Friday, November 20, 2026

ಪ್ರಾಯೋಗಿಕ ಆವೃತ್ತಿ

ಸಮಾಜ ಸ್ವಚ್ಛವಾಗಿರಲು ಪೌರಕಾರ್ಮಿಕರು ಕಾರಣ: ಡಾ.ಕುಮಾರ

ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಲು ಅಧಿಕಾರಿಗಳಿಗಿಂತ ಪೌರಕಾರ್ಮಿಕರು ಕಾರಣ, ಅವರ ಸೇವೆ ಅಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಮಂಗಳವಾರ (ಸೆ.23) ರಂದು ನಗರಸಭೆ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಪೌರಕಾರ್ಮಿಕರಿಗೆ ಒದಗಿಸಿರುವ ಸೇವೆಗಳು ಹಾಗೂ ಸಂಬಳವನ್ನು ಅವರು ಮಾಡುವ ಸೇವೆಗೆ ಲೆಕ್ಕ ಹಾಕಲು ಸಾಧ್ಯವಿಲ್ಲ. ಪೌರಕಾರ್ಮಿಕರು ನಿಷ್ಕಲ್ಮಶ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿರಕತ್ತದೆ, ಪೌರಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಆರೋಗ್ಯದ ಮೇಲೂ ಗಮನ ಹರಿಸಿ, ಕೆಲಸ ನಿರ್ವಹಿಸುವಾಗ ಸುರಕ್ಷತಾ ಸಮವಸ್ತ್ರ ಹಾಗೂ ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸಿ, ಸುರಕ್ಷತಾ ಪರಿಕರಗಳನ್ನು ಅಧಿಕಾರಿಗಳಿಂದ ಕೇಳಿ ಪಡೆದು ಕೆಲಸ ಮಾಡಬೇಕು ಅದು ನಿಮ್ಮ ಹಕ್ಕು ಎಂದು ತಿಳಿಸಿದರು.

ಅನೇಕ ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೌರಕಾರ್ಮಿಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ, ಯಾರು ಸಹ ನಿಮ್ಮ ಮಕ್ಕಳನ್ನು ಮೇಲೆ ಒತ್ತಡ ಏರಬೇಡಿ ಅವರಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಧಿಕಾರಿಗಳಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಲು ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಪೌರಕಾರ್ಮಿಕರು ಆರೋಗ್ಯ ವಿಮೆ ಮಾಡಿಸಿಕೊಳ್ಳಿ ಈಗಾಗಲೇ ಅಧಿಕಾರಿಗಳಿಗೆ ಆರೋಗ್ಯ ವಿಮೆ ಮಾಡಿಸಲು ತಿಳಿಸಲಾಗಿದೆ ಅದರೊಂದಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಲು ತಿಳಿಸಲಾಗಿದೆ. 32 ಜನ ಪೌರಕಾರ್ಮಿಕರು ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಿಸುತ್ತಿದ್ದಾರೆ ಅವರನ್ನು ನೇರ ಪಾವತಿ ಅಡಿಯಲ್ಲಿ ತರಲು ಸೂಕ್ತ ಕ್ರಮವನ್ನು ಶ್ರೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 88 ಮನೆ ನಿರ್ಮಾಣ ಮಾಡಲಾಗಿದೆ ಇನ್ನೂ 16 ಮನೆಗಳ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಪೌರಕಾರ್ಮಿಕರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕಾರ್ಯವನ್ನು ಶ್ರೀಘ್ರವಾಗಿ ನೀಡುತ್ತೇವೆ ಎಂದು ಹೇಳಿದರು.

ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹ ಮೂರ್ತಿ ಅವರು ಮಾತನಾಡಿ ಪೌರಕಾರ್ಮಿಕರು ತಮಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ತಿಳಿದುಕೊಳ್ಳಬೇಕು, ಗೃಹ ಭಾಗ್ಯ ಯೋಜನೆಯಡಿ ವಸತಿ ರಹಿತರಿಗೆ ನಿವೇಶನ ನೀಡಲಾಗುವುದು. ಪ್ರತಿ ತಿಂಗಳು ನಡೆಸಲಾಗುವ ಪೌರಕಾರ್ಮಿಕರ ಸಭೆಯಲ್ಲಿ ವಸತಿ ರಹಿತ ಪೌರಕಾರ್ಮಿಕ ಪಟ್ಟಿಯನ್ನು ಪಡೆದುಕೊಂಡು ಕ್ರಮ ವಹಿಸಲಾಗುವುದು ಇಂತಹ ಅವಕಾಶವನ್ನು ಪೌರಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮೊದಲು ಹೊರ ಗುತ್ತಿಗೆ ಪದ್ಧತಿಯ ಆಧಾರದ ಮೇಲೆ ಪೌರಕಾರ್ಮಿಕರು ಮಾಡುವ ಕೆಲಸಕ್ಕೆ ಗುತ್ತಿಗೆದಾರರು ಹಣ ಪಾವತಿ ಮಾಡುತಿದ್ದರು‌. ಗುತ್ತಿಗೆದಾರರು ಸರಿಯಾಗಿ ಸಂಬಳ ಇ ಎಸ್ ಐ, ಪಿ ಎಫ್ ಪಾವತಿ ಮಾಡದೇ ಇರುವುದನ್ನು ಮನಗೊಂಡು ಸರ್ಕಾರ ನಗರಸಭೆ ವತಿಯಿಂದ ನೇರವಾಗಿ ಪೌರಕಾರ್ಮಿಕರ ಖಾತೆಗೆ ಸಂಬಳವನ್ನು ಜಮೆ ಮಾಡುತ್ತಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ ಅವರು ಮಾತನಾಡಿ ಪೌರಕಾರ್ಮಿಕರು ನಮ್ಮ ಸಮಾಜ ಹಾಗೂ ಪರಿಸರದ ಸ್ವಚ್ಛತೆಯ ಜೊತೆಗೆ ಆರೋಗ್ಯದ ಮೇಲೆ ಗಮನವಿರಲಿ, ನಗರಸಭೆ ವತಿಯಿಂದ ನೀಡುವ ಸುರಕ್ಷತಾ ಪರಿಕರಗಳನ್ನು ಬಳಸಿ ಕಾರ್ಯ ನಿರ್ವಹಿಸಿ ಎಂದು ತಿಳಿ ಹೇಳಿದರು.

ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಪೌರಕಾರ್ಮಿಕರಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಇಂಡಿಯಾ ಸ್ವೀಟ್ ಹೌಸ್ ವತಿಯಿಂದ 350 ಪೌರಕಾರ್ಮಿಕರಿಗೆ ಸಿಹಿ ವಿತರಿಸಲಾಯಿತು.

ಉನ್ನತ ವ್ಯಾಸಂಗ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತೆ ಪಂಪಶ್ರೀ, ಉಪಾಧ್ಯಕ್ಷ ಎಂ.ಪಿ ಅರುಣ್ ಕುಮಾರ್, ನಗರಸಭೆ ಸದಸ್ಯರಾದ ಶ್ರೀಧರ್, ರವಿ, ರಾಮಲಿಂಗಯ್ಯ, ನಗರ ಸಭೆ ಮಾಜಿ ಅಧ್ಯಕ್ಷ ಎಚ್.ಎಸ್ ಮಂಜು, ಕರ್ನಾಟಕ ರಾಜ್ಯ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ ನಾಗಣ್ಣಗೌಡ, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುತ್ತಾಲಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ