Tuesday, November 24, 2026

ಪ್ರಾಯೋಗಿಕ ಆವೃತ್ತಿ

ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಎಚ್.ಕೆ.ವೀರಣ್ಣಗೌಡ -ಎಸ್.ಎಂ.ಕೃಷ್ಣ: ಚುಂಚಶ್ರೀ ಬಣ್ಣನೆ

ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ತಮ್ಮ ಮೌಲ್ಯಾಧಾರಿತ ಕೆಲಸಗಳ ಮೂಲಕ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಾಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ದೂರು ಪಟ್ಟಣದ ಎಂ.ಎಚ್. ಚನ್ನೇಗೌಡ ವಿದ್ಯಾನಿಲಯದಲ್ಲಿ ಗುರುವಾರ ಸಂಜೆ ಡಾ. ಶಾಂತ ಮರಿಯಪ್ಪ ಸಭಾಂಗಣ ಉದ್ಘಾಟನೆ, ಎಚ್. ಕೆ.ವೀರಣ್ಣಗೌಡರ 127 ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ 94 ನೇ ಜನ್ಮಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಎಚ್.ಕೆ.ವೀರಣ್ಣಗೌಡರು ಸಮಾಜದ ಏಳಿಗೆಗೆ ಸಾಕಷ್ಟು ದುಡಿದಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಉತ್ತಮ ಸಂಸ್ಕಾರವುಳ್ಳ ವ್ಯಕ್ತಿ ಬರಬೇಕೆಂಬುದು ಅವರ ಬಯಕೆಯಾಗಿತ್ತು.ಅದರಂತೆ ಬಾಲಗಂಗಾಧರ ಸ್ವಾಮೀಜಿಗಳು ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾಗಲು ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣ ಗೌಡರ ಪಾತ್ರವಿತ್ತು ಎಂದರು.

ಎಸ್.ಎಂ. ಕೃಷ್ಣ ರವರು ಮುಖ್ಯಮಂತ್ರಿ ಆಗಿ ರಾಜ್ಯಕ್ಕೆ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕೃಷ್ಣನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಹತ್ತಾರು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿದರು. ಬಡವರಿ ಹಾಗೂ ಶ್ರೀ ಸಾಮಾನ್ಯನ ಮಕ್ಕಳು ಇಂಜಿನಿಯರಿಂಗ್ ಶಿಕ್ಷಣ ಪಡೆದು ದೇಶ-ವಿದೇಶದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು. ಒಮ್ಮೆ ಬಾಲಗಂಗಾಧರನಾಥ ಸ್ವಾಮೀಜಿಯವರು ಏಕೆ ರಾಜ್ಯದಲ್ಲಿ ಇಷ್ಟೊಂದು ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಮಾಡುತ್ತಿದ್ದೀರಿ ಎಂದು ಕೇಳಿದರು.

ಆ ಸಂದರ್ಭದಲ್ಲಿ ಕೃಷ್ಣರವರು ನಮ್ಮ ರಾಜ್ಯದಲ್ಲಿ ಹಲವು ಐಟಿ-ಬಿಟಿ ಕಂಪನಿಗಳು ಸ್ಥಾಪನೆಯಾಗಿವೆ. ಅಲ್ಲಿ ಕೆಲಸ ಮಾಡಲು ಸಮರ್ಥ ಇಂಜಿನಿಯರಿಂಗ್ ಪದವೀಧರರು ಬೇಕು. ಸಮರ್ಥ ಅಭ್ಯರ್ಥಿಗಳು ಸಿಗದಿದ್ದರೆ ಬೇರೆ ರಾಜ್ಯಗಳ ಜನರು ಬರುತ್ತಾರೆ. ಹಾಗಾಗಿ ನಮ್ಮ ರಾಜ್ಯದ ಬಡ ರೈತರ, ಸಾಮಾನ್ಯ ಜನರ ಮಕ್ಕಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಹಂಬಲದಿಂದ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿದ್ದೇನೆ ಎಂದು ತಿಳಿಸಿ,ನಮ್ಮ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿಗೂ ಇಂಜಿನಿಯರಿಂಗ್ ಕಾಲೇಜು ತೆರೆಯಲು ಅನುಮತಿ ನೀಡಿದರು. ಇದು ಅವರ ದೂರದೃಷ್ಟಿಯನ್ನು ತೋರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್‌.ಶಂಕರ್, ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಕೆ‌.ಟಿ. ಚಂದು,ಅಪೂರ್ವ ಚಂದು,ಹರೀಶ್ ಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಶಿವರಾಮ್, ಸುನಿಲ್ ಕುಮಾರ್, ಮಹಾಲಿಂಗಯ್ಯ, ಚನ್ನಂಕೇಗೌಡ, ಶಿವಲಿಂಗೇಗೌಡ,ಪ್ರಕಾಶ್,ಸುರೇಂದ್ರ,ನಂದಿನಿ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ