Tuesday, November 17, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | 92 ಕೋಟಿ ವೆಚ್ಚದ ಕಾವೇರಿ ಆರತಿ ಅನಿವಾರ್ಯವೇ ?

ಶಾಸಕ ರವಿಕುಮಾರ್ ರವರೇ ನಿಮ್ಮನ್ನು ಶಾಸಕ ಸ್ಥಾನದ ಅಧಿಕಾರಕ್ಕೆ ತರಲು ರೈತ ಸಂಘಟನೆಗಳು ಸೇರಿದಂತೆ ಇತರ ಹಲವು ಸಂಘಟನೆಗಳು ಹಾಗೂ ಜನರು ಕೂಡ ಶ್ರಮಿಸಿ ಮತ ಹಾಕಿದ್ದಾರೆ. ಮತ ಹಾಕಿ ಅಧಿಕಾರಕ್ಕೆ ತಂದಿರುವುದು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಿ ರೈತ, ಕಾರ್ಮಿಕ, ಮಹಿಳಾ ಹಾಗೂ ಹಿಂದುಳಿದ ಸಮುದಾಯಗಳ ಹಿತಕ್ಕಾಗಿ ದುಡಿಯಲಿ ಎಂದು‌. ಮಂಡ್ಯದ ಅಭಿವೃದ್ಧಿಗೆ ಕಾವೇರಿ ಆರತಿ ,ಅಮ್ಯೂಸ್ ಮೆಂಟ್ ಪಾರ್ಕ್ ಮಾಡಿಯೇ ಅಭಿವೃದ್ಧಿ ಮಾಡಬಹುದೆಂಬ ಭ್ರಮೆಯಿಂದಲ್ಲ ಅಲ್ಲವೇ ?

ಮಂಡ್ಯ ಜಿಲ್ಲೆಯ ಸಮಸ್ಯೆಗಳು ನೂರಾರಿವೆ. ಅದರ ಬಗೆಗೂ ಡಿ.ಕೆ. ಶಿವಕುಮಾರ್ ಅವರಿಗೆ ಚರ್ಚಿಸಲು ಜನಸಾಮಾನ್ಯರು ಮತ್ತು ಸಂಘಟಕರೊಂದಿಗೆ ಬಹಿರಂಗ ಸಭೆ ಕರೆಯಿರಿ. ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಕಾರ್ಮಿಕರಿಗೆ ಸಂಬಂಧಿಸಿದ, ಭೂಮಿ ಮತ್ತು ವಸತಿ ಹಕ್ಕುಪತ್ರದ ಸೌಕರ್ಯ ಕನಿಷ್ಟ ಮೂಲಭೂತ ಸೌಲಭ್ಯ ಹೀಗೆ ಹಲವು ಕೆಲಸಗಳು ರಾಶಿ ಬಿದ್ದಿವೆ. ಇದರ ಬಗ್ಗೆ ಗಮನ ಹರಿಸಿ ಕೆಲಸ ಮಾಡಿ.

ಕಾವೇರಿ ಆರತಿಯನ್ನು ಮಾಡಬಾರದು ಅಥವಾ ಅಮ್ಯೂಸ್ ಮೆಂಟ್ ಪಾರ್ಕ್ ನ ನಿರ್ಮಾಣ ಮಾಡಬಾರದು ಎಂದು ಎಲ್ಲದಕ್ಕೂ ಅಡ್ಡಿ ಉಂಟು ಮಾಡುತ್ತಾರೆ. ಇದರಿಂದ ಈ ರೈತ ಸಂಘದವರಿಗೇನು ಸಮಸ್ಯೆ ಎಂಬ ಅಹಮ್ಮಿನ ಮಾತುಗಳನ್ನು ನಿಲ್ಲಿಸಿ. ಕಾವೇರಿ ಆರತಿಯಿಂದ 92 ಕೋಟಿ ಜನರ ತೆರಿಗೆಯ ಹಣ ನೀರಿನಲ್ಲಿ ಹೋಮವಾಗಲಿದೆ. ಅಲ್ಲದೇ ಜನರಲ್ಲಿ ಮತ್ತಷ್ಟು ಮೂಢನಂಬಿಕೆ ತುಂಬುವುದರ ಜೊತೆಗೆ ನೀರನ್ನು ಮತ್ತಷ್ಟು ಕಲುಷಿತಗೊಳಿಸುವ ಕೆಲಸವಾಗುತ್ತದೆ, ವಿನಹ ಮತ್ತೇನು ಅಲ್ಲ ಅಲ್ಲವೇ ?  ನಮ್ಮ ಜನರ ದೈವಭಕ್ತಿಯನ್ನು ಬಂಡವಾಳ ಮಾಡಿಕೊಂಡು ಈ ರೀತಿ ಅರ್ಥವಿಲ್ಲದ ಆಚರಣೆ ಮಾಡಿಕೊಂಡು ಜನರನ್ನು ಆಕರ್ಷಿಸಲು, ಅವರ ತೆರಿಗೆ ದುಡ್ಡನ್ನೇ ವ್ಯರ್ಥ ಖರ್ಚು ಮಾಡುವ ಬದಲು, ಅದೇ ಹಣದಿಂದ ಮತ್ತಷ್ಟು ಕೆರೆ-ಕಟ್ಟೆಗಳ ನಿರ್ಮಾಣ. ರೈತರಿಗೆ ನೆರವಾಗುವಂತೆ ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ, ಬೆಳೆಗಳನ್ನು ಹಣ್ಣು ತರಕಾರಿಗಳನ್ನು ಸಂರಕ್ಷಿಸಲು ಪ್ರತಿ ತಾಲ್ಲೂಕುಗಳಲ್ಲಿಯೂ ಸಂಸ್ಕರಣ ಘಟಕಗಳನ್ನು ತೆರೆಯುವುದು ಉತ್ತಮವಲ್ಲವೇ ?

KRS ಆಣೆಕಟ್ಟೆಯ ಬಳಿ ಗಣಿಗಾರಿಕೆಗೆ ಅವಕಾಶ ಕೊಡಬಾರದೆಂಬ ಹೋರಾಟ ಇದರಿಂದಾಗಿ KRS ಅಣೆಕಟ್ಟಿಗೆ ಆಗಬಹುದಾದ ಅಪಾಯಗಳ ಕುರಿತಾದ ಅಂದಾಜು ಮತ್ತು ಅಣೆಕಟ್ಟೆಯನ್ನು ಉಳಿಸಿಕೊಳ್ಳಲು ಇರುವ ಕಾಳಜಿ ರೈತ ಸಂಘಟನೆಗಳ ಮತ್ತು ಇತರೆ ಸಂಘಟನೆಗಳ ಉದ್ದೇಶವಾಗಿದೆ. ಹಾಗೆಯೇ ಈಗ ಪ್ರಾರಂಭಿಸಿಬೇಕೆಂದಿರುವ ಅಮ್ಯೂಸ್ ಮೆಂಟ್ ಪಾರ್ಕ್ ನಿಂದಾಗಿಯೂ ಅಣೆಕಟ್ಟಿನ ಸುತ್ತ ಒಂದು ಕಮರ್ಷಿಯಲ್ ವಾತಾವರಣ ಉಂಟಾಗಿ ಪ್ರವಾಸಿಗರನ್ನು ಸೆಳೆದು, ಅದರಿಂದ ಮಾಡಿಕೊಳ್ಳಬಹುದಾದ ಲಾಭದ ಬಗೆ ಮಾತ್ರ ಸರ್ಕಾರ ಯೋಚಿಸುತ್ತಿದೆ.

ಆದರೆ ರೈತ ಸಂಘಟನೆಗಳು ಇದರಿಂದ ಉಂಟಾಗಬಹುದಾದ ಕಲುಷಿತ ವಾತವರಣ, ಅಣೆಕಟ್ಟಿನ ಸಂರಕ್ಷಣೆ ನೀರಿನ ಸರಿಯಾದ ಸದ್ಬಳಕೆ, ಅದನ್ನು ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ರೈತಾಪಿ ಕುಟುಂಬಗಳು, ಅಷ್ಟೇ ಯಾಕೆ ಇವತ್ತು ಬೆಂಗಳೂರಿನಂತಹ ಸಿಲಿಕಾನ್ ಸಿಟಿಗೂ ಕೂಡ ಅಲ್ಲಿನ ಕೈಗಾರಿಕೆ ಮತ್ತು ಕಾರ್ಖಾನೆಗಳ ಕೆಲಸಗಳಿಗೂ ಇಲ್ಲಿ KRS ಅಣೆಕಟ್ಟಿನ ನೀರಿನ ಪೂರೈಕೆಯೇ ಅಗತ್ಯವಾಗಿದೆ. ಇಂತಹ ಅಣೆಕಟ್ಟನ್ನು ಜೋಪಾನ ಮಾಡಿ ಸಂರಕ್ಷಿಸಿಸಬೇಕು ಎಂಬ ಮುಂದಾಲೋಚನೆ ಇದೆ. ಆದರೆ ಇಲ್ಲಿ ಸರ್ಕಾರ ವಿನ್ಯಾಸದ ಹೆಸರಿನಲ್ಲಿ ವ್ಯಾಪಾರ ಮಾಡುವ ಬುದ್ದಿವಂತಿಕೆನ್ನು ತೋರುತ್ತಿದೆಯೇ ವಿನಹ ಮುಂದಕ್ಕೆ ಇದರಿಂದ ಆಗಬಹುದಾದ ಅನಾಹುತಗಳು ಉಂಟಾಗಬಹುದಾದ ಕಲುಷಿತ ವಾತವರಣ, ಅಣೆಕಟ್ಟಿನ ಸಂರಕ್ಷಣೆ ಅದನ್ನು ನಂಬಿ ಬದುಕುತ್ತಿರುವ ಅದರ ಸುತ್ತ ಮುತ್ತಲಿನ ರೈತಾಪಿ ಕುಟುಂಬದ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದಿಲ್ಲ.

ಶಾಸಕ ರವಿಕುಮಾರ್ ಅವರೇ ದೇಶಕ್ಕೆ ಅನ್ನಕೊಡುವ ರೈತರಿಗೆ ಒಳಿತು ಕೆಡುಕುಗಳ ಅನುಭವ ಇರುತ್ತದೆ. ರೈತ ಸಂಘದ ಹಿರಿಯ ನಾಯಕರು ಮಾಡಿರುವ ಸೇವೆಯಷ್ಟು ಬಹುಶಃ ನಿಮಗೆ ವಯಸ್ಸಾಗಿರುವುದಿಲ್ಲ. ಹಾಗಾಗಿ ರೈತಸಂಘದವರಿಗೇನು ಸಮಸ್ಯೆ ಎಂಬ ಅಹಮ್ಮಿನ ಮಾತುಗಳನ್ನು ಬಿಡಿ. ಮಂಡ್ಯ ಜಿಲ್ಲೆಯಲ್ಲಿ ಒಂದು ಮುಖ್ಯ ತೀರ್ಮಾನ ತೆಗೆದುಕೊಳ್ಳಬೇಕಾದರೆ ಮತ ಹಾಕಿ ಗೆಲ್ಲಿಸಿದ ಜನರ ಅಭಿಪ್ರಾಯವು ಅಗತ್ಯ.

ಇಲ್ಲಿ ಜನರ ಹಿತಕ್ಕಾಗಿ ದುಡಿಯಲು ನಿಮಗೆ ಮತ ಹಾಕಿ ಅಧಿಕಾರ ಕೊಟ್ಟು ಜನರ ತೆರಿಗೆ ದುಡ್ಡಿನಲ್ಲಿ ನಿಮಗೆ ಸಂಬಳ ಕೊಡುತ್ತಿರುವುದು. ಇಲ್ಲಿ ನೀವುಗಳೇ ಸುಪ್ರೀಂ ಅಲ್ಲ ಜಿಲ್ಲೆಯ ಜನತೆಯ ತೀರ್ಮಾನವು ಬಹಳ ಮುಖ್ಯ.

ತಾವು ಕೂಡಾ ಧರ್ಮ ಭಾವನಾತ್ಮಕ ಎಂಬ ವಿಚಾರ ಇಟ್ಟು ಕೊಂಡು ರಾಜಕೀಯ ಮಾಡುವುದೇ ಸರಿಯಾದದ್ದಲ್ಲ, ಹಾಗಾಗಿ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಇಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ಹಿಂದುಳಿದ ವರ್ಗದವರ ಏಳಿಗೆಗಾಗಿ ದುಡಿಯುತ್ತಿರುವ ಪ್ರತಿಯೊಂದು ಸಂಘಟನೆಗಳನ್ನು ಗೌರವಿಸುವ ಮತ್ತು ಅವರ ವಿಚಾರಗಳನ್ನು ಆಲಿಸುವ ಕೆಲಸಕ್ಕೆ ಮುಂದಾಗಬೇಕು.

ಪೂರ್ಣಿಮ, ಕರ್ನಾಟಕ ಜನಶಕ್ತಿ ಮತ್ತು ಎದ್ದೇಳು ಕರ್ನಾಟಕ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ