Thursday, November 19, 2026

ಪ್ರಾಯೋಗಿಕ ಆವೃತ್ತಿ

ಕಂದಾಯ ಇಲಾಖೆ ಸುಧಾರಣೆಗೆ ‘ಭೂ ಗ್ಯಾರಂಟಿ’ ಜಾರಿ : ಕಶ್ಯಪ್

ರಾಜ್ಯದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳ ಹೊರತಾಗಿ ಕಂದಾಯ ಸೇವೆಗಳಲ್ಲಿ ಸುಧಾರಣೆ ತರಲು ಆರನೇಯದಾಗಿ ಭೂ ಗ್ಯಾರಂಟಿಯನ್ನು ಪರಿಚಯಿಸಲಾಗುತ್ತಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಕಶ್ಯಪ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಭೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತರು ಇನ್ನು ಕಂದಾಯ ಇಲಾಖೆಗೆ ಅಲೆಯುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕುಳಿತು, ಅಥವಾ ಕೈಬೆರಳಂಚಿನಲ್ಲಿ ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದರು.

ಸರ್ಕಾರ ಆರಂಭವಾಗಿ ಎರಡು ವರ್ಷ ತುಂಬುವ ಹಿನ್ನಲೆ ಮೇ 20ರಂದು ಸಮರ್ಪಣಾ ಸಂಕಲ್ಪ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ಏರ್ಪಡಿಸಲಾಗಿದ್ದು, ಅಂದು 1,11,111 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸುತ್ತಿದ್ದು, ಸರ್ಕಾರ ಬಂದ 770 ದಿನಗಳಲ್ಲಿಯೇ ಈ ಸಾಧನೆ ಮಾಡಿದ ಮೊದಲ ಸರ್ಕಾರ ನಮ್ಮದಾಗಿದೆ ಎಂದರು.

ಸರ್ಕಾರ ಗ್ಯಾರಂಟಿ ಯೋಜನೆ ಘೋಷಿಸಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಇದಕ್ಕಾಗಿ 52 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಇದೀಗ ಭೂ ಗ್ಯಾರಂಟಿ ಮೂಲಕ ಬೆಳೆ ನಷ್ಟ, ಪೋಡಿ ಮುಕ್ತ ಗ್ರಾಮ, ಸಾರ್ವಜನಿಕ ಆಸ್ತಿ ಸಂರಕ್ಷಣೆ, ತ್ವರಿತ ಮತ್ತು ಪಾರದರ್ಶಕ ಭೂ ನ್ಯಾಯ ಸೇರಿದಂತೆ ಹತ್ತು ಹಲವು ಕಂದಾಯ ಸಂಬಂಧಿತ ಸೇವೆಗಳನ್ನು ಸರಳೀಕರಣ ಮಾಡಿದ್ದು, ಮನೆಯಲ್ಲೇ ಕುಳಿದು ಮದುವೆ ನೋಂದಣಿಯನ್ನು ಮಾಡುವ ಕೆಲಸ ಕಾರ್ಯಗತ ಮಾಡಲಾಗುವುದು, ಸರ್ಕಾರದ ಅವಧಿಯೊಳಗೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿನ ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಯೋಜನೆ, ಸಣ್ಣ ನೀರಾವರಿ ಇಲಾಖೆಯಿಂದ ಟ್ರೀಟೆಡ್ ವಾಟರ್ ಮೂಲಕ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಒದಗಿಸಲಾಗುವುದು, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನ 88 ಕೆರೆಗಳನ್ನು ತುಂಬಿಸಲು ಯೋಜನೆ, ರಾಜ್ಯಾದ್ಯಂತ 66 ಮೊರಾರ್ಜಿ ದೇಸಾಯಿ ಶಾಲೆಗಳನ್ನು ತೆರೆಯಲು ಯೋಜನೆ, ಇನ್ವೆಸ್ಟ್ ಕರ್ನಾಟಕ ಮೂಲಕ 6,57,600 ಕೋಟಿ ಬಂಡವಾಳ ಆಕರ್ಷಿಸಿದ್ದು, ವಿದೇಶಿ ರಾಷ್ಟ್ರಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ವಕ್ತಾರ ಸಿ.ಎಂ.ದ್ಯಾವಪ್ಪ, ಪ್ರದೀಪ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ