Sunday, November 22, 2026

ಪ್ರಾಯೋಗಿಕ ಆವೃತ್ತಿ

ಅನ್ನದಾನಿ ಮೇಲಿನ ಆರೋಪ ಸತ್ಯಕ್ಕೆ ದೂರ : ಸ್ಪಷ್ಟನೆ

ಮಾಜಿ ಶಾಸಕ ಅನ್ನದಾನಿಯವರು 2 ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ನಾಲ್ಕು ಸಾವಿರ ಕೋಟಿಗೂ ಮಿಗಿಲಾದ ಅನುದಾನದಲ್ಲಿ ಮಳವಳ್ಳಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದು, ಅಭಿವೃದ್ದಿ ಶೂನ್ಯವೆಂಬ ಕಾಂಗ್ರೆಸ್ ಮುಖಂಡರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಳವಳ್ಳಿ ತಾಲ್ಲೂಕಿನ ಜೆಡಿಎಸ್ ಮುಖಂಡರು ಸ್ಪಷ್ಟನೆ ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಾಂತರಾಜು, ಶಾಸಕ ನರೇಂದ್ರಸ್ವಾಮಿ ಅವರು ತಾವೊಬ್ಬರೇ ಅಭಿವೃದ್ದಿಯ ಹರಿಕಾರರೆಂದು ಹೇಳಿಕೊಳ್ಳುತ್ತಾರೆ. ಪ್ರತಿಯೊಬ್ಬ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ಇಚ್ಚಾಶಕ್ತಿ ಹೊಂದಿರುತ್ತಾರೆ, ಇದನ್ನು ಶಾಸಕರು ಅರಿಯಬೇಕೆಂದರು.

ಮಳವಳ್ಳಿ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ, ಕನಕ ಭವನ, ಬಸವ ಭವನ ಹಾಗೂ ಬಾಬು ಜಗಜೀವನ ರಾಂ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಹಾಲಿ ಶಾಸಕರು ಇಚ್ಚಾಶಕ್ತಿ ಮೆರೆದು ಅಪೂರ್ಣಗೊಂಡಿರುವ ಭವನಗಳನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಶಾಸಕ ನರೇಂದ್ರಸ್ವಾಮಿ ಅವರು ಎಸ್ಸಿ, ಎಸ್ಟಿ ಸದನ ಸಮಿತಿಯ ಅಧ್ಯಕ್ಷರಾಗಿದ್ದು ಮೈಸೂರು ತಾಲ್ಲೂಕಿನ ವಾಜಮಂಗಲದಲ್ಲಿ ಅಂಬೇಡ್ಕರ್ ಫಲಕಕ್ಕೆ ಅವಮಾನವೆಸಗಿರುವ ದುಷ್ಕರ್ಮಿಗಳ ಬಗ್ಗೆ ಚಕಾರವೆತ್ತದೇ ಮೌನವಾಗಿರುವ ಗುಟ್ಟೇನು ಎಂದು ಪ್ರಶ್ನಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷ ದೊಡ್ಡಯ್ಯ ಅವರ ಪತ್ನಿ ಜೆಡಿಎಸ್ ಪಕ್ಷದ ಪುರಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಪಡೆಸಾಲೆಯಲ್ಲಿರುವ ದೊಡ್ಡಯ್ಯ ಅವರಿಗೆ ನೈತಿಕತೆ ಇದ್ದರೆ ತಮ್ಮ ಪತ್ನಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ ಎಂದು ಸವಾಲು ಹಾಕಿದರು.

ಮುಖಂಡ ಸದಾನಂದ ಮಾತನಾಡಿ, ಬಿ.ಜಿ.ಪುರ ಬರಡು ಭೂಮಿಯಾಗಿತ್ತು. ಆ ಪ್ರದೇಶಕ್ಕೆ ನಾನು ನೀರಾವರಿ ಯೋಜನೆಯನ್ನು ಸಾಕಾರಗೊಳಿಸಿದ್ದೇನೆಂದು ಶಾಸಕ ನರೇಂದ್ರಸ್ವಾಮಿ ಹೇಳಿಕೊಳ್ಳುತ್ತಾರೆ. ಆ ಭಾಗದ ರೈತರಾದ ನಾವು ಈಗಾಗಲೇ ಹನಿ ನೀರಾವರಿ ಯೋಜನೆಗೆ ಒಗ್ಗಿಕೊಂಡಿದ್ದು, ಕುಸಿದಿರುವ ತರಕಾರಿ ಬೆಳೆಗೆ ಸೂಕ್ತ ಬೆಲೆ ಕೊಡಿಸಲು ಶಾಸಕರು ಮುಂದಾಗಲಿ ಎಂದರು.

ಮಾಜಿ ಶಾಸಕ ಅನ್ನದಾನಿ ಅವರ ಕಾಲದಲ್ಲಿ ದೊಡ್ಡಭೂವಳ್ಳಿ ಗ್ರಾಮದಲ್ಲಿ ಆರಂಭವಾಗಿರುವ ಆಸ್ಪತ್ರೆ, ಆ ಭಾಗದ ಜನ ಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಕಾಂಗ್ರೆಸ್ಸಿಗರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ಜಿ.ಪಂ.ಮಾಜಿ ಸದಸ್ಯ ಹನುಮಂತು ಮಾತನಾಡಿ, ಶಾಸಕ ನರೇಂದ್ರಸ್ವಾಮಿ ಅವರು ಎಲ್ಲರನ್ನು ಸಮಾನವಾಗಿ ಕಾಣಬೇಕು. ದೌರ್ಜನ್ಯದಿಂದ ಮಾತನಾಡುವುದನ್ನು ಬಿಟ್ಟು ತಾಲ್ಲೂಕಿನ ಮತ್ತಷ್ಟು ಅಭಿವೃದ್ದಿಗೆ ಶ್ರಮಿಸಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಯುವ ಘಟಕದ ಆಧ್ಯಕ್ಷ ಶ್ರೀಧರ್ ಮಾತನಾಡಿ, ಮುಖಂಡ ಸಿದ್ದಾಚಾರಿ, ಜಿಲ್ಲಾ ಎಸ್ಸಿ,ಎಸ್ಟಿ ಘಟಕದ ಅಧ್ಯಕ್ಷ ಸಾತನೂರು ಜಯರಾಂ, ಕುಂತೂರು ಸೋಮಣ್ಣ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ