Friday, November 20, 2026

ಪ್ರಾಯೋಗಿಕ ಆವೃತ್ತಿ

ರೇಷ್ಮೆ ಉತ್ಪಾದನೆಯಿಂದ ಹೆಚ್ಚಿನ ಲಾಭಗಳಿಸಬಹುದು : ಡಾ.ಕುಮಾರ

ರೇಷ್ಮೆ ಬೆಳೆಯೂ ವಾಣಿಜ್ಯ ಬೆಳೆಯಾಗಿದ್ದು, ರೇಷ್ಮೆಯಿಂದ ಹೆಚ್ಚಿನ ಲಾಭಗಳಿಸಬಹುದು. ಸಂಪ್ರದಾಯಿಕ ಬೆಳೆಗಳ ಜತೆಗೆ ರೇಷ್ಮೆ ಬೆಳೆಯನ್ನು ಸಹ ಅಳವಡಿಸಿಕೊಳ್ಳಿ, ರೇಷ್ಮೆ ಉತ್ಪಾದನೆಯಿಂದ ಉತ್ತಮ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು.

ರೇಷ್ಮೆ ಇಲಾಖೆ ವತಿಯಿಂದ ಮಂಡ್ಯ ಜಿಲ್ಲಾಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಂಡ್ಯ ಜಿಲ್ಲೆಯ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಸಹ ಮಂಡ್ಯ ರೈತರು ಹೆಚ್ಚು ಬೆಳೆಯಬೇಕು ಹಾಗೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ರೇಷ್ಮೆ ಇಲಾಖೆ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರು ಬಡವರಲ್ಲ, ರೈತರಿಗೆ ಅನುಕಂಪ ತೋರುವ ಅವಶ್ಯಕತೆಯಿಲ್ಲ. ಅವರಲ್ಲಿ ಆರ್ಥಿಕವಾಗಿ ಸದೃಢರಾಗುವ ಹೊಸ ತಾಂತ್ರಿಕತೆಗಳ ವಿವರ ನೀಡಿ ಆತ್ಮವಿಶ್ವಾಸ ತುಂಬಿ‌ ಸೈನಿಕರು ದೇಶದ ಹೊರಗೆ ದೇಶಕ್ಕಾಗಿ ಶ್ರಮಿಸಿದರೆ, ರೈತರು ದೇಶದ ಒಳಗೆ ದೇಶಕ್ಕೆ ಆಹಾರ ಒದಗಿಸಲು ಶ್ರಮಿಸುತ್ತಾರೆ. ರೈತರು ಯೋಧರ ಸಮಾನ ಹಾಗೂ ಹೃದಯವಂತಿಕೆಯಲ್ಲಿ ಶ್ರೀಮಂತರು ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಬೆಳೆಗಳನ್ನು ಬೆಳೆಯಬೇಕು

ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಯುವುದರ ಜತೆಗೆ ಇತರೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಒಂದೇ ರೀತಿಯ ಬೆಳೆಗಳನ್ನು ಬೆಳೆದಷ್ಟು ಮಣ್ಣಿನ ಫಲವತ್ತತೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಆಗಾಗಿ ಇತರೆ ಬೆಳೆಗಳನ್ನು ಸಹ ಪ್ರೋತ್ಸಾಹಿಸಿ ಎಂದು ರೈತಭಾಂದವರಿಗೆ ಸಲಹೆ ನೀಡಿದರು.

ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರಾದ ರಾಜೇಶ್ ಗೌಡ ಮಾತನಾಡಿ ರಾಜ್ಯದಲ್ಲಿಯೇ ಹೆಚ್ಚು ಕೃಷಿಕರನ್ನು ಹೊಂದಿರುವ ಜಿಲ್ಲೆ ಎಂದರೆ ಮಂಡ್ಯ ಜಿಲ್ಲೆ. ಇಲ್ಲಿನ ರೈತರಿಗೆ ರೇಷ್ಮೆ ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿದರೆ ಉತ್ತಮ ಲಾಭವನ್ನು ಕಾಣಬಹುದು ಎಂದು ತಿಳಿಸಿದರು.

ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿ ರೇಷ್ಮೆ ಮಾರುಕಟ್ಟೆಯನ್ನು ಒಳ್ಳೆಯ ಮಟ್ಟಕ್ಕೆ ತರಬೇಕೆಂಬ ಉದ್ದೇಶದಿಂದ ಕೆಲಸ ನಿರ್ವಹಿಸಲಾಗುತ್ತಿದ್ದು, ಸಣ್ಣ ರೈತರು ಸಹ ರೇಷ್ಮೆ ಬೆಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ಹೇಳಿದರು.

ರೇಷ್ಮೆ ಉತ್ಪಾದನೆ ಕುರಿತು ತಾಂತ್ರಿಕ ಉಪನ್ಯಾಸ ನೀಡಿದ ಕೋಲಾರದ ಪ್ರಗತಿಪರ ರೇಷ್ಮೆ ಬೆಳೆಗಾರರಾದ ನಾಗರಾಜು ಸಿ. ಎಲ್ ಅವರು ರೇಷ್ಮೆ ಉತ್ಪಾದನೆ ವಿಭಿನ್ನವಾದದ್ದು, ರೇಷ್ಮೆ ಬೆಳೆ ಕುರಿತು ತಾಂತ್ರಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ತಾಂತ್ರಿಕ ಸಮಾವೇಶ ನಡೆಸುತ್ತಿರುವುದು ಮೆಚ್ಚುವ ವಿಷಯ ಎಂದರು.

ರೇಷ್ಮೆ ಬೆಳೆಗಾರರರಿಗೆ ರೇಷ್ಮೆ ಹುಳುಗಳ ಸಾಕಾಣಿಕೆ, ಅವುಗಳಿಗೆ ನೀಡಬೇಕಾದ ಸ್ಥಳಾವಕಾಶ, ಗೂಡುಗಳ ನಿರ್ವಹಣೆ, ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಮನೆ ನಿರ್ಮಾಣ, ಸೋಂಕು ನಿವಾರಣೆ ಮತ್ತು ಹಿಪ್ಪುನೇರಳೆಯನ್ನು ಬಾಧಿಸುವ ನುಸಿಪೀಡೆ ಮತ್ತು ಅದರ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಬಿ. ಪುಟ್ಟಸ್ವಾಮಿ, ರೇಷ್ಮೆ ಇಲಾಖೆಯ ಅಪರ ನಿರ್ದೇಶಕರಾದ ವೈ.ಟಿ ತಿಮ್ಮಯ್ಯ, ಸರ್ಕಾರಿ ಬಿತ್ತನೆ ಕೋಠಿ, ರೇಷ್ಮೆ ಉಪನಿರ್ದೇಶಕರಾದ ಸೋಮಣ್ಣ.ಡಿ ರೇಷ್ಮೆ ಹುಳು ವಿಭಾಗದ ಮುಖ್ಯಸ್ಥರಾದ ಡಾ. ಎನ್.ಬಿ ಜ್ಯೋತಿ ಹಾಗೂ ಸಿ. ಎಸ್.ಆರ್ ಮತ್ತು ಟಿ. ಐ ನ ವಿಜ್ಞಾನಿ ಡಾ. ಮಹಿಬಾ ಹೆಲನ್ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ