ವರದಿ: ಪ್ರಭು ವಿ ಎಸ್
ಮದ್ದೂರು ತಾಲೂಕಿನ ಆತಗೂರು ಹೋಬಳಿ ವ್ಯಾಪ್ತಿಯ ಎಲ್ಲಾ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸುವ ಮೂಲಕ ಈ ಭಾಗದ ರೈತರ ಬಹುದಿನದ ಕನಸನ್ನು ಈಡೇರಿಸಿ ಸಮಗ್ರ ವ್ಯವಸಾಯ ಮಾಡಲು ಅನುಕೂಲ ಕಲ್ಪಿಸುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.
ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದ ಏತ ನೀರಾವರಿ ಯೋಜನೆಯ “ಬಿ” ಬಿಂದುವಿನ ಉನ್ನತೀಕರಣ ಮತ್ತು ಪುನರುಜ್ಜೀವನಗೊಳಿಸಿರುವ 250 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬನ್ನಹಳ್ಳಿ ಏತ ನೀರಾವರಿ ಯೋಜನೆಯನ್ನು ಮೂರು ತಿಂಗಳ ಅವಧಿಯಲ್ಲಿ ಚಾಲನೆ ದೊರೆಯಲಿದ್ದು, ಇದರಿಂದಾಗಿ ಸುಮಾರು 19 ಕೆರೆಗಳಿಗೆ ನೀರು ತುಂಬಿಸಿ ಸ್ಥಳೀಯ ರೈತರು ಬೇಸಾಯ ಮಾಡುವ ಜತೆಗೆ ಅಂತರ್ಜಲ ವೃದ್ಧಿ, ಕೊಳವೆ ಬಾವಿಗಳ ಪುನಶ್ಚೇತನ ಇನ್ನಿತರೆ ಅನುಕೂಲವಾಗಲಿದೆ ಎಂದರು.
ಮದ್ದೂರು ತಾಲೂಕಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ಕೂಳಗೆರೆ ಗ್ರಾಮ ಸೇರಿದಂತೆ ಈ ಭಾಗದ ತೈಲೂರು ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಡಿ.ಪಿ.ಆರ್. ರಚನೆ ಮಾಡಿದ್ದು ಕೆರೆಗಳ ತೂಬು ರಿಪೇರಿ, ನಾಲೆಗಳ ಆಧುನೀಕರಣ, ಶಿಥಿಲಗೊಂಡಿರುವುದನ್ನು ದುರಸ್ತಿಗೊಳಿಸಿ ನೀರು ಹೆಚ್ಚು ಶೇಖರಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಕೂಳಗೆರೆ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಿರುವುದರಿಂದ ಈ ಭಾಗದ 2,100 ಎಕರೆ ಪ್ರದೇಶದ ಜಮೀನುಗಳಿಗೆ ನೀರು ಹರಿಸಿ ವ್ಯವಸಾಯ ಮಾಡಲು ಅನುಕೂಲ ಕಲ್ಪಿಸಲಾಗಿದ್ದು 1977ರಲ್ಲಿ ನಿರ್ಮಿಸಲಾಗಿದ್ದ ಕೂಳಗೆರೆ ಏತನೀರಾವರಿ ಯೋಜನೆ ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡು ರೈತರು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ತಮಗೆ ಮನವಿ ಸಲ್ಲಿಸಿದ್ದರು.
ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಮಾರು 250 ಲಕ್ಷ ರೂ. ವೆಚ್ಚದಲ್ಲಿ ಹೊಸ ಮಾದರಿಯ 165 ಎಚ್.ಪಿ ಸಾಮರ್ಥ್ಯದ ಯಂತ್ರೋಪಕರಣ, ಪ್ಯಾನಲ್‌ಬೋರ್ಡ್, ಕಂಟ್ರೋಲ್, ಪ್ಯಾಲನ್ ಹಾಗೂ 500 ಕೆ.ವಿ. ಟ್ರಾನ್ಸ್ಫಾರಂ ಅಳವಡಿಸಿ ನಿಯಂತ್ರಣ ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ತಮ್ಮ ಶಾಸಕರ ಅವಧಿಯಲ್ಲಿ ಗ್ರಾಮ ಅಭಿವೃದ್ಧಿ ಒಂದು ಕಡೆಯಾದರೆ ರೈತರಿಗೆ ನೀರು ಬೇಡಿಕೆಯನ್ನು ತಣಿಸಲು ಹೆಚ್ಚಿನ ಒತ್ತು ನೀಡುತ್ತಿದ್ದು ಸರಕಾರ ನೀರಾವರಿ ಕ್ಷೇತ್ರವನ್ನು ಆಧುನೀಕರಣಗೊಳಿಸಲು ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ತಂದು ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದರು.
ಈ ವೇಳೆ ಕೊಕ್ಕರೆ ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಕೆಂಪರಾಜು, ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಕೃಷ್ಣ, ಜಯರಾಮಣ್ಣ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು, ಕಾರ್ಯಪಾಲಕ ಅಭಿಯಂತರ ಎಂ.ಎನ್.ಮೋಹನ್, ಸಹಾಯಕ ಅಭಿಯಂತರ ಎ.ಆರ್.ನವೀನ್, ಚೈತ್ರ, ಪಿ.ಡಿ.ಓ ರಾಜಣ್ಣ, ಮುಖಂಡರಾದ ಲಿಂಗೇಗೌಡ, ಕುಮಾರ, ರಾಮಕೃಷ್ಣ, ಗುಂಡ, ಕೆ.ಎಸ್.ಯೋಗೇಶ್ ಇತರರಿದ್ದರು.




