Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವ : ಮುಗಿಲು ಮುಟ್ಟಿದ ಭಕ್ತರ ಸಂಭ್ರಮ

ಮಂಡ್ಯ ತಾಲ್ಲೂಕಿನ ಆಲಕೆರೆ ಮತ್ತು ಕೀಲಾರ ಗ್ರಾಮಗಳ ಆರಾಧ್ಯ ದೈವ ವೀರಭದ್ರೇಶ್ವರಸ್ವಾಮಿ ಐತಿಹಾಸಿಕ ಕೊಂಡೋತ್ಸವಕ್ಕೆ ಸಹಸ್ರಾರು ಭಕ್ತರ ಜೈಕಾರದೊಂದಿಗೆ ಮಂಗಳವಾರ ಸಂಜೆ 5.05 ಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.

ಕೊಂಡೋತ್ಸವಕ್ಕೆ ಸಕಲ ತಯಾರಿ ಮಾಡಲಾಗಿತ್ತು.ದೊಡ್ಡ ಮಟ್ಟದಲ್ಲಿ ಸಂಗ್ರಹಿಸಿದ್ದ ಕಟ್ಟಿಗೆ ರಾಶಿಗೆ ಅಗ್ನಿ ಸ್ಪರ್ಶ ಮಾಡಿದಾಗ ನೆರೆದಿದ್ದ ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಸಂಭ್ರಮದಿಂದ ಹರ್ಷೋದ್ಗಾರ ಮಾಡಿದರು.ರಾತ್ರಿಯಿಡೀ ರಂಗ ಕುಣಿತ ನಡೆಯಿತು. ಮಧ್ಯರಾತ್ರಿ ದೇವರಿಗೆ ಹೂ ಹೊಂಬಾಳೆ ನಡೆಸಿ,ಬುಧವಾರ ಬೆಳಗಿನ ಜಾವ ದೇವರ ಗುಡ್ಡರಾದ ರೇಣುಕಾ ಸ್ವಾಮಿ ಹಾಗೂ ಕಾಂತೇಶ್ ಕುಮಾರ್ ಕೊಂಡ ಹಾಯ್ದರು.ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಕೊಂಡ ಹಾಯ್ದ ರೇಣುಕಾ ಸ್ವಾಮಿ ಹಾಗೂ ಕಾಂತೇಶ್ ಕುಮಾರ್ ಅವರನ್ನು ಹೆಗಲ ಮೇಲೆ ಹೊತ್ತು ಜೈಕಾರ ಹಾಕಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತರು ಕೊಂಡ ಪ್ರದಕ್ಷಿಣೆ ಮಾಡಿದರು. ಮಹಿಳೆಯರು ಹೆಜ್ಜೆ ನಮಸ್ಕಾರ ಹಾಕಿದರು. ಬಾಯಿಬೀಗ ಹಾಕಿಸಿಕೊಂಡು ಸಾವಿರಾರು ಜನ ಹರಕೆ ತೀರಿಸಿದರು. ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕೆ ದೂರ ದೂರಿನಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.

ಕೀಲಾರದ ಕಂಚಿನ ಮಾರಮ್ಮ ಹಾಗೂ ಸೋಮೇಶ್ವರ ದೇವಸ್ಥಾನದಿಂದ ಕೀಲಾರ ಗ್ರಾಮಸ್ಥರು ನಾಲ್ಕು ಜೋಡೆತ್ತುಗಳೊಂದಿಗೆ ಮೆರವಣಿಗೆ ಮೂಲಕ ಆಲಕೆರೆ ಗ್ರಾಮದ ಗಡಿಗೆ ಬಂದರು. ಅಲಕೆರೆ ಗ್ರಾಮಸ್ಥರು ಎಲ್ಲರನ್ನೂ ಬರಮಾಡಿಕೊಂಡರು. ತಮಟೆ ಸದ್ದಿನ ಜತೆ ಮೆರವಣಿಗೆ ಮೂಲಕ ಜೋಡೆತ್ತುಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದು ವಿಶೇಷ ಎನಿಸಿತು.

ಆಲಕೆರೆ ಗ್ರಾಮದ ಬಂಡಿಗಳನ್ನು ಕಟ್ಟಿ ಗುಡ್ಡಪ್ಪರನ್ನು ಹೊತ್ತ ಬಂಡಿಗಳು ಕೊಂಡದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದವು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳವಾರ ಸಂಜೆ 5.05ಕ್ಕೆ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾ‌ರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆ‌ರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕೀಲಾರ ಮತ್ತು ಆಲಕೆರೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ