Saturday, November 21, 2026

ಪ್ರಾಯೋಗಿಕ ಆವೃತ್ತಿ

ತಾಳ್ಮೆ- ಚಾಣಾಕ್ಷತೆಯಿಂದ ರಾಜಕೀಯ ಸವಾಲು ಎದುರಿಸಿದ ಎಸ್.ಎಂ.ಕೃಷ್ಣ ; ಬಿ.ಎಲ್.ಶಂಕರ್

ತಾಳ್ಮೆ-ಚಾಣಾಕ್ಷತೆಯಿಂದ ಕಾವೇರಿ ವಿವಾದ,ಚಿತ್ರನಟ ರಾಜ್ ಕುಮಾರ್ ಅಪಹರಣದಂತಹ ರಾಜಕೀಯ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದು ಎಸ್.ಎಂ.ಕೃಷ್ಣ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅಭಿಪ್ರಾಯ ಪಟ್ಟರು.

ಮದ್ದೂರು ಪಟ್ಟಣದ ಎಂ.ಎಚ್‌. ಚನ್ನೇಗೌಡ ವಿದ್ಯಾನಿಲಯದಲ್ಲಿ ಗುರುವಾರ ಸಂಜೆ ಡಾ. ಶಾಂತ ಮರಿಯಪ್ಪ ಸಭಾಂಗಣ ಉದ್ಘಾಟನೆ, ಎಚ್‌. ಕೆ.ವೀರಣ್ಣಗೌಡರ 127 ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ 94 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಚ್. ಕೆ. ವೀರಣ್ಣಗೌಡ ಹಾಗೂ ಎಸ್.ಎಂ‌.ಕೃಷ್ಣ ಅವರ ಜನ್ಮದಿನಾಂಕ ಒಂದೇ ಆಗಿರುವುದು ಮತ್ತು ಅಂತಹ ಕಾರ್ಯಕ್ರಮಕ್ಕೆ ಬಂದಿರುವುದು ನನ್ನ ಅದೃಷ್ಟ. ಎಚ್.ಕೆ. ವೀರಣ್ಣಗೌಡರು ಶಿಕ್ಷಕರಾಗಿ, ಪತ್ರಿಕಾ ಸಂಪಾದಕರಾಗಿ, ರಾಜ್ಯದ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಸಾಮಾನ್ಯವಾಗಿ ಒಬ್ಬರು ರಾಜಕೀಯವಾಗಿ ಬೆಳೆದ ನಂತರ ಮತ್ತೊಬ್ಬರನ್ನು ಬೆಳೆಸಲು ಹೋಗುವುದಿಲ್ಲ. ಆದರೆ ವೀರಣ್ಣಗೌಡರು ಮೈಸೂರು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ವಿದೇಶದಲ್ಲಿ ವ್ಯಾಸಂಗ ಮಾಡಿದ್ದ ಸಮಾಜವಾದಿ ಸಿದ್ಧಾಂತ ಹಾಗೂ ಎಡಪಂಥೀಯ ಧೋರಣೆಯುಳ್ಳ ಎಸ್.ಎಂ. ಕೃಷ್ಣ ರವರಿಗೆ ನೀವು ಕಾಂಗ್ರೆಸ್ಸಿಗೆ ಬಂದರೆ ಉತ್ತಮ ನಾಯಕನಾಗಿ ಬೆಳೆಯಬಹುದು ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಮೂಲಕ ರಾಜ್ಯದಲ್ಲಿ ಸಮರ್ಥ ನಾಯಕನನ್ನು ಹುಟ್ಟುಹಾಕಿದರು. ವೀರಣ್ಣ ಗೌಡರ ಗೌಡರು ಅರಸು ರಾಮಕೃಷ್ಣ ಹೆಗಡೆಯವರಂತೆ ಹಲವರನ್ನು ನಾಯಕರನ್ನಾಗಿ ಮಾಡಿದರು. ಆದಿಚುಂಚನಗಿರಿ ಶ್ರೀಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ,ಅವರು ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸಿದ್ದಾರೆ ಎಂದರು.

ಇರ್ವಿನ್ ಹೋರಾಟ

1931ರಲ್ಲಿ ಇರ್ವಿನ್ ನಾಲಾ ರೈತರ ಹೋರಾಟ ರೂಪಿಸಿ ಮಂಡ್ಯದಿಂದ ಬೆಂಗಳೂರಿಗೆ ಸುಮಾರು 4,000 ರೈತರನ್ನು ಪಾದಯಾತ್ರೆಯ ಮೂಲಕ ಅಂದಿನ ಮೈಸೂರು ದಿವಾನರನ್ನು ಭೇಟಿ ಮಾಡಿ ಪರಿಹಾರ ಪಡೆದಿದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಬ್ರಿಟಿಷ್ ಸರ್ಕಾರ ನಾಲೆ ಮಾಡಲು ಅನುಮತಿ ನೀಡಿದರೆ ನಾಲೆಯ ಪಕ್ಕ ನಿಮಗೆ 100 ಎಕರೆ ಜಮೀನು ನೀಡುವುದಾಗಿ ಆಮಿಷ ಒಡ್ಡಿದರು.ಆದರೆ ವೀರಣ್ಣಗೌಡರು ಆಮಿಷಕ್ಕೆ ಆಸೆಪಡದೆ ರೈತರ ಪರ ನಿಂತು ಹೋರಾಟ ದಲ್ಲಿ ಭಾಗವಹಿಸಿದ್ದು, ಅವರ ನೈತಿಕತೆಗೆ ಸಾಕ್ಷಿ ಎಂದರು.

ಸಜ್ಜನ ರಾಜಕಾರಣಿ

ಎಸ್.ಎಂ. ಕೃಷ್ಣ ಅವರು ಸುಸಂಸ್ಕೃತರಾಗಿ ಬೆಳೆಯಲು ರಾಮಕೃಷ್ಣ ಆಶ್ರಮದ ವಿದ್ಯಾಭ್ಯಾಸವೇ ಕಾರಣ ಎನ್ನಬಹುದು. ಸಜ್ಜನಿಕೆ, ಸೌಜನ್ಯದ ರಾಜಕಾರಣಿಯಾಗಿದ್ದ ಅವರು ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅವಧಿಯಲ್ಲಿ ಜಾನ್ ಎಫ್. ಕೆನಡಿ ಅವರ ಪರ ಪ್ರಚಾರ ಮಾಡಿದ್ದರು.
ಎಸ್.ಎಂ. ಕೃಷ್ಣ ಅವರು ನಾಲ್ಕು ಸದನಗಳ ಸದಸ್ಯರಾಗಿದ್ದ ಅಪರೂಪದ ರಾಜಕಾರಣಿ. ಅವರು ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುವ ಮೂಲಕ ಕೈಗಾರಿಕೆಗಳಿಗೆ ನಾಂದಿ ಹಾಡಿದರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿಸಿಯೂಟ, ಸ್ತ್ರೀ ಶಕ್ತಿ ಯೋಜನೆ, ಯಶಸ್ವಿನಿ ಮೊದಲಾದ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ತೆಗೆದುಕೊಂಡು ಹೋಗಿ ಸಿಲಿಕಾನ್ ಸಿಟಿ ಮಾಡಿದರು.
ಮದ್ಯ ಮಾರಾಟಕ್ಕಾಗಿ ಪಾನೀಯ ನಿಗಮ ಸ್ಥಾಪಿಸಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುವಂತೆ ಮಾಡಿದರು. ಇಂದು ಅಬಕಾರಿ ಇಲಾಖೆಯಿಂದ ವಾರ್ಷಿಕ 34 ಸಾವಿರ ಕೋಟಿ ಆದಾಯ ಬರುತ್ತಿದೆ. ಇದಕ್ಕೆ ಎಸ್.ಎಂ. ಕೃಷ್ಣ ಅವರೇ ಕಾರಣ ಎಂದರು.

ಕೇಂದ್ರ ಸಚಿವ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಹಲವೆಡೆ ಪಾಸ್ ಪೋರ್ಟ್ ಕಚೇರಿಗಳು ಪ್ರಾರಂಭವಾಗಲು ಕಾರಣರಾದರು. 2001ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶ್ರೀಗಂಧದ ಮರವನ್ನು ಯಾರು ಬೇಕಾದರೂ ಬೆಳೆಯಲು ಆದೇಶ ಮಾಡಿದರು. ಇದರಿಂದಾಗಿ ಅನೇಕ ಕಡೆ ರೈತರು ಶ್ರೀಗಂಧ ಬೆಳೆದು ಅತ್ಯುತ್ತಮ ಆದಾಯದ ಮೂಲವನ್ನು ಕೊಂಡುಕೊಂಡರು ಎಂದು ತಿಳಿಸಿದರು.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವಾರು ರಾಜಕೀಯ ಸವಾಲುಗಳನ್ನು ತಮ್ಮ ತಾಳ್ಮೆ,ಸಜ್ಜನಿಕೆಯಿಂದ ಎದುರಿಸಿದರು. ಸಿಎಂ ಅಗಿದ್ದ ಸಂದರ್ಭದಲ್ಲಿ ಕಾವೇರಿ ವಿವಾದ ತಲೆದೋರಿತು. ಮೂರು ವರ್ಷ ಕಾಲ ರಾಜ್ಯದಲ್ಲಿ ಬರಗಾಲವಿದ್ದರೂ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಬೇಕಿತ್ತು. ಈ ಸಂದರ್ಭದಲ್ಲಿ ಅವರು ನಡೆಸಿದ ಪಾದಯಾತ್ರೆ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಎಂದು ಅಕ್ರೋಶ ವ್ಯಕ್ತಪಡಿಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪದವಿ ಹೋದರೆ ಹೋಗಲಿ,ನಾನು ರೈತರ ಪರ ನಿಲ್ಲವುದಾಗಿ ಬೇಕೆಂದು ಹೇಳಿದ್ದರು. ಆದರೆ ರಾಜ್ಯಕ್ಕೆ ಮುಖ್ಯಮಂತ್ರಿ ಕೃಷ್ಣ ರವರ ಸೇವೆ ಇನ್ನೂ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಚಿವರು,ಶಾಸಕರ ಒತ್ತಾಸೆಯಂತೆ ಸುಪ್ರೀಂಕೋರ್ಟ್ ಗೆ ಕ್ಷಮಾಪಣಾ ಅರ್ಜಿ ಬರೆದು ಕೊಡಬೇಕಾಯಿತು ಎಂದರು.

ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ. ಈ ಸಂದರ್ಭದಲ್ಲಿ ಕೃಷ್ಣರುವರು ತಾಳ್ಮೆ ಮತ್ತು ಚಾಣಾಕ್ಷತೆಯಿಂದ ಪರಿಸ್ಥಿತಿ ಎದುರಿಸಿದರು.108 ದಿನ ಕಾಡಿನಲ್ಲಿ ಕಳೆದ ರಾಜಕುಮಾರ ಅವರನ್ನು ವೀರಪ್ಪನ್ ವರೆಗೂ ತಲುಪಿ ಸಂಧಾನ ಮಾಡಿ, ಅಂತಿಮವಾಗಿ ರಾಜ್ ಕುಮಾರ್ ಅವರನ್ನು ಕ್ಷೇಮವಾಗಿ ಕರೆ ತಂದರು.ಒಂದು ವೇಳೆ ರಾಜಕುಮಾರ್ ಅವರನ್ನು ಜೀವಂತವಾಗಿ ಬಿಡಿಸಲು ಸಾಧ್ಯವಾಗದಿದ್ದರೆ ಕನ್ನಡಿಗರು ಮತ್ತು ತಮಿಳರು ಶಾಶ್ವತವಾಗಿ ಶತ್ರುಗಳಾಗುತ್ತಿದ್ದರು. ನಿರಂತರ ಸಂಘರ್ಷ, ಅರಾಜಕತೆ ಏರ್ಪಡುತ್ತಿತ್ತು.ಇದನ್ನು ಅರಿತಿದ್ದ ಕೃಷ್ಣರವರು ಚಾಣಾಕ್ಷತೆಯಿಂದ ರಾಜಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡಿಸಿ ಕರೆತಂದರು ಎಂದು ತಿಳಿಸಿದರು.

ಕೃಷ್ಣರವರಿಗೆ ಟೆನಿಸ್ ಕ್ರೀಡೆಯ ಮೇಲೆ ಅಗಾಧವಾದ ಪ್ರೀತಿ ಇತ್ತು. ವಿಂಬಲ್ಡನ್, ಫ್ರೆಂಚ್ ,ಆಸ್ಟ್ರೇಲಿಯಾ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿ ನೋಡಲು ಹೋಗುತ್ತಿದ್ದರು.ಅಲ್ಲದೆ ಕೃಷ್ಣರವರಿಗೆ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಹಿಂದುಳಿದ ವರ್ಗಗಳ ತಾಲೂಕುಗಳಿಗೆ ಸವಲತ್ತು ಸಿಗುವ ನಿಟ್ಟಿನಲ್ಲಿ ನಂಜುಂಡಪ್ಪ ಆಯೋಗ ರಚನೆ ಮಾಡಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದು ಬಣ್ಣಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾವಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಕೆ‌.ಟಿ. ಚಂದು,ಅಪೂರ್ವ ಚಂದು,ಹರೀಶ್ ಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಶಿವರಾಮ್, ಸುನಿಲ್ ಕುಮಾರ್, ಮಹಾಲಿಂಗಯ್ಯ, ಚನ್ನಂಕೇಗೌಡ, ಶಿವಲಿಂಗೇಗೌಡ,ಪ್ರಕಾಶ್,ಸುರೇಂದ್ರ,ನಂದಿನಿ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ