ರಾಜ್ಯದಲ್ಲಿ ಮೊದಲ ಬಾರಿಗೆ ಪತ್ರಕರ್ತರಿಗಾಗಿ ಆರೋಗ್ಯ ಕ್ಷೇಮನಿಧಿ ಸ್ಥಾಪಿಸಿ, 3 ಲಕ್ಷ ರೂ ಹಣ ಮೀಸಲಿಟ್ಟಿದ್ದ ಮಂಡ್ಯ ನಗರಸಭೆಯು ನಿಧಿಯ ಮೀಸಲು ಹಣವನ್ನು 5 ಲಕ್ಷ ರೂಗಳಿಗೆ ಏರಿಸಿರುವುದು ಸ್ವಾಗತಾರ್ಹ ಹಾಗೂ ಅಭಿನಂದನೀಯ ಎಂದು ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಪ್ರಶಂಸೆ ವ್ಯಕ್ತಪಡಿಸಿದರು.
ಮಂಡ್ಯ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಹಾಗೂ ಆಯುಕ್ತೆ ಪಂಪಶ್ರೀ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರ ಸಂಘದ ಅಂದಿನ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ ಅವರ ನೇತೃತ್ವದಲ್ಲಿ ಸಂಘದಿಂದ ಮಾಡಿದ ಮನವಿ ಮೇರೆಗೆ ಅಂದಿನ ಅಧ್ಯಕ್ಷರಾಗಿದ್ದ ಹೆಚ್.ಎಸ್.ಮಂಜು ಹಾಗೂ ಆಯುಕ್ತ ಲೋಕೇಶ್ ಅವರು ಪತ್ರಕರ್ತರ ಆರೋಗ್ಯ ಕ್ಷೇಮನಿಧಿ ಸ್ಥಾಪಿಸಿದ್ದರು. ನಿಧಿಯ ಮೊತ್ತವನ್ನು ಹೆಚ್ಚಿಸಿರುವುದು ಶ್ಲಾಘನೀಯ ಎಂದರು.
ಸದರಿ ಆರೋಗ್ಯ ಕ್ಷೇಮನಿಧಿಯಿಂದ ಅನಾರೋಗ್ಯಕ್ಕೊಳಗಾದ ಪತ್ರಕರ್ತರ ಆರ್ಥಿಕ ಸಂಷ್ಟದ ಪರಿಸ್ಥಿತಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದ ಅವರು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಪತ್ರಕರ್ತರಿಗೆ ಪರಿಹಾರ ಒದಗಿಸಲು ವಿಳಂಬವಾಗುತ್ತಿದ್ದು, ಇದನ್ನು ಗಮನಿಸಿ ಶೀಘ್ರವಾಗಿ ಪರಿಹಾರ ಒದಗಿಸುವುದಲ್ಲದೇ ತೀರ ಕಡಿಮೆ ಪರಿಹಾರ ನೀಡದೇ ಗರಿಷ್ಠ ೫೦ಸಾವಿರ, ಗಂಭೀರ ಪ್ರಕರಣಗಳ ಸಂದರ್ಭದಲ್ಲಿ 1 ಲಕ್ಷ ರೂ ವರೆಗೆ ಪರಿಹಾರ ನೀಡುವಂತೆ ಮನವಿ ಮಾಡಿದರು.
ಪರಿಹಾರ ನೀಡುವ ಮಾರ್ಗ ಸೂಚಿಯ ನಿಂಬಂಧನೆಗಳಲ್ಲಿ ವಿನಾಯ್ತಿ ನೀಡಿ ಸಹಕರಿಸುವಂತೆ ಕೋರಿದ ಅವರು, ಪತ್ರಕರ್ತರಿಗೆ ನಗರಸಭೆಯಿಂದಲೇ ಪ್ರತ್ಯೇಕ ವಿಮೆ ಮಾಡಿಸಿಕೊಡುವತ್ತ ಸಾಧ್ಯತೆಗಳನ್ನು ಪರಿಶೀಲಿಸಿ ಸಹಕರಿಸುವಂತೆ ಅಭಿನಂದಿತರ ಗಮನ ಸೆಳೆದರು.
ಮತ್ತೋರ್ವ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಸಂಘದ ಆವರಣದ ಖಾತೆಯು ಸಂಪೂರ್ಣವಾಗಿ ಸಂಘದ ಸುಪರ್ದಿಗೆ ನೀಡಲು ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದ ಸಂಪುಟದ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಆಯುಕ್ತೆ ಪಂಪಶ್ರೀ ಮಾತನಾಡಿ, ಜಿಲ್ಲೆಯ ಹಿತ ಕಾಯುವ ಪತ್ರಕರ್ತರಿಗೆ ಕ್ಷೇಮನಿಧಿ ಸ್ಥಾಪಿಸಿ ಪರಿಹಾರ ನೀಡುವುದು ಒಂದು ಸೇವೆಯಾಗಿದೆ. ಅದನ್ನು ಖಂಡಿತವಾಗಿ ಅನುಕೂಲಕರ ರೀತಿಯಲ್ಲಿ ಮಾಡಲಾಗುವುದು ಹಾಗೂ ಪತ್ರಕರ್ತರ ಬೇಡಿಕೆಗಳ ಸಂಬಂಧ ಚರ್ಚಿಸಿ ಧನಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ನಗರಸಭೆಯಿಂದ ಪತ್ರಕರ್ತರ ಆರೋಗ್ಯಕ್ಕಾಗಿ ಮೀಸಲಿಟ್ಟ ಕ್ಷೇಮನಿಧಿ ಒಂದು ಕಿರುಸೇವೆ. ಈ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪತ್ರಕರ್ತರಿಗೆ ನಗರಸಭೆ ವತಿಯಿಂದಲೇ ವಿಮೆ ಮಾಡಿಸಿಕೊಡುವ ಸಲುವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಮಾತನಾಡಿ, ಪತ್ರಕರ್ತರು ನಗರಸಭೆಯ ಸಂಬಂಧ ಬರೆದಾಗಲೇ ನಗರಸಭೆಯಿಂದ ಆಗಬೇಕಾದ ಕೆಲಸಗಳು ಏನೆಂಬುದು ನಮಗೆ ತಿಳಿಯುತ್ತದೆ. ಪತ್ರಕರ್ತರು ಆರೋಗ್ಯವಾಗಿದ್ದರೆ ಸಮಾಜ ಎಚ್ಚರವಾಗಿರುತ್ತದೆ. ಅಂತೆಯೇ ಜಿಲ್ಲೆಯ ಎಲ್ಲಾ ಜನಪತ್ರಿನಿಧಿಗಳನ್ನು ಎಚ್ಚರವಾಗುವಂತೆ ಮಾಡಿ, ನಗರಸಭೆಯಿಂದ ಪತ್ರಕರ್ತರಿಗೆ ಅನುಕೂಲವಾಗಲು ಅವರೂ ಸಹಕರಿಸುವಂತೆ ಎಚ್ಚರಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಉಪಾಧ್ಯಕ್ಷ ಎಂ.ಪಿ.ಅರುಣ್ಕುಮಾರ್ ಹಾಗೂ ಆಯುಕ್ತೆ ಪಂಪಶ್ರೀ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ನವೀನ್ ಚಿಕ್ಕಮಂಡ್ಯ, ಬಿ.ಪಿ.ಪ್ರಕಾಶ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಜೆ.ಬಾಲಕೃಷ್ಣ, ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಇತರರಿದ್ದರು.




