ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸುವ ಪರೀಕ್ಷೆ-2024ರಲ್ಲಿ ಮಂಡ್ಯದ ಸಂಪ್ರೀತ್ ಸಂತೋಷ್ ತಮ್ಮ ಎರಡನೇ ಪ್ರಯತ್ನದಲ್ಲಿ 652 ನೇ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದವರಾದ ಇವರು ಮಂಡ್ಯನಗರದ ಗಾಂಧಿನಗರ 2ನೇ ಕ್ರಾಸ್ ನಲ್ಲಿ ವಾಸವಿದ್ದಾರೆ.
ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಸ್.ಹೆಚ್.ಸಂತೋಷ್ ಕುಮಾರ್ ಅವರ ಪುತ್ರರಾಗಿರುವ ಸಂಪ್ರೀತ್ ಸಂತೋಷ್, ಈ ಹಿಂದೆ 2023ರ ಯುಪಿಎಸ್ಸಿ ಪರೀಕ್ಷೆಯಲ್ಲಿ 864ನೇ ರ್ಯಾಂಕ್ ಪಡೆದು ಐ.ಆರ್.ಎಸ್. (IRS) ಸೇವೆಗೆ ಆಯ್ಕೆಯಾಗಿ, ಪ್ರಸ್ತುತ ಹೈದರಾಬಾದ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪ್ರೀತ್ ಅವರ ತಂದೆ ಎಸ್.ಹೆಚ್.ಸಂತೋಷ್ ಕುಮಾರ್ ಅವರು ಕೆ.ಎ.ಎಸ್. ಅಧಿಕಾರಿಯಾಗಿ ಸಹಕಾರ ಸಂಘಗಳ ಜಂಟಿ ನಿಬಂಧಕರಾಗಿ ನಿವೃತ್ತಿ ಹೊಂದಿದ್ದು, ಹಾಲಿ ಮಂಡ್ಯ ವಿಶ್ವವಿದ್ಯಾಲಯದಲ್ಲಿನ ಸಮಾಜಕಾರ್ಯ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.




