”ಮಕ್ಕಳು ಮನೆಗೆ ದೀಪದ್ದಂತೆ, ಅವರ ಬಯಕೆಗಳನ್ನು ಬಲಿಕೊಡಬೇಡಿ, ನಗುತಾ ಬಾಳಲಿ” ಎಂದು ಉಮ್ಮಡಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಮಂಜುನಾಥ್ ಹಾರೈಸಿದರು.
ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವತಿಯಿಂದ ನಡೆದ 2025- 26 ನೇ ಸಾಲಿನ ಮಕ್ಕಳ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಕೂಸು ಇದ್ದಮನೆಗೆ ಬಿಸಣಿಗೆ ಯಾತಕ – ಕೂಸು ಕಂದಯ್ಯ ಒಳಗೆ ಹೊರಗೆ ಹಾಡಲು ಬಿಸಣಿಗೆ ಯಾತಕ’ ಎಂಬ ಜಾನಪದ ಹಾಡಿನಂತೆ ಮಕ್ಕಳಿಗೆ ಬದುಕುವ ಹಕ್ಕು, ಹೆಸರಿನ ಹಕ್ಕು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಕಲ್ಪಿಸಬೇಕೆಂದರು.
ಮಕ್ಕಳಿಗೆ ಕಲೆ, ಸಾಹಿತ್ಯ,ಕ್ರೀಡೆ, ಸಾಂಸ್ಕೃತಿಕ, ಪರಿಸರ ಕಾಳಜಿ, ಸಾಮಾಜಿಕ ಕಳಕಳಿಯನ್ನು ಕಲಿಸಬೇಕು ಮತ್ತು ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ನೀಡಬೇಕೆಂದರು.
ಉಮ್ಮಡಹಳ್ಳಿ ಗ್ತಾಮದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್. ನಂದಿನಿ ಉದ್ಘಾಟಿಸಿದ್ದರು ಎಂದು ಸ್ಮರಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಯು ವಿ ಶ್ರೀಕಾಂತ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಉಪಾಧ್ಯಕ್ಷರಾದ ಶೋಭ, ಸದಸ್ಯರಾದ ಯು ಸಿ ಶೇಖರ್, ಲತಾ, ಮುರಳಿ, ಶಂಕರೇಗೌಡ, ಕೃಷ್ಣ, ಭಾಗ್ಯಮ್ಮ, ಕಾರ್ಯದರ್ಶಿ ಮಧುಪ್ರಸಾದ್, ಗ್ರಾಮ ಲೆಕ್ಕಿಗ ಕುಮಾರ್, ಪಶು ಇಲಾಖಾಧಿಕಾರಿ ಚಂದ್ರಶೀಲಾ, ಗ್ರಂಥಾಲಯ ಮೇಲ್ವಿಚಾರಕ ಯೋಗೇಶ್ ಭಾಗವಹಿಸಿದ್ದರು.
ಜನಪದ ಕಲಾವಿದರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಎನ್ ಶೇಖರ್, ಅಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಉಮ್ಮಡಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.




