ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯ ಹೇಯ ಹಾಗೂ ಪೈಶಾಚಿಕ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಮುಸ್ಲಿಂ ಬಾಂಧವರು ಶುಕ್ರವಾರ ಸಂಜೆ ಮಂಡ್ಯನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರಾಡಳಿತ ಪ್ರದೇಶವಾಗಿರುವ ಫಹಲ್ಗಾಮ್ ನಲ್ಲಿ ನಡೆದ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಮುಖ್ಯ ಕಾರಣವಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಭಾವಚಿತ್ರವಿಡಿದು ಆಕ್ರೋಶ ವ್ಯಕ್ತಪಡಿಸಿ, ರಾಜೀನಾಮೆಗೆ ಒತ್ತಾಯಿಸಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, 2019 ಸಾರ್ವತ್ರಿಕರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ನಡೆದಿತ್ತು. ಆಗ 40 ಜನ ಭಾರತೀಯ ಸೈನಿಕರು ಬಲಿಯಾಗಿದ್ದರು. ಪ್ರಸ್ತುತ ಬಿಹಾರ, ಗುಜರಾತ್ ವಿಧಾನಸಭಾ ಚುನಾವಣೆಗಳು ಸಮೀಪದಲ್ಲಿರುವಾಗ ಪಹಲ್ಗಮ್ ದಾಳಿ ನಡೆದಿದೆ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ, ಆದ್ದರಿಂದ ಪ್ರದಾನಿ ಮೋದಿ ದೇಶದ ಜನರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಫಹಲ್ಗಮ್ ದಾಳಿ ಹಿನ್ನೆಲೆಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರದಾನಿ ಮೋದಿಯವರೇ ಹಾಜರಿರಲಿಲ್ಲ, ಇದು ಕೇಂದ್ರ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ಅವರು ದೇಶದ ಜನರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಮುಗ್ಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿರುವ ದಾಳಿ ಮಾನವೀಯತೆಯ ಮೇಲೆ ನಡೆದಿರುವ ದಾಳಿಯಾಗಿದೆ. ಈ ದಾಳಿಗೆ ಕಾರಣರಾದ ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರು ಜಾತಿ-ಧರ್ಮವೆನ್ನದೆ ಎಲ್ಲರೂ ಒಟ್ಟಾಗಿ ನಿಲ್ಲುವುದು ಅತ್ಯಂತ ಅಗತ್ಯವಾಗಿದೆ. ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಧಾವಿಸಿ ಭಯೋತ್ಪಾದಕರಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ ಕಾಶ್ಮೀರದ ಕುದುರೆ ಸವಾರ ಸವಾರ ಸಯ್ಯದ್ ಆದಿಲ್ ಹುಸೇನ್ ಷಾ ಅವರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಕೆಲವು ಮಾಧ್ಯಮಗಳು ಈ ದಾಳಿಯ ವಿಷಯದಲ್ಲಿ ಕೋಮು ಭಾವನೆಗಳನ್ನು ಕೆರಳಿಸಲು ಮುಂದಾಗಿರುವುದು ಸರಿಯಲ್ಲ. ಕೆಲವು ಮಾಧ್ಯಮಗಳು ಹಿಂದೂ-ಮುಸ್ಲಿಂ ಎಂದು ಹೇಳುತ್ತಾ ಪ್ರಚೋದನೆಗೆ ಒಳಗಾಗುವ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಸಂತ್ರಸ್ತರ ಹೇಳಿಕೆಗಳನ್ನೇ ತಿರುಚುತ್ತಿವೆ. ಉಗ್ರರ ದಾಳಿಯಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥರವರ ಪತ್ನಿ ಪಲ್ಲವಿಯವರು ಮೂರು ಮುಸಲ್ಮಾನರು ನಮ್ಮನ್ನು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಎಂದು ಹೇಳುತ್ತಾ ರಕ್ಷಣೆ ಮಾಡಿದರು ಎಂದು ಹೇಳಿದರೆ, ಅದನ್ನು ಬಿಸ್ಮಿಲ್ಲಾ ಬಿಸ್ಮಿಲ್ಲಾ ಎಂದು ಹೇಳುತ್ತಾ ಹತ್ಯೆ ಮಾಡಿದರು ಎಂಬುದಾಗಿ ಸುಳ್ಳುಗಳನ್ನೇ ಬಿತ್ತರಿಸಿ ಆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವುದು ಕೂಡ ಖಂಡನೀಯ. ಮಾಧ್ಯಮಗಳು ಈ ಪೈಶಾಚಿಕ ಘಟನೆಯನ್ನು ಖಂಡಿಸುವ ಮೂಲಕ, ಈ ಘಟನೆಗಳಿಗೆ ಕಾರಣ ಏನೆಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬೇಕಿದೆ ಎಂದರು.
ಮಂಡ್ಯನಗರದ ಜೆ ಸಿ ವೃತ್ತದ ಬಳಿ ಜಮಾವಣೆಗೊಂಡು ಅವರು ಮೇಣದಬತ್ತಿ ಮೆರವಣಿಗೆಯನ್ನು ಹಮ್ಮಿಕೊಂಡು ಆರ್ ಬಿ ರಸ್ತೆ ಮೂಲಕ ಸ್ಟೇಡಿಯಂ ಹೆಬ್ಬಾಗಿನವರೆಗೆ ಮೆರವಣಿಗೆ ನಡೆಸಿ ಅಲ್ಲಿ ಸಂತಾಪ ಸಲ್ಲಿಸಿದರು. ಉಗ್ರರ ದಾಳಿಗೆ ಪ್ರೇರಣೆಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಡಾ ಅಧ್ಯಕ್ಷ ನಹೀಂ, ಕಾಂಗ್ರೆಸ್ ಮುಖಂಡರಾದ ಚಿದಂಬರ್, ಸಿ.ಎಂ.ದ್ಯಾವಪ್ಪ, ಮಹಿಳಾ ಘಟಕ ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮಿ ರಘುನಂದನ್, ಶ್ರೀಧರ್, ಎಲ್.ಸಂದೇಶ್, ಮಂಡ್ಯ ಜಿಲ್ಲಾ ಕುರುಬರ ಸಂಘದ ಸುರೇಶ್, ಹೆಚ್.ಡಿ.ಜಯರಾಂ, ಗುರು ಹಾಗೂ ಇಂದಿರಾ ಸತೀಶ್ ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




