ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿರ್ನಾಮ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಯತ್ನಿಸುತ್ತಿದ್ದು, ಎಂದಿಗೂ ಜೆಡಿಎಸ್ ನಿರ್ನಾಮ ಮಾಡುವುದು ಸಾಧ್ಯವಿಲ್ಲ ಎಂದು ಶಾಸಕ ಸುರೇಶ್ ಗೌಡ ಹೇಳಿದರು.
ನಾಗಮಂಗಲ ಪಟ್ಟಣದ ತಮ್ಮ ನಿವಾಸದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಕರೆಯಲಾಗಿದ್ದ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇನ್ನೊಬ್ಬರನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲವೆಂಬುದು ಈಗಾಗಲೇ ನಮಗೆ ಲೋಕಸಭಾ ಚುನಾವಣೆ ಸಂದರ್ಭ ಅರಿವಾಗಿದೆ. ನಾವು ಮಾಡುವ ಅಭಿವೃದ್ಧಿ ಕೆಲಸದ ಮೇಲೆ ನಮಗೆ ನಂಬಿಕೆಯಿದೆ. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ. ಯಾವುದೇ ರೀತಿಯ ಉಹಾಪೋಹಗಳಿಗೆ ಕಿವಿಗೊಡಬೇಡಿ.ಇಲ್ಲಸಲ್ಲದ ಅಪಪ್ರಚಾರಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
ಈಗ ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ಇಂತಹ ಚುನಾವಣೆಯಲ್ಲಿಯೇ ಮಾಜಿ ಸಚಿವರು ಹಣ ಪಡೆದು ಪಕ್ಷಕ್ಕೆ ದ್ರೋಹ ಬಗೆದು ಹೋದರು. ನಾನು ಆ ರೀತಿ ಹಣದ ಅಮಿಷಕ್ಕೆ ಬಲಿಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯಲಾರೆ ಎಂದರು.
ದಕ್ಷಿಣ ಪದವೀಧರ ಚುನಾವಣೆಯಲ್ಲಿ ನೊಂದಾಯಿಸಿರುವ ಮತದಾರರನ್ನು ಪಕ್ಷದ ಮುಖಂಡರು ಭೇಟಿ ಮಾಡಿ ಮತಯಾಚಿಸಬೇಕು.ಕಳೆದ ಲೋಕಸಭೆ ಮತ್ತು ವಿಧಾನಪರಿಷತ್ ಚುನಾವಣೆ ವೇಳೆ ಅತಿಯಾದ ಆತ್ಮವಿಶ್ವಾಸದಿಂದ ನಾವು ಸೋಲು ಕಂಡೆವು. ಆದರೆ ಈ ರೀತಿ ಹಾಗಾಗಬಾರದು ಎಲ್ಲರೂ ಎಚ್ಚೆತ್ತು ಚುನಾವಣೆ ಎದುರಿಸಿ ಎಂದರು.
ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಜೆ.ರಮೇಶ್, ಮುಖಂಡರಾದ ಜಿ.ವಿ.ಆರ್.ಗೌಡ, ಕೆ.ಎನ್.ರಮೇಶ್, ಗೋಪಾಲ್ , ಮುಳಕಟ್ಟೆ ಶಿವರಾಮಯ್ಯ ಇದ್ದರು
ಕ್ಷೇತ್ರದ ಹಲವು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.