Sunday, November 22, 2026

ಪ್ರಾಯೋಗಿಕ ಆವೃತ್ತಿ

ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿ ತಲುಪಿದ್ದ ಗರ್ಭಿಣಿ : ತಾಯಿ- ಮಗುವಿಗೆ ಪುನರ್ಜನ್ಮ ನೀಡಿದ ಮಿಮ್ಸ್ ವೈದ್ಯರು

ಜೀವನ ಪಯಣದಲ್ಲಿ ಅನಿರೀಕ್ಷಿತವಾಗಿ ಎದುರಾದ ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ತಲುಪಿದ ಗರ್ಭಿಣಿ ಹಾಗೂ ಈಕೆಯ ಹೊಟ್ಟೆಯೊಳಗಿದ್ದ ಮಗುವನ್ನು ಸಾವಿನ ದವಡೆಯಿಂದ ಹೊರತರುವಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ವೈದ್ಯರು ಯಶಸ್ವಿಯಾಗಿ, ಇತಿಹಾಸ ದಾಖಲಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ಪಡೆದರೂ ತಾಯಿ ಮತ್ತು ಮಗುವಿನ ಪ್ರಾಣ ಉಳಿಯುವ ಬಗ್ಗೆ ಖಚಿತತೆ ನೀಡಿರಲಿಲ್ಲ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಮಿಮ್ಸ್ ನೆರವಾಗಿದೆ. ಸುಮಾರು ಎರಡು ತಿಂಗಳು ಚಿಕಿತ್ಸೆ ನೀಡುವುದರ ಜತೆಗೆ ಉಚಿತವಾಗಿ ಔಷಧೋಪಚಾರ ಮಾಡುವ ಮೂಲಕ ತಾಯಿ, ಮುದ್ದಾದ ಹೆಣ್ಣು ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.

ಏನಿದು ಪ್ರಕರಣ

ಮಂಡ್ಯ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಶಂಕರ್ ಎಂಬುವರ ಪತ್ನಿ ಕವಿತಾ(26) ಎರಡನೇ ಬಾರಿ ಗರ್ಭಿಣಿಯಾಗಿದ್ದರು. ಪ್ರಾರಂಭದ ದಿನದಲ್ಲಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಸಾಮಾನ್ಯವಾಗಿ ಗರ್ಭಿಣಿಯರ ಆರೋಗ್ಯದಲ್ಲಿ ಕಂಡುಬರುವ ಏರುಪೇರುಗಳಿದ್ದವು. ಆದರೆ ಕವಿತಾ ಅವರಿಗೆ ಸುಮಾರು ದಿನವಾದರೂ ತಲೆನೋವು ಸಮಸ್ಯೆ ಕಾಡಿತ್ತು. ಮಾತ್ರವಲ್ಲದೆ ತೊದಲು ನುಡಿಯನ್ನಾಡಲು ಪ್ರಾರಂಭಿಸಿದ್ದರು. ಇದರಿಂದ ಆತಂಕಗೊಂಡ ಕುಟುಂಬ ಫೆ.11ರಂದು ಮಿಮ್ಸ್‌ಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದರು. ಆದರೆ ಫೆ.17ರಂದು ಮುಂಜಾನೆ ಆಕೆ ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿ ತಲುಪಿದರು. ಈ ವೇಳೆ ಎಂಆರ್‌ಐ ಸ್ಕಾೃನ್ ಮಾಡಿದಾಗ ಬ್ರೈನ್ ಟ್ಯೂಮರ್ ಇರುವುದು ಖಚಿತವಾಗಿತ್ತು.

ವೈದ್ಯರು ಸಿಬ್ಬಂದಿಯ ಕಾರ್ಯ ಶ್ಲಾಘನೀಯ
ಇಂತಹದೊಂದು ಪ್ರಕರಣ ಯಶಸ್ವಿಯಾಗಲು ನಮ್ಮ ವೈದ್ಯರು ಹಾಗೂ ಸಿಬ್ಬಂದಿಯ ಸೇವಾ ಮನೋಭಾವ ಕಾರಣ. ಲಕ್ಷಾಂತರ ರೂ ಖರ್ಚು ಮಾಡಿ ಉನ್ನತ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೂ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದು ಕಷ್ಟ. ಆದಾಗ್ಯೂ ನಮ್ಮ ವೈದ್ಯರು ಹಾಗೂ ಸಿಬ್ಬಂದಿ ತಾಯಿ, ಮಗುವಿನ ಪ್ರಾಣ ಉಳಿಸಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ.
– ಡಾ.ನರಸಿಂಹಮೂರ್ತಿ,ಮಿಮ್ಸ್ ನಿರ್ದೇಶಕರು

ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾದ ಕಾರಣ ಅದೇ ದಿನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸುಮಾರು 12 ದಿನ ಚಿಕಿತ್ಸೆ ಪಡೆದುಕೊಳ್ಳಲಾಯಿತು. ಆದರೆ ಈ ಅವಧಿಯಲ್ಲಿ ಮೂರು ಲಕ್ಷ ರೂ ಖರ್ಚಾಗಿತ್ತು. ಇದು ಬಡ ಕುಟುಂಬಕ್ಕೆ ಆಘಾತ ನೀಡಿತ್ತು. ಮತ್ತೆ ಚಿಕಿತ್ಸೆ ಪಡೆದುಕೊಳ್ಳಬೇಕಾದರೆ ದಿನಕ್ಕೆ ಸಾವಿರಾರೂ ರೂ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಕೊನೆಗೆ ದಿಕ್ಕು ತೋಚದೆ ಮಿಮ್ಸ್‌ಗೆ ವಾಪಸ್ ಬರುವ ನಿರ್ಧಾರ ಮಾಡಲಾಯಿತು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಾಗ ಸ್ಪಂದನೆ ನೀಡಲಾಗಿದೆ.

ಇನ್ನೊಂದು ಗಮನಾರ್ಹ ವಿಷಯವೆಂದರೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಇಬ್ಬರ ಪ್ರಾಣ ಉಳಿಯುವುದು ಅನುಮಾನ ಎನ್ನುವ ಅಭಿಪ್ರಾಯ ನೀಡಲಾಗಿತ್ತು. ಆದರೂ ಧೈರ್ಯ ಮಾಡಿ ಮಿಮ್ಸ್‌ಗೆ ಕರೆದುಕೊಂಡು ಬರಲಾಯಿತು. ಇತ್ತ ಡಾ.ನರಸಿಂಹಮೂರ್ತಿ ಅವರು ನರ ಶಸ್ತ್ರಚಿಕಿತ್ಸಕ ಡಾ.ಲಿಂಗರಾಜು ಮತ್ತು ಸ್ತ್ರೀರೋಗ ತಜ್ಞ ಡಾ.ಮನೋಹರ್ ಅವರೊಂದಿಗೆ ಚರ್ಚಿಸಿ, ಗರ್ಭಿಣಿಯನ್ನು ಮಾ.1ರಂದು ಮಿಮ್ಸ್‌ಗೆ ದಾಖಲಿಸಿಕೊಂಡರು. ನಂತರ ಆಕೆಗೆ ಹೊಂಬಾಳೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಈ ಮಧ್ಯೆ ಆಕೆಗೆ 26 ವಾರ ಆಗಿತ್ತು.

ತಾಯಿ ಮಗು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ
ಇದೊಂದು ಅಪರೂಪದ ಕಾಯಿಲೆ. ಲಕ್ಷಕ್ಕೆ ಒಬ್ಬರಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಬಹುದು. ನಮ್ಮ ತಂಡ ವಿಶೇಷ ಕಾಳಜಿ ವಹಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡು ತಾಯಿ ಮಗು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
– ಡಾ.ಆರ್.ಮನೋಹರ್,ಸ್ತ್ರೀರೋಗ ತಜ್ಞರು

ಈ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದರೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮತ್ತೆ ಆಕೆಗೆ ಚಿಕಿತ್ಸೆ ಮುಂದುವರಿಸಲಾಯಿತು. ಯಶಸ್ವಿಯಾಗಿ 36 ವಾರ ಚಿಕಿತ್ಸೆ ನೀಡಿದ ನಂತರ ಏ.11ರಂದು ಸ್ತ್ರೀ ರೋಗ ತಜ್ಞ ಡಾ.ಮನೋಹರ್ ಮತ್ತು ಡಾ.ಸಂಧ್ಯಾಶ್ರೀ ತಂಡ ಹೆರಿಗೆ ಮಾಡಿದ್ದಾರೆ. ಈ ವೇಳೆ ಅರವಳಿಕೆ ತಜ್ಞರಾದ ಡಾ.ಕಿರಣ್, ಡಾ.ವಿನಯ್ ಅವರ ಪಾತ್ರ ಮುಖ್ಯವಾಗಿದೆ. ಇನ್ನು ತಾಯಿಗೆ ಅಗತ್ಯ ಪೌಷ್ಟಿಕಾಂಶದ ಕೊರತೆ ಇದ್ದ ಕಾರಣ ಮಗು 1 ಕೆಜಿ 600 ಗ್ರಾಂ ತೂಕ ಇತ್ತು. ಮಕ್ಕಳ ತಜ್ಞ ವೈದ್ಯ ಡಾ.ಕೀರ್ತಿ ಅವರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು. ಒಂದು ವಾರ ಐಸಿಯುನ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಮಗು ಈಗ 2 ಕೆಜಿ 600 ಗ್ರಾಂ ತೂಕಕ್ಕೆ ಬಂದಿದೆ.

ಮಿಮ್ಸ್ ವೈದ್ಯರ ಪರಿಶ್ರಮದಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ. ಮುಖ್ಯವಾಗಿ ತಾಯಿ ಕೋಮಾ ಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿದ್ದು, ಎಲ್ಲರನ್ನೂ ಗುರುತಿಸುತ್ತಿದ್ದಾರೆ. ಈ ನಡುವೆ ಈಕೆಯನ್ನು ಮುರ್ತುವರ್ಜಿಯಿಂದ ನೋಡಿಕೊಂಡ ಶ್ರುಶೂಷಕಿ ದೀಪ್ತಿ ಸೇರಿದಂತೆ ದಾದಿಯರ ಸೇವೆ ಶ್ಲಾಘನೀಯ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ