Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನ | ಖರ್ಚುವೆಚ್ಚಗಳ ವಿವರಣಾತ್ಮಕ ಲೆಕ್ಕ ಮಂಡನೆಗೆ ಆಗ್ರಹ

ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಮಂಡ್ಯ ಜಿಲ್ಲಾಡಳಿತವು ಸಮ್ಮೇಳನದ ಆಯ-ವ್ಯಯಗಳ ಲೆಕ್ಕಪತ್ರ ವರದಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ಆದ್ರೆ ಇಷ್ಟು ಸಾಲದು, ವಿವರಣಾತ್ಮಕವಾದ ಅನುದಾನ ಮತ್ತು ಖರ್ಚುಗಳನ್ನು ಉಲ್ಲೇಖಿಸಿದ ಲೆಕ್ಕಪತ್ರವನ್ನು ಬಿಡುಗಡೆಗೊಳಿಸಿ ಸಾರ್ವಜನಿಕ ಲೆಕ್ಕಪತ್ರ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಕವಿ ಹಾಗೂ ಬರಹಗಾರ ರಾಜೇಂದ್ರ ಪ್ರಸಾದ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಸಮ್ಮೇಳನಕ್ಕೆ ಮೊದಲಿನಿಂದಲೂ ಪಾರದರ್ಶಕತೆಯ ದೃಷ್ಟಿಯಿಂದ ಸಮ್ಮೇಳನದ ಖರ್ಚುವೆಚ್ಚಗಳನ್ನು ಸಂಪೂರ್ಣವಾಗಿ ಸಾರ್ವಜನಿಕಗೊಳಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದೆ ಇಡುತ್ತಲೇ ಬಂದಿದೆ. ಆದ್ದರಿಂದ ವಿವರಣಾತ್ಮಕ ಲೆಕ್ಕಪತ್ರವನ್ನು ಬಿಡುಗಡೆ ಮಾಡಬೇಕು ಎಂದರು.

ಈ ವಿವರಣಾತ್ಮಕವಾದ ಲೆಕ್ಕಪತ್ರಗಳ ವರದಿಯು ಸಮ್ಮೇಳನದ ಖರ್ಚುಗಳ ಪಾರದರ್ಶಕತೆಯನ್ನು ತೋರುವುದರ ಜೊತೆಗೆ ಆಗಿರಬಹುದಾದ ಲೋಪದೋಷಗಳ ಪತ್ತೆಗೆ ಸಹಕಾರಿಯಾಗುತ್ತದೆ. ಈಗಾಗಲೇ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹಲವು ಬಗೆಯ ದುಂದುವೆಚ್ಚಗಳು ಕಾಣಿಸುತ್ತಿವೆ. ಹಾಗಾಗಿ ಸಮ್ಮೇಳನದ ಕೋಶಾಧ್ಯಕ್ಷರೂ ಆಗಿದ್ದಂತಹ ಮಾನ್ಯ ಜಿಲ್ಲಾಧಿಕಾರಿಗಳು ಅಧಿಕೃತ ವಿವರಣಾತ್ಮಕ ಲೆಕ್ಕಪತ್ರಗಳ ವರದಿಯ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕೆಂದರು.

ಸಾಹಿತ್ಯ ಸಮ್ಮೇಳನವು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುತ್ತದೆ. ಹಾಗಾಗಿ ಇದರ ಖರ್ಚು ವೆಚ್ಚವನ್ನು ಬಿಡುಗಡೆ ಮಾಡಿ ಎಂದು ಯಾವುದೇ ಸಂಘಟನೆಗಳ ಕೇಳಬೇಕಾಗಿಲ್ಲ, ಸ್ವತಃ ಜಿಲ್ಲಾಡಳಿತ ಹಾಗೂ ಕಸಾಪ ತಾವಾಗಿಯೇ ಬಹಿರಂಗಪಡಿಸಬೇಕಿತ್ತು. ಅಲ್ಲದೇ ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸಬೇಕಿತ್ತು. ಆದರೆ ಆ ಕೆಲಸವಾಗಿಲ್ಲ. ನಮಗೆ ವಿವರಣಾತ್ಮಕ ಮಾಹಿತಿ ಸಿಗಲಿದ್ದಲ್ಲಿ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು.

ಪಾರದರ್ಶಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಇದು ಪೂರಕವಾದ ಕ್ರಮವಾಗಿದ್ದು.ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕ್ರಿಯೆಯಾಗಿದೆ. ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದ ಕುರಿತು ಕೋಶಾಧಿಕಾರಿಗಳು ಉತ್ತರದಾಯಿಗಳಾಗಿದ್ದು ಅವರು ನಮ್ಮ ಆಗ್ರಹಗಳಿಗೆ ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಕಸಾಪ ಕೇಂದ್ರ ಸಮಿತಿ ಲೆಕ್ಕ ಮಂಡಿಸಲಿ

ಕೋಶಾಧಿಕಾರಿಗಳೊಂದಿಗೆ ಕಸಾಪ ಕೇಂದ್ರ ಸಮಿತಿ ತಾನು ಬಳಸಿದ ಎರಡುವರೆ ಕೋಟಿ ಹಣದ ಕುರಿತು ಜಂಟಿಯಾಗಿ ಲೆಕ್ಕಪತ್ರ ಮಂಡಿಸಬೇಕಿತ್ತು. ಈ ಕುರಿತು ಕೋಶಾಧಿಕಾರಿಗಳು ಲೆಕ್ಕ ಪತ್ರ ಮಂಡಿಸುವಂತೆ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರಿಗೆ ಸೂಚಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಸರ್ವಾಧಿಕಾರಿಗಳಲ್ಲ ಎಂಬುದನ್ನು ಅರಿತು ಕಸಾಪ ರಾಜ್ಯಾಧ್ಯಕ್ಷರು ಲೆಕ್ಕ ಮಂಡಿಸಬೇಕು ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಮುಖ್ಯಸ್ಥರಾಗಿ ಸಮಸ್ತ ಕನ್ನಡಿಗರಿಗೆ ತಾವು ಮಾದರಿಯಾದ ನಡೆ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕರುನಾಡ ರಕ್ಷಕರು ಸಂಘಟನೆಯ ನಾಗಣ್ಣಗೌಡ, ಜಾಗೃತ ಕರ್ನಾಟಕದ ಸಂತೋಷ್ ಎಂ, ಚಿತ್ರಕೂಟದ ಅರವಿಂದ ಪ್ರಭು, ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ