Tuesday, June 25, 2024

ಪ್ರಾಯೋಗಿಕ ಆವೃತ್ತಿ

ವಿಜ್ಞಾನ ಸಂಗ್ರಹಾಲಯ ಸ್ಥಾಪನೆಗೆ ಸಹಕಾರ : ಸಿಎಂ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಮಹತ್ವಾಕಾಂಕ್ಷೆಯ ವಿಜ್ಞಾನ ಸಂಗ್ರಹಾಲಯ ಸ್ಥಾಪನೆಗೆ ಅಗತ್ಯ ಅನುದಾನ ಹಾಗೂ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪದವಿ ಮಾತನಾಡಿದರು.

ದೇಶದಲ್ಲೇ ಅತ್ಯುತ್ತಮ ವಿಜ್ಞಾನದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಬೇಕೆಂಬ ಶ್ರೀಗಳ ಬಯಕೆಗೆ ಸರ್ಕಾರ ಸ್ಪಂದಿಸಲಿದ್ದು,ಇದರ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಬುದ್ಧ ಪೂರ್ಣಿಮೆ ದಿನದಂದು ನೂತನ ವೈದ್ಯಕೀಯ ಪದವೀಧರರಿಗೆ ಪದವಿ ಪ್ರದಾನ ಮಾಡುತ್ತಿರುವುದು ಬಹಳ ಉತ್ತಮ ಕೆಲಸ ಎಂದರು.

ವಿಶ್ವದ ಅಗ್ರ ವಿಜ್ಞಾನಿ,ಶಾಂತಿ ಧೂತ ಬುದ್ದನಾಗಿದ್ದು, ಆಸೆಯೇ ದುಃಖಕ್ಕೆ ಮೂಲ ಕಾರಣ ಎಂಬುದನ್ನು ಅರಿತು ತನ್ನಲ್ಲಿನ ಅಧಿಕಾರ ಹಾಗೂ ಸಂಪತ್ತನ್ನು ತ್ಯಾಗ ಮಾಡಿ ಆಸೆಯನ್ನು ಮೆಟ್ಟಿ ನಿಲ್ಲಲು ತ್ಯಾಗದ ಸಾಧನೆ ಮಾಡಿ, ಜ್ಞಾನ ಪಡೆದು ಜಗತ್ತಿಗೆ ಹಂಚಿದ ಬುದ್ಧ ನಮ್ಮೆಲ್ಲರಿಗೂ ಮಾದರಿ.ಬುದ್ಧನ ತತ್ವ-ಆದರ್ಶಗಳ ಆಚರಣೆಗೆ ನಾವೆಲ್ಲರೂ ಮುಂದಾಗಬೇಕೆಂದರು.

ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಮೆಟ್ಟಿನಿಲ್ಲಲು ಯುವ ವೈದ್ಯರು ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಸದಾ ಕಲಿಕೆಯ ಹೊಸ ಮಾರ್ಗವನ್ನ ಹುಡುಕಬೇಕು. ಗುರುಗಳ ಸಾನಿಧ್ಯದಲ್ಲಿದ್ದು ರೋಗಿಗಳ ನೋವನ್ನು ಶಮನಗೊಳಿಸುವ ಗುಣ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅನಾದಿ ಕಾಲದಿಂದ ಅರಮನೆ-ಗುರುಮನೆಗೆ ಸಂಪರ್ಕವಿದೆ. ಶ್ರೀಗಳು ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು. ರಾಜ್ಯವನ್ನ ಸುಭಿಕ್ಷವಾಗಿಡಲು ಶ್ರೀಗಳ ಮಾರ್ಗದರ್ಶನ,ಸಹಕಾರ ಅತ್ಯಗತ್ಯ ಎಂದರು.

ಶ್ರೀಮಠದ ಸೇವೆ ಅಪಾರ
ಅನ್ನದಾಸೋಹ, ಅಕ್ಷರ ದಾಸೋಹ, ಆರೋಗ್ಯ ಭಾಗ್ಯ,ಶಿಕ್ಷಣ ಆರೋಗ್ಯ ಸೇವೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಕಾರ್ಯ ಅಪಾರ ಎಂದು ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಗಳು ಏಕಾಗ್ರತೆಯಿಂದ ಸವಾಲುಗಳನ್ನು ಎದುರಿಸಿ ಸಾಧನೆ ‌ಮಾಡಿದ್ದಾರೆ. ದೇಶವ್ಯಾಪಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ತೆರೆದು 1.50 ಲಕ್ಷ ವಿದ್ಯಾರ್ಥಿಗಳ ಜ್ಞಾನ ವೃದ್ದಿಸಲು ಸಹಕಾರಿಯಾಗಿದ್ದಾರೆ. ಈ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದರು.

ಜ್ಞಾನ ಮತ್ತು ಧ್ಯಾನದ ಹಂಚಿಕೆಯಿಂದ ಧರ್ಮ ಉಳಿಸುವ ಕಾಯಕದಲ್ಲಿ ಶ್ರೀಮಠ ಮುಂದಾಗಿದೆ. ಶ್ರೀಮಠದ ಅಭಿವೃದ್ಧಿಗೆ ಡಾ.ನಿರ್ಮಲಾನಂದನಾಥ ಸ್ವಾಮಿಗಳು ಅವಿರತ ಶ್ರಮಿಸುತ್ತಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ತೊಡಗಿಕೊಂಡಿದ್ದಾರೆ. ಇಂತಹ ಶ್ರೀಗಳ ಸಾಧನೆಯನ್ನು ಗಮನಿಸಿ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಶ್ಲಾಘನೀಯ ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಕೆ.ಸುರೇಶ್‌ಗೌಡ, ಬಿಜಿಎಸ್ ವೈದ್ಯಕೀಯ ಕಾಲೇಜಿನ ಉಪಕುಲಪತಿ ಡಾ.ಎಂ.ಎಸ್.ಶೇಖರ್, ಪ್ರಾಂಶುಪಾಲ ಎ.ಟಿ.ಶಿವರಾಮು, ರಾಜೀವ್ ಗಾಂಧಿ ವಿವಿ ಉಪಕುಲಪತಿ ಡಾ.ಎಂ.ಕೆ.ರಮೇಶ್ ಹಾಗೂ ಡಾ.ನರೇಂದ್ರ, ಪ್ರದೀಪ್ ಕುಮಾರ್, ಡಾ.ಭಗವಾನ್ ಇತರರು ಉಪಸ್ಥಿತರಿದ್ದರು.

.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!