Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮನ್ ಮುಲ್ ವರಿಷ್ಟರ ಚುನಾವಣೆ : ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯದ ತಡೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ(ಮನ್‌ಮುಲ್) ಆಡಳಿತ ಮಂಡಳಿ ವರಿಷ್ಟ ಸ್ಥಾನಗಳಿಗೆ ಮಂಗಳವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಅಧ್ಯಕ್ಷರಾಗಿ ಹಾಗೂ ಮಳವಳ್ಳಿ ತಾಲ್ಲೂಕಿನ ನಿರ್ದೇಶಕ ಬುಳ್ಳಿ ಕೆಂಪನದೊಡ್ಡಿಯ ಡಿ.ಕೃಷ್ಣೇಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಆದರೆ ಚುನಾವಣಾ ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಚುನಾವಣೆ ನಡೆದರೂ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಸುವಂತಿಲ್ಲ.

ಏನಿದು ಪ್ರಕರಣ ?

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಮಳವಳ್ಳಿ ತಾಲ್ಲೂಕಿನಿಂದ ಚುನಾಯಿತರಾಗಿರುವ ಡಿ.ಕೃಷ್ಣೇಗೌಡ ಅವರ ಆಯ್ಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದು, ಜೂ.4ರಂದು ಅಂತಿಮ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಅಧಿಕೃತ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ಬಿದ್ದಿದೆ.

ಚುನಾವಣಾಧಿಕಾರಿಗಳು ವರಿಷ್ಟರ ಚುನಾವಣೆಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಅಧಿಕೃತ ಫಲಿತಾಂಶ ಘೋಷಣೆ ಮಾಡಲು ಸಾಧ್ಯವಿಲ್ಲದಂತಾಗಿದೆ.

Oplus_131072

ಯು.ಸಿ.ಶಿವಕುಮಾರ್ ಗೆ ಒಲಿಯಲಿದೆ ಪದವಿ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ(ಮನ್‌ಮುಲ್) ಆಡಳಿತ ಮಂಡಳಿಗೆ ಮಂಡ್ಯ ತಾಲ್ಲೂಕಿನಿಂದ ಸತತ ಮೂರನೇ ಬಾರಿಗೆ ನಿರ್ದೇಶಕರಾಗಿರುವ ಸಹಕಾರಿ ಕ್ಷೇತ್ರದ ಹಿರಿಯ ಮುಖಂಡ ಉಮ್ಮಡಹಳ್ಳಿ ಶಿವಪ್ಪ ಸೇರಿದಂತೆ ಹಲವು ಆಕಾಂಕ್ಷಿತರು ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಮನ್ ಮುಲ್ ನಿರ್ದೇಶಕರ ಒಮ್ಮತದ ಅಭ್ಯರ್ಥಿಯಾಗಿ ಶಿವಪ್ಪ ಅವರನ್ನು ‘ಕೈ’ ಪಾಳಯ ಆಯ್ಕೆ ಮಾಡಿ, ಚುನಾವಣಾ ಪ್ರಕ್ರಿಯೆಯಲ್ಲೂ ಶಿವಪ್ಪ ಹೊರತುಪಡಿಸಿ ಇತರರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಶಿವಪ್ಪ ಆಯ್ಕೆ ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಕುಳಿತು ಸುಧೀರ್ಘವಾಗಿ ಚರ್ಚಿಸಿ ಅಪಸ್ವರಕ್ಕೆ ಅವಕಾಶ ನೀಡದಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿತರ ಸಭೆ ನಡೆಸಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಯು.ಸಿ.ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಅವರನ್ನು ಮೊದಲ ಅವಧಿಗೆ ಅಧ್ಯಕ್ಷ ಎಂದು ತೀರ್ಮಾನಿಸಿದ್ದಾರೆ. ಹಾಗೆಯೇ ಮಳವಳ್ಳಿಯ ಡಿ.ಕೃಷ್ಣೇಗೌಡ ಉಪಾಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಬಿ.ಬೋರೇಗೌಡ, ಎನ್.ಅಪ್ಪಾಜಿಗೌಡ, ಎಂ.ಕೆ.ಹರೀಶ್‌ಬಾಬು ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆ ಆಗಿರುವ ಯು.ಸಿ.ಶಿವಕುಮಾರ್‌ಗೆ ಅವಕಾಶ ನೀಡುವಂತೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಪ್ರಬಲವಾಗಿ ಪ್ರತಿಪಾದಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

17 ಜನರಿಗೆ ಮತದಾನದ ಹಕ್ಕು

ಮತದಾನ ಪ್ರಕಿಯೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಕಾರ್ಯನಿರ್ವಹಿಸಿದರು. 12 ಮಂದಿ ಚುನಾಯಿತ ನಿರ್ದೇಶಕರು, ಓರ್ವ ನಾಮ ನಿರ್ದೇಶಿತ ನಿರ್ದೇಶಕ ಹಾಗೂ ಕೆ.ಎಂ.ಎಫ್ ಮತ್ತು ಎನ್.ಡಿ.ಬಿ.ಎ ಪ್ರತಿನಿಧಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಹಾಗೂ ಸಹಕಾರ ಇಲಾಖೆ ಉಪ ನಿಬಂಧಕ ಸೇರಿ ಒಟ್ಟು 17 ಮಂದಿ ಮತದಾನದ ಹಕ್ಕು ಹೊಂದಿದ್ದರು.

ಮಳವಳ್ಳಿಗೆ ಒಲಿದ ಉಪಾಧ್ಯಕ್ಷ ಪಟ್ಟ ?

ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಳವಳ್ಳಿ ತಾಲ್ಲೂಕನ್ನು ಸತತ 2 ಬಾರಿ ಪ್ರತಿನಿಧಿಸಿದ್ದ ಜೆಡಿಎಸ್ ಮುಖಂಡ ವಿ.ಎಂ.ವಿಶ್ವನಾಥ್ ಒಂದು ಅವಧಿಗೆ ಕೆಎಂಎಫ್ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಕೃಷ್ಣೇಗೌಡ ಅವರು ಪ್ರಥಮ ಪ್ರಯತ್ನದಲ್ಲೇ ಗೆಲುವು ದಾಖಲಿಸಿಕೊಳ್ಳುವ ಮೂಲಕ ವಿಶ್ವನಾಥ್ ಹ್ಯಾಟ್ರಿಕ್ ಗೆಲುವಿಗೆ ತಡೆಯೊಡ್ಡಿದ್ದರು.

ಇಂದು ನಡೆದ ಮನ್ ಮುಲ್ ವರಿಷ್ಟ ಚುನಾವಣೆಯಲ್ಲಿ ಡಿ.ಕೃಷ್ಣೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಎದುರಾಳಿಯಾಗಿ ಜಾ.ದಳ ಎಂ.ಎಸ್.ರಘುನಂದನ್ ಕಣಕ್ಕಿಳಿದ್ದು, 17 ಸದಸ್ಯ ಬಲದ ಪೈಕಿ ಅತೀ ಹೆಚ್ಚು ಸದಸ್ಯ ಬಲವುಳ್ಳ ಕಾಂಗ್ರೆಸ್ಸಿಗರಿಗೆ ಅಧಿಕಾರ ದೊರೆಯುವ ಅವಕಾಶ ಹೆಚ್ಚಿದ್ದು, ಮಳವಳ್ಳಿಯ ಡಿ.ಕೃಷ್ಣೇಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ