವರ ಕಚೇರಿಗೇ ಆ ರೌಡಿಯನ್ನು ಕರೆಸಿಕೊಂಡಿದ್ದರು. ಆತ ಒಂದು ಕಾಲಕ್ಕೆ ರೌಡಿಯಾಗಿದ್ದವನು. ಈಗ ರಿಯಲ್ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡು ಹಳೆಯ ಛಾಯೆಯಿಂದ ದೂರವಾಗುವ ಪ್ರಯತ್ನದಲ್ಲಿದ್ದ. ಅವತ್ತು ನನ್ನ ಈ ಮಿತ್ರರೂ ಕಚೇರಿಯಲ್ಲಿದ್ದರು.
ವಿಚಾರಣೆ ಎಂದರೆ, ನಾವು ಸಿನಿಮಾಗಳಲ್ಲಿ ನೋಡುವಂತೆ ಕತ್ತಲು ಕೋಣೆಯ ನಟ್ಟನಡುವೆ ಕುರ್ಚಿಯೊಂದರ ಮೇಲೆ ಕೂರಿಸಿ, ನೆತ್ತಿಯ ಮೇಲೆ ಸ್ಪಾಟ್ಲೈಟ್ ನೇತುಬಿಟ್ಟು, ಸಣ್ಣದಾಗಿ ಹೊಗೆಯಿಬ್ಬಿಸಿ, ಸುತ್ತಲೂ ಪೊಲೀಸರು ಮುತ್ತಿಕೊಂಡ ವಿಚಾರಣೆಯೇನು ಅಲ್ಲ. ಫಾರ್ಮಾಲಿಟೀಸ್ಗಾಗಿ ಕರೆತಂದು ಲೋಕಾರೂಢಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದೊಂಥರಾ ಡಾಕ್ಯುಮೆಂಟೇಷನ್ ಎನ್ಕ್ವೈಯರಿ ಥರಾ ಇತ್ತಂತೆ. ಅಷ್ಟರಲ್ಲಿ ಕಚೇರಿಯಲ್ಲಿದ್ದ ಟೀವಿ ಪರದೆಯ ಮೇಲೆ ಬ್ರೇಕಿಂಗ್ ನ್ಯೂಸುಗಳು ಬಿತ್ತರಿಸಲಾರಂಭಿಸಿದವು. ’ಗೌರಿ ಲಂಕೇಶ್ ಹತ್ಯೆಯಲ್ಲಿ ಮಹತ್ವದ ತಿರುವು’ ’ನಟೋರಿಯಸ್ ರೌಡಿ …….. ಕೈವಾಡದ ಶಂಕೆ’, ’ಅಜ್ಞಾತ ಸ್ಥಳಕ್ಕೆ ಕರೆದೊಯ್ದು ರೌಡಿಗೆ ಡ್ರಿಲ್ ಮಾಡುತ್ತಿರುವ ಖಾಕಿ’ ’ಹತ್ಯೆಗೂ ಹಿಂದಿನ ದಿನ ಕಚೇರಿಯ ಬಳಿ ಸುಳಿದಾಡಿದ್ದ ರೌಡಿ’ ಅಂತೆಲ್ಲ ಸಾಲುಗಳು ಶರವೇಗದಲ್ಲಿ ಸಂಚರಿಸಿದವಂತೆ.
ಅದನ್ನು ನೋಡಿ, ಅಲ್ಲಿದ್ದ ಪೊಲೀಸರು ಗಹಗಹಿಸಿ ನಕ್ಕರೆ, ಆ ರೌಡಿಯ ಮುಖ ಬಿಳುಚಿಕೊಂಡಿತಂತೆ. ’ಏನ್ಸಾರ್ ಇದು, ನಾನು ಸಿಟಿ ಮಧ್ಯದಲ್ಲಿರೋ, ಗೌರಿಯವರ ಆಫೀಸಿನಲ್ಲೆ ಕೂತ್ಕೊಂಡಿದೀನಿ, ಅವ್ರು ಅಜ್ಞಾತ ಸ್ಥಳದಲ್ಲಿ ಡ್ರಿಲ್ ಅಂತ ಹಾಕ್ತಾ ಇದಾರೆ. ನಿಮ್ಮ ಮೇಲಿರೋ ಪ್ರೆಶರ್ ಕಡಿಮೆ ಮಾಡ್ಕೊಬೇಕು ಅಂತ, ನನ್ನನ್ನ ಈ ಕೇಸಿನಲ್ಲಿ ಫಿಟ್ ಮಾಡ್ಸಿ, ಯಾಕೋ ಎನ್ಕೌಂಟರ್ ಮಾಡೊ ಥರ ಕಾಣಿಸ್ತಿದೀರಿ. ಅದ್ಕೆ ಮೀಡಿಯಾಗಳು ಹಿಂಗೆಲ್ಲ ಸುದ್ದಿ ಮಾಡ್ತಿದಾವೆ. ನಂಗೂ ಇದ್ಕೂ ಯಾವ ಸಂಬಂಧ ಇಲ್ಲ. ನಾನು ಆಯಮ್ಮನ ಮುಖವನ್ನೇ ನೋಡಿಲ್ಲ. ನಾನೀಗ ರೌಡಿಸಮ್ಮನ್ನೂ ಬಿಟ್ಟಿದೀನಿ. ಪ್ಲೀಸ್ ಏನೂ ಮಾಡ್ಬೇಡಿ’ ಸಾರ್ ಎಂದು ಅಂಗಲಾಚಿದನಂತೆ. ಅವನನ್ನು ಸಮಾಧಾನ ಮಾಡುವುದರೊಳಗೆ ಪೊಲೀಸರಿಗೇ ಸಾಕುಸಾಕಾಯ್ತಂತೆ. ಕೊನೆಗೆ, “ನೀನ್ಯಾಕೋ ಜಾಸ್ತಿ ಟೆನ್ಷನ್ ಮಾಡ್ಕೊಂಡಿದೀಯಾ, ಹೊರಗೆ ಹೋಗಿ ಒಂದು ಟೀ ಕುಡ್ಕೊಂಡು, ಸಿಗರೇಟ್ ಸೇದಿ, ನಮಗೂ ಒಂದೈದು ಟೀ ತಗೊಂಡು ಬಾ ಹೋಗು” ಎಂದು ಪೊಲೀಸರೆ ಅವನ ರಿಲ್ಯಾಕ್ಸ್ಗೆ ಉಪಾಯ ಸೂಚಿಸಿದ ಮೇಲೆ, ಅವನು ಆ ’ಅಜ್ಞಾತ’ ಸ್ಥಳದಿಂದ ಸರಾಗವಾಗಿ ಹೋಗಿ ಟೀ ಕುಡಿದು ಬಂದನಂತೆ.
ಗೌರಿ ಹತ್ಯೆ ಕೇಸಿನಲ್ಲಿ ಒಬ್ಬ ರೌಡಿಯನ್ನು ಪೊಲೀಸರು ವಿಚಾರಣೆಗೆ ಕರೆದಿದಾರೆ ಅನ್ನೋದು ಸುದ್ದಿ. ಬಹುಶಃ ಪೊಲೀಸ್ ಸಿಬ್ಬಂದಿಯಲ್ಲೆ ಯಾರೋ ಆ ಸುದ್ದಿ ಕೊಟ್ಟಿರುತ್ತಾನೆ. ಅಷ್ಟಾದರೆ ಅದಕ್ಕೊಂದು ರೋಚಕತೆ ಹೇಗೆ ಬರಬೇಕು? ಟಿ.ಆರ್.ಪಿ ಹೇಗೆ ಪುಟಿದೇಳಬೇಕು? ಅದಕ್ಕೇ ನಮ್ಮ ಪತ್ರಕರ್ತರು ಒಂದಿಷ್ಟು ಒಗ್ಗರಣೆ ಹಾಕಿ, ತಾವು ನೋಡದಿದ್ದರೂ ಡ್ರಿಲ್ಲು, ಅಜ್ಞಾತ ಸ್ಥಳ, ನಟೋರಿಯಸ್ ಅಂತೆಲ್ಲ ಬಿಲ್ಡಪ್ ಕೊಟ್ಟು ಬಿತ್ತರಿಸಿದ್ದವು. ಅದನ್ನು ನೋಡಿ ಸ್ವಲ್ಪಹೊತ್ತು ಆ ರೌಡಿ, ತಾನಿನ್ನು ಎನ್ಕೌಂಟರ್ಗೆ ತುತ್ತಾಗುವುದು ಗ್ಯಾರಂಟಿ ಎಂದು ಕಂಗಾಲಾಗಿ ಹೋಗಿದ್ದ.
ಒಮ್ಮೊಮ್ಮೆ ಹೀಗಿರ್ತವೆ ಸುದ್ದಿಮೂಲಗಳನ್ನು ನಂಬಿಕೊಂಡು ಸುದ್ದಿಮಾಡುವ ಪತ್ರಕರ್ತರ ಅವಾಂತರಗಳು. ಈಗ ಹೇಳಿ, ಕಣ್ಣಿಗೆ ಬಟ್ಟೆಕಟ್ಟಿಕೊಂಡಂತಹ ಪರಿಸ್ಥಿತಿಯಲ್ಲಿ ವರದಿಯಾದ ಕ್ಯಾಬಿನೆಟ್ ಕದನಕಣದ ಮೀಡಿಯಾ ವರದಿಗಾರಿಕೆಯನ್ನು ನಾವು ಸೀರಿಯಸ್ಸಾಗಿ ಪರಿಗಣಿಸಬೇಕೆ? ಪರಿಗಣಿಸುವುದಾದರೆ ನಿಮ್ಮಿಷ್ಟ….




