Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ : ಕಾಂತರಾಜು

ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ನಿವಾಸಿಗಳಲ್ಲಿ ಹಾಗೂ ಕುಟುಂಬಸ್ಥರಲ್ಲಿ ಮಲೇರಿಯಾ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು ಅವರು ಹೇಳಿದರು.

ವಿಶ್ವ ಮಲೇರಿಯ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಮಲೇರಿಯಾ ನಿಯಂತ್ರಣ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಭಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಜೂನ್ ಮಾಹೆಯಿಂದ ಮಳೆ ಕಾಲ ಶುರುವಾಗಲಿದ್ದು ಸೊಳ್ಳೆಗಳ ಸಂತಾನೋತ್ಪಾತಿ ಹೆಚ್ಚಾಗುವ ಸಾಧ್ಯತೆಯಿದೆ. ಇವುಗಳಿಂದ ಮಲೇರಿಯಾ ಹಾಗೂ ರೋಗವಾಹಕ ಅಶ್ರಿತ ರೋಗಗಳು ಬರುವ ಸಾಧ್ಯತೆಯಿದೆ ಎಂದರು.

ಮಲೇರಿಯಾ ಎನ್ನುವಂತದ್ದು ಅನಾಫಲೀಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚಿದರೆ ಬರುವಂತಹ ಕಾಯಿಲೆ ಆಗಿದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯನ್ನು ಸಹ ಹೊಂದಿದ್ದು ಪ್ರತಿಯೊಬ್ಬರೂ ಜಾಗರುಕರಾಗಿರಿ ಎಂದು ಹೇಳಿದರು.

ನಮ್ಮ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡುಬಂದಿಲ್ಲದಿರುವುದು ಸಂತಸದ ವಿಷಯವಾಗಿದ್ದು, ಜನರು ಸಾಧ್ಯವಾದಷ್ಟು ಸೊಳ್ಳೆ ಕಚ್ಚುವಿಕೆಯಿಂದ ದೂರವಿರಿ ಎಂದರು.

ಸೊಳ್ಳೆಗಳನ್ನು ನಿಯಂತ್ರಿಸಲು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುಬೇಕು ಹಾಗೂ ಕಟ್ಟಡಗಳ ನಿರ್ಮಾಣ ಪ್ರದೇಶ ಹಾಗೂ ಇತರ ಅಭಿವೃದ್ಧಿ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಬೇಕು ಎಂದು ತಿಳಿಸಿದರು.

ಜಾನುವಾರುಗಳು ನೀರು ಕುಡಿಯುವ ಶೇಖರಣಾ ತೊಟ್ಟಿಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು, ಶಾಶ್ವತ ನೀರಿನ ತಾಣಗಳು ಹಾಗೂ ಕಾರಂಜಿಗಳಲ್ಲಿ ಲಾರ್ವಾಹಾರಿ ಮೀನು ಮರಿಗಳನ್ನು ಬಿಡುವುದು ಹಾಗೂ ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂರಕ್ಷಣಾ ವಿಧಾನಗಳನ್ನು ಸಹ ಅನುಸರಿಸಿ ಎಂದು ಮಲೇರಿಯಾ ಮುನ್ನಚ್ಚರಿಕೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು.

ಮಲೇರಿಯ ನಿಯಂತ್ರಣ ಕುರಿತ ಜಾಗೃತಿ ಜಾಥಾವು ನಗರದ ಜಯಚಾಮರಾಜ ವೃತ್ತದಿಂದ ಹೊರಟು ಬೆಂಗಳೂರು, ಮೈಸೂರು ಮುಖ್ಯ ರಸ್ತೆ ಮುಖಾಂತರ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ ತಲುಪಿತು. ನಗರದ ವಿವಿಧ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾಳ್ನಡಿಗೆ ಜಾಥದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಜವರೇಗೌಡ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಆಶಾಲತಾ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ