Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಹುವಾ ಉಚ್ಛಾಟನೆ| ಪ್ರತಿಕ್ರಿಯೆ ಸಲ್ಲಿಸುವಂತೆ ಲೋಕಸಭೆಯ ಕಾರ್ಯದರ್ಶಿಗೆ ಸೂಚಿಸಿದ ಸುಪ್ರೀಂಕೋರ್ಟ್

ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಬುಧವಾರ ಸೂಚಿಸಿದೆ.

ಪಶ್ಚಿಮ ಬಂಗಾಳದ ಕೃಷ್ಣನಗರದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಕೈಗಾರಿಕೋದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಪ್ರಶ್ನೆಗಾಗಿ ನಗದು ಸ್ವೀಕರಿಸಿದ ಆರೋಪದಲ್ಲಿ ಲೋಕಸಭೆಯ ನೈತಿಕ ಸಮಿತಿ ಶಿಫಾರಸ್ಸಿನ ಮೇರೆಗೆ ಡಿಸೆಂಬರ್ 8ರಂದು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು.

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತನ್ನನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿರುವುದನ್ನು ಪ್ರಶ್ನಿಸಿ ತೃಣಮೂಲಕ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.  ಲೋಕಸಭೆಯ ನೈತಿಕ ಸಮಿತಿಗೆ ತನ್ನನ್ನು ಉಚ್ಚಾಟನೆ ಮಾಡುವ ಅಧಿಕಾರ ಇಲ್ಲ. ನಾನು ದರ್ಶನ್ ಹಿರಾನಂದನಿಯಿಂದ ಹಣ ಸ್ವೀಕರಿಸಿದ್ದೇನೆ ಎಂಬುವುದು ಸಾಬೀತಾಗಿಲ್ಲ. ಕೇವಲ ನಿಶಿಕಾಂತ್ ದುಬೆ ಮತ್ತು ಜೈ ಅನಂತ್ ದೇಹದ್ರಾಯ್ ಅವರ ಆರೋಪದ ಹಿನ್ನೆಲೆ ತನ್ನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಹಿರಾನಂದನಿ ಮತ್ತು ದೇಹದ್ರಾಯ್‌ಯನ್ನು ಕ್ರಾಸ್ ಪ್ರಶ್ನೆ ಮಾಡಲು ನನಗೆ ಅವಕಾಶ ನೀಡಿಲ್ಲ ಎಂದು ಮಹುವಾ ಹೇಳಿದ್ದರು.

ಲೋಕಸಭೆಯ ನೈತಿಕ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ಪೀಕರ್ ಓಂ ಬಿರ್ಲಾ  ಮಹುವಾ ಅವರನ್ನು ಸಂಸತ್ತಿನಿಂದ ಅಮಾನತು ಮಾಡಿದ್ದರು. ಉಚ್ಚಾಟನೆ ಬೆನ್ನಲ್ಲೇ ಸಂಸತ್ತಿನ ಹೊರಗೆ ಕೇಂದ್ರದ ಬಿಜೆಪಿ ಸರ್ಕಾದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮಹುವಾ, ಅಸ್ತಿತ್ವದಲ್ಲೇ ಇಲ್ಲದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಾನು ತಪ್ಪಿತಸ್ಥೆ ಎಂದು ನೈತಿಕ ಸಮಿತಿ ಸದಸ್ಯರು ಹೇಳಿದ್ದಾರೆ. ಸಮಿತಿಯು ಸಂಸತ್ತಿನ ಪ್ರತಿಯೊಂದು ನಿಯಮಗಳನ್ನೂ ಮುರಿದಿದ್ದಾರೆ. ನಾನು ಸಂಸತ್ತಿನ ಒಳಗೆ, ಹೊರಗೆ ಮುಂದಿನ 30 ವರ್ಷ ಬಿಜೆಪಿ ವಿರುದ್ಧ ಹೋರಾಡುತ್ತೇನೆ ಎಂದು ಸವಾಲ್ ಹಾಕಿದ್ದರು.

ಕೈಗಾರಿಕೋದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಪಡೆದುಕೊಂಡು ತನ್ನ ಸಂಸತ್ತಿನ ಲಾಗಿನ್‌ ಐಡಿ ಅವರಿಗೆ ನೀಡಿದ್ದಾರೆ ಮತ್ತು ಪ್ರಧಾನಿ ಮೋದಿ, ಅದಾನಿ ಸಮೂಹದ ವಿರುದ್ಧ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪ ಸಂಸದೆ ಮಹುವಾ ಮೊಯಿತ್ರಾ ಮೇಲೆ ಹೊರಿಸಲಾಗಿತ್ತು. ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಲೋಕಸಭೆಗೆ ದೂರು ನೀಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!