ಕುಡಿಯುವ ನೀರಿಗಾಗಿ ಆಗ್ರಹಿಸಿ ಮೇ 17 ರಂದು ಕೆಹೆಚ್ಬಿ ಮಹರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಅಧ್ಯಕ್ಷ ಬಿ.ಎಸ್.ಹರೀಶ್ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ಮಂಡ್ಯ ನಗರದ ಸರ್.ವಿ.ಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾವಣೆಗೊಂಡು, ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಬಡಾವಣೆ ನಿರ್ಮಾಣವಾಗಿ 20 ವರ್ಷಗಳು ಆಗಿವೆ. ನಗರಸಭೆಗೆ ಹಸ್ತಾಂತರವಾಗಿ 5 ವರ್ಷ ಕಳೆದಿದೆ. ಆದರೂ ಇಲ್ಲಿನ ನಿವಾಸಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸುವ ಕೆಲಸವಾಗಿಲ್ಲ. ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಹರಿಹಾಯ್ದರು.
ಕೆ.ಆರ್.ಎಸ್ ಜಲಾಶಯದಿಂದ ಬೆಂಗಳೂರಿಗೆ ನಿತ್ಯ ನೀರು ಪೂರೈಸಲಾಗುತ್ತಿದೆ. 5ನೇ ಹಂತ ಪೂರ್ಣಗೊಳಿಸಿ 6ನೇ ಹಂತದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಕೆಹೆಚ್ಬಿ ಬಡಾವಣೆಗೆ ನೀರು ಪೂರೈಸಲು ಯಾವ ಜನಪ್ರತಿನಿಧಿಯೂ ಆಸಕ್ತಿ ತೋರುತ್ತಿಲ್ಲ. ಇದರಿಂದ ಬಡವಾಣೆ ಜನತೆ ಕೊಳವೆ ಬಾವಿ ನೀರನ್ನೇ ಆಶ್ರಯಿಸಬೇಕಿದೆ. ಈ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತಿವೆ ಎಂದು ದೂರಿದರು.
ಮಂಡ್ಯ ನಗರದ ಕೆ ಎಚ್ ಬಿ ಮಹಾರಾಜನಗರ ಬಡಾವಣೆಯಲ್ಲಿ ಕುಡಿಯುವ ಕಾವೇರಿ ನೀರು ಸೇರಿದಂತೆ ಯಾವುದೇ ಮೂಲಸೌಲಭ್ಯವಿಲ್ಲದೆ ವಂಚಿತರಾಗಿದ್ದೇವೆ. ಬಡಾವಣೆಯಲ್ಲಿ ಸುಮಾರು 500 ಕುಟುಂಬಗಳು ವಾಸ ಮಾಡುತ್ತಿದ್ದು, ಬಡಾವಣೆಗೆ ಕುಡಿಯುವ ಕಾವೇರಿ ನೀರು, ಸಮರ್ಪಕ ಒಳಚರಂಡಿ, ಬೀದಿ ದೀಪಗಳು, ರಸ್ತೆಗಳಿಲ್ಲ. ಈ ಎಲ್ಲಾ ಅನಾನೂಕೂಲದಿಂದ ಬಡಾವಣೆ ಜನತೆ ಹೈರಾಣಾಗಿದ್ದಾರೆ ಎಂದರು.
ಕಾರ್ಯದರ್ಶಿ ಅಶೋಕ್ ಮಾತನಾಡಿ, ಬಡಾವಣೆ ನಿರ್ಮಾಣವಾಗಿ ಸುಮಾರು 20 ಕಳೆದಿವೆ. ಬಡಾವಣೆಯಲ್ಲಿ ಬೃಹತ್ ಗಾತ್ರದ ಟ್ಯಾಂಕ್ ನಿರ್ಮಾಣಗೊಂಡು, ಈ ಟ್ಯಾಂಕ್ ಗೆ 2016 ರಲ್ಲಿ ಕಾವೇರಿ ನೀರು ಬಂದಿದೆ. ಆದರೆ ಈ ವರೆಗೂ ಬಡಾವಣೆಯಲ್ಲಿರುವ ಮನೆಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಪೈಪ್ ಲೈನ್ ಗಳನ್ನು ದುರಸ್ತಿ ಮಾಡದೆ ಕಾವೇರಿ ನೀರು ಮನೆಗಳಿಗೆ ಪೂರೈಕೆಯಾಗಿಲ್ಲ ಎಂದರು.
೨೦೦೯ರಲ್ಲಿ ಕರ್ನಾಟಕ ಗೃಹಮಂಡಳಿ ಅವರು ಜಲಮಂಡಳಿಗೆ ಸುಮಾರು 87 ಲಕ್ಷ ರೂ.ಗಳನ್ನು ಪಾವತಿಸಿದ್ದೇವೆ ಎಂದು ಗೃಹಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸಹ ಜಲಮಂಡಳಿ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಕಾಲ ದೂಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿರುವ ಒಳ ಚರಂಡಿ ಸಹ ಸಮರ್ಪಕವಾಗಿಲ್ಲದ ಕಾರಣ, ಒಳಚರಂಡಿ ನೀರು ಅಲ್ಲಲ್ಲಿ ಸಂಗ್ರಹಗೊAಡು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿದೆ. ಇದರಿಂದ ಬಡಾವಣೆಯ ನಿವಾಸಿಗಳ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ. ಬಡಾವಣೆಯನ್ನು ಕೆಹೆಚ್ ಬಿ ಅವರು 2019 ಅಕ್ಟೋಬರ್ 30 ನಗರಸಭೆಗೆ ಹಸ್ತಾಂತರಿಸಿದರು, ಈ ವೇಳೆ ಬಡಾವಣೆಯ ನಿರ್ವಹಣೆಗಾಗಿ 5.5 ಕೋಟಿ ಹಣವನ್ನು ನಗರಸಭೆಗೆ ನೀಡಿತ್ತು. 4.46 ಕೋಟಿ ರೂ. ವೆಚ್ಚದಲ್ಲಿ ಕೆಲವೇ ಕೆಲವು ರಸ್ತೆಗಳ ಕಾಮಗಾರಿ ಮಾಡಿದ್ದಾರೆ, ಅದನ್ನು ಹೊರತುಪಡಿಸಿದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಹೇಳಿದರು.
ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಿದದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸಿ.ಶ್ರೀಕಾಂತ್, ಉಪಾಧ್ಯಕ್ಷ ಪುಟ್ಟಸ್ವಾಮಿ, ನಿರ್ದೇಶಕರಾದ ಡಿ.ಪಿ.ಧನಂಜಯ್, ಪುಟ್ಟಯ್ಯ ಹಾಗೂ ಬಿ.ಜೆ.ಸೋಮಶೇಖರ್ ಹಾಜರಿದ್ದರು.




